ದಲಿತ ಸಮುದಾಯದ ಬಸವಲಿಂಗಪ್ಪ,ರಾಚಯ್ಯ ನರಸಿಂಹಮೂರ್ತಿ,ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿಯಾಗುತ್ತಾರೆ ಎನ್ನುವ ಭಾವನೆ ಇತ್ತು, ಆದರೆ ಅವರು ಯಾರು ಆಗಲಿಲ್ಲ. ಆದರೆ ಸ್ವಂತ ಕೌಶಲ್ಯ ಮತ್ತು ಶಕ್ತಿಯಿಂದ ರಾಜ್ಯ ರಾಜಕಾರಣದಲ್ಲಿ ಖ್ಯಾತಿ ಪಡೆದಿರುವ ಪ್ರಿಯಾಂಕ್ ಖರ್ಗೆ ಅವರು ದಲಿತ ಸಮುದಾಯದಲ್ಲಿ ಮುಂದೊಂದು ದಿನ ಮುಖ್ಯಮಂತ್ರಿ ಆಗುವ ಅರ್ಹತೆ ಹೊಂದಿದ್ದಾರೆಂದು ಮನ್ ಮುಲ್ ಮಾಜಿ ನಿರ್ದೇಶಕ ಕುಮಾರ್ ಕೊಪ್ಪ ತಿಳಿಸಿದರು.
ಮಂಡ್ಯ ನಗರದ ಪತ್ರಕರ್ತರ ಭವನದಲ್ಲಿ ಮಂಡ್ಯ ಜಿಲ್ಲೆ ಪ್ರಿಯಾಂಕ್ ಖರ್ಗೆ ಅಭಿಮಾನಿಗಳ ಬಳಗದ ವತಿಯಿಂದ ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐ.ಟಿ.ಬಿ.ಟಿ ಸಚಿವರಾದ ಪ್ರಿಯಾಂಕ್ ಖರ್ಗೆರವರ 47ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಕೃಷಿ ಕ್ಷೇತ್ರದಲ್ಲಿ ಅವಿಸ್ಮರಣೀಯವಾದ ಸೇವೆ ಸಲ್ಲಿಸುತ್ತಿರುವ ರೈತ ಮಹಿಳೆಯರಿಗೆ ಸನ್ಮಾನ ಕಾರ್ಯಕ್ರಮ ನೆರವೇರಿಸಿ ಅವರು ಮಾತನಾಡಿದರು.

ಪ್ರಿಯಾಂಕ್ ಖರ್ಗೆ ಅವರು ವಿದ್ಯಾರ್ಥಿ ಜೀವನದಲ್ಲಿ ನಾಯಕತ್ವದ ಗುಣವನ್ನು ಅಳವಡಿಸಿಕೊಂಡು ತನ್ನದೇ ಆದ ಕೌಶಲ್ಯ ಹಾಗೂ ಶಕ್ತಿಯನ್ನು ಬಳಸಿಕೊಂಡು ರಾಜಕೀಯ ಮಾಡುತ್ತಿರುವ ಏಕೈಕ ವ್ಯಕ್ತಿ. ಬೇರೆಲ್ಲ ರಾಜಕಾರಣಿಗಳ ಮಕ್ಕಳು ತಂದೆ ಹೆಸರಿನಲ್ಲಿ ಮೇಲೆ ಬಂದಂತೆ ಪ್ರಿಯಾಂಕ್ ಖರ್ಗೆ ಅವರು ತಾತ,ತಂದೆ ಹೆಸರಿನಲ್ಲಿ ಹೆಸರು ಹೇಳಿ ಮುಂದೆ ಬಂದಿಲ್ಲ ಎಂದು ತಿಳಿಸಿದರು.
ಶಿಕ್ಷಣ ಇಲಾಖೆಗೆ ಗೋವಿಂದೇಗೌಡ, ಕೃಷಿ ಇಲಾಖೆಗೆ ಬೈರೇಗೌಡ, ಕಂದಾಯ ಇಲಾಖೆಗೆ ಬಸವಲಿಂಗಪ್ಪ ಸೇರಿದಂತೆ ಕರ್ನಾಟಕ ರಾಜಕಾರಣದಲ್ಲಿ ಒಂದೊಂದು ಇಲಾಖೆಗೆ ಜೀವ ತುಂಬಿದವರ ರೀತಿ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಖಾತೆಗೆ ಪರಿಪೂರ್ಣವಾಗಿ ಜೀವ ತುಂಬಿದ ವ್ಯಕ್ತಿ ಪ್ರಿಯಾಂಕ್ ಖರ್ಗೆ ಅವರು ಪಾರದರ್ಶಕವಾಗಿ ಭ್ರಷ್ಟಾಚಾರವಿಲ್ಲದೆ ಅನನ್ಯವಾಗಿ ಕೆಲಸ ಮಾಡುತ್ತಿರುವ ವ್ಯಕ್ತಿ ಎಂದು ಹೇಳಿದರು.
ಎದುರಾಳಿಗಳಿಗೆ ಉತ್ತರ ಕೊಡುವ ಚಾಕಚಕ್ಯತೆ ಅವರಲ್ಲಿದೆ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಸೋಮಶೇಖರ್ ಕೆರಗೋಡು ಮಾತನಾಡಿ
ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಹುಟ್ಟುಹಬ್ಬ ಆಚರಣೆ ಮಾಡುತ್ತಿದ್ದಾರೆ ಎಂದು ಹೇಳಿದರು.
ಪ್ರಿಯಾಂಕ್ ಖರ್ಗೆ ಅವರ ಸಂಘಟನಾ ಚತುರತೆ, ಎದುರಾಳಿಗಳಿಗೆ ಉತ್ತರ ಕೊಡುವ ಚಾಕಚಕ್ಯತೆ ಅವರಲ್ಲಿದೆ. ದೇಶವೇ ತಿರುಗಿ ನೋಡುವ ರೀತಿ ಅವರ ಇಲಾಖೆಗಳಲ್ಲಿ ಪ್ರಗತಿ ಮಾಡಿದ್ದಾರೆ. ಮುಂದೊಂದು ದಿನ ದಲಿತ ಸಮುದಾಯದವರು ಮುಖ್ಯ ಮಂತ್ರಿಯಾಗುವ ಬಹುದಿನದ ಕನಸನ್ನು ನನಸು ಮಾಡುವ ಅವಕಾಶ ಇವರಲ್ಲಿ ಇದ್ದು ರಾಜ್ಯದ ಚುಕ್ಕಾಣಿ ಹಿಡಿಯುತ್ತಾರೆ ಎಂದು ಹೇಳಿದರು.

ದಲಿತರು ಪ್ರತಿಪಾದಿಸುವುದು ಈ ದೇಶದ ಸಂವಿಧಾನವನ್ನು. ಆದರೆ ಇತ್ತೀಚಿನ ದಿನಗಳಲ್ಲಿ ದಲಿತ ಯುವಕರು ಸಂವಿಧಾನ ರಕ್ಷಣೆ ಮಾಡುವುದನ್ನು ಬಿಟ್ಟು ಕೋಮುವಾದಿ ಶಕ್ತಿಗಳ ಜೊತೆ ಕೈಜೋಡಿಸುವ ಕೆಲಸ ಮಾಡುತ್ತಿರುವುದು ಅಪಾಯ. ಸಂವಿಧಾನ ಅಪಾಯದಲ್ಲಿದೆ ಅದಕ್ಕಾಗಿ ದಲಿತ ಯುವಕರನ್ನು ಸರಿದಾರಿಗೆ ತರಬೇಕು ಎನ್ನುವ ನಿಟ್ಟಿನಲ್ಲಿ ಪ್ರಿಯಾಂಕ್ ಖರ್ಗೆ ಅವರು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಪ್ರಿಯಾಂಕ್ ಖರ್ಗೆ ಹೆಸರಿನಲ್ಲಿ ಸಮಾಜಮುಖಿ ಕಾರ್ಯಕ್ರಮ
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಂಡಹಳ್ಳಿ ಮಂಜುನಾಥ್ ಮಾತನಾಡಿ ಕಳೆದ ಹಲವಾರು ವರ್ಷಗಳಿಂದ ಮಂಡ್ಯದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಹುಟ್ಟು ಹಬ್ಬದ ಅಂಗವಾಗಿ ಕಂಬಳಿ ವಿತರಣೆ, ಪೌರಕಾರ್ಮಿಕರಿಗೆ ಸೀರೆ ವಿತರಣೆ ಸೇರಿದಂತೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿಕೊಂಡು ಹುಟ್ಟುಹಬ್ಬ ಆಚರಿಸಿಕೊಂಡು ಬರುತ್ತಿದ್ದೇವೆ ಎಂದು ಹೇಳಿದರು.
ಯುವ ಜನತೆ ವೈಜ್ಞಾನಿಕತೆ,ಆಧುನಿಕತೆ ಕಡೆ ಹೋಗುತ್ತಿರುವ ಸಂದರ್ಭದಲ್ಲಿ ಭೂಮಿತಾಯಿಯನ್ನು ನಂಬಿ ಕೆಲಸ ಮಾಡುತ್ತಿರುವ ರೈತ ಮಹಿಳೆಯರನ್ನು ಗುರುತಿಸಿ ಪ್ರಿಯಾಂಕ್ ಖರ್ಗೆ ಅವರ ಹುಟ್ಟು ಹಬ್ಬದ ಅಂಗವಾಗಿ ಅವರನ್ನು ಸನ್ಮಾನಿಸಿ ಗೌರವಿಸುತ್ತಿದ್ದೇವೆ ಎಂದು ಹೇಳಿದರು.
ಪ್ರಿಯಾಂಕ್ ಖರ್ಗೆ ಅವರು ಕ್ರಾಂತಿಕಾರಿ ಬಸವಣ್ಣನವರ ತತ್ವ ಇಟ್ಕೊಂಡು ಕಾಯಕವೇ ಕೈಲಾಸ ಎಂದು ತಿಳಿದು, ಬುದ್ಧ,ಬಸವಣ್ಣ, ಅಂಬೇಡ್ಕರ್ ಹಾಗೂ ಪೆರಿಯಾರ್ ಅವರ ಆದರ್ಶ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಸಂದರ್ಭದಲ್ಲಿ ಪತ್ರಕರ್ತ ಬಿ.ಪಿ.ಪ್ರಕಾಶ್, ಕೆಪಿಸಿಸಿ ಪರಿಶಿಷ್ಟ ಜಾತಿ ಉಪಾಧ್ಯಕ್ಷ ತಿಬ್ಬನಹಳ್ಳಿ ರಮೇಶ್,ಅಲ್ಪ ಸಂಖ್ಯಾತ ಕಾಂಗ್ರೆಸ್ ಘಟಕದ ಅಧ್ಯಕ್ಷ ಮುಜಾಹಿದ್ ಅಲಿಖಾನ್,ನಗರ ಸಭೆ ಮಾಜಿ ಸದಸ್ಯರಾದ ಶ್ರೀಧರ್,ಹರೀಶ್
ಕಾಂಗ್ರೆಸ್ ಮುಖಂಡರಾದ ರವಿಕುಮಾರ್ ತಗ್ಗಹಳ್ಳಿ, ಲವ, ಪ್ರಕಾಶ್, ಅಂಜನಾ ಶ್ರೀಕಾಂತ್, ಅಭಿಲಾಷ್ ಸೇರಿದಂತೆ ಇತರರು ಭಾಗವಹಿಸಿದ್ದರು.




