Thursday, September 19, 2024

ಪ್ರಾಯೋಗಿಕ ಆವೃತ್ತಿ

ಬೆನ್ನಿಗೆ ಚೂರಿ ಹಾಕಿದವರ ಬಗ್ಗೆ ಎಚ್ಚರವಾಗಿರಿ : ಪಿ.ಎಂ. ನರೇಂದ್ರಸ್ವಾಮಿ

ಕಳೆದ ಚುನಾವಣೆಯ ಸಂದರ್ಭದಲ್ಲಿ ನಮ್ಮಲ್ಲಿದ್ದ ಕೆಲವರು ಬೆನ್ನಿಗೆ ಚೂರಿ ಹಾಕಿದ್ದರು. ಇಂದು ಅವರೇ ಕ್ಷೇತ್ರದಲ್ಲಿ ಸಭೆ ಮಾಡುವುದು, ಪತ್ರಿಕಾ ಹೇಳಿಕೆ ಕೊಡುವುದು, ಆಕಾಂಕ್ಷಿತರ ಪರವಾಗಿ ಬಂಡಾಯ ಸಭೆ ನಡೆಸುತ್ತಿದ್ದಾರೆ. ಬೆನ್ನಿಗೆ ಚೂರಿ ಹಾಕುವವರ ಬಗ್ಗೆ ಕಾರ್ಯಕರ್ತರು ಎಚ್ಚರವಾಗಿರಬೇಕೆಂದು ಕೆಪಿಸಿಸಿ ಉಪಾಧ್ಯಕ್ಷ ಪಿ.ಎಂ. ನರೇಂದ್ರಸ್ವಾಮಿ ಮನವಿ ಮಾಡಿದರು.

ಮಳವಳ್ಳಿ ಪಟ್ಟಣದ ಟಿಎಪಿಸಿಎಂಎಸ್ ಸಭಾಂಗಣದಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಹೇಗಾದರೂ ಸೋಲಿಸಬೇಕು. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮತ್ತೆ ಬರಬಾರದು ಎಂದು ಕೆಲವರು ಕುತಂತ್ರ ಮಾಡಿದ್ದರು. ಇದನ್ನು ಅರಿಯುವಲ್ಲಿ ನಾವು ವಿಫಲರಾಗಿ ಸೋಲು ಅನುಭವಿಸಿದೆವು. ನಮ್ಮಲ್ಲಿದ್ದ ಕೆಲವರು ಬೆನ್ನಿಗೆ ಚೂರಿ ಹಾಕಿದರು. ಜೆಡಿಎಸ್ ನಾಯಕರು ಕಾಂಗ್ರೆಸ್ ನಲ್ಲಿ ಬಂಡಾಯ ಎಂದು ಹೇಳುತ್ತಿದ್ದಾರೆ. ಆದರೆ ನಿಜವಾದ ಬಂಡಾಯ ಅವರ ಪಕ್ಷದಲ್ಲಿದೆ. ಶೀಘ್ರವಾಗಿ ಅವೆಲ್ಲವೂ ಹೊರ ಬರುತ್ತದೆ ಎಂದು ಟೀಕಿಸಿದರು.

ಜಿಲ್ಲೆಯಲ್ಲಿ ಸಾಕಷ್ಟು ಜನರು ಜೆಡಿಎಸ್ ಪಕ್ಷವನ್ನು ಧೂಳೀಪಟ ಮಾಡಲು ನಿಂತಿದ್ದಾರೆ. ಕುಮಾರಸ್ವಾಮಿ ಅವರು ಈಗಾಗಲೇ 4-5 ಬಾರಿ ಮಳವಳ್ಳಿ ಪಟ್ಟಣಕ್ಕೆ ಸಣ್ಣಪುಟ್ಟ ಕಾರ್ಯಕ್ರಮಗಳಿಗೂ ಬಂದು ಹೋಗಿದ್ದಾರೆ. ಆದರೆ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಜನ ಆಶೀರ್ವಾದ ಮಾಡುವುದು ನೂರಕ್ಕೆ ನೂರರಷ್ಟು ಖಚಿತ ಎಂದರು.

ಒಳ ಒಪ್ಪಂದ 

2013ರಲ್ಲಿ ನಾನು ಗೆದ್ದಾಗ 61,500 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದೆ. 2018 ರಲ್ಲಿ ಜನರು ನನಗೆ 76,500 ಮತ ನೀಡಿದರು. ಎಲ್ಲೂ ಕೂಡ ಜನಾಭಿಪ್ರಾಯ ನನ್ನ ವಿರುದ್ಧವಾಗಿರಲಿಲ್ಲ. ಆದರೆ ಕ್ಷೇತ್ರದಲ್ಲಿ ನಡೆದ ಹೊಂದಾಣಿಕೆ ರಾಜಕೀಯ, ಕುತಂತ್ರ ರಾಜಕಾರಣಕ್ಕೆ ನಾನು ಸೋತೆ. ನಾನೊಬ್ಬನೇ ಅಲ್ಲ ಸುಮಾರು 20ಕ್ಕೂ ಹೆಚ್ಚು ಸ್ಥಾನಗಳನ್ನು ಈ ರೀತಿ ಒಳ ಒಪ್ಪಂದದ ಕಾರಣದಿಂದ ಹಳೇ ಮೈಸೂರು ಭಾಗದಲ್ಲಿ ಕಳೆದು ಕೊಳ್ಳಬೇಕಾಯಿತು. ಇದಕ್ಕೆ ಕಾರಣ ಯಾರೆಂಬುದು ಗೊತ್ತಾಗಿದೆ. ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಒಳ ಒಪ್ಪಂದ ಮಾಡಿಕೊಳ್ಳುವ ಜೆಡಿಎಸ್ ಕುತಂತ್ರ ರಾಜಕಾರಣದ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕು ಎಂದರು.

ಪ್ರಜಾಧ್ವನಿ ಸಂದೇಶ

ರಾಜ್ಯದಲ್ಲಿ ಪ್ರಜಾಧ್ವನಿ ಗುಡುಗುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಇಡೀ ರಾಜ್ಯಾದ್ಯಂತ ಬಿಜೆಪಿ ಪಕ್ಷವನ್ನು ಹಿಮ್ಮೆಟ್ಟಿಸುತ್ತ ಬರುತ್ತಿದ್ದಾರೆ. ಜನವರಿ 27ರಂದು ಮಂಡ್ಯದಲ್ಲಿ ಪ್ರಜಾಧ್ವನಿ ಯಾತ್ರೆಯ ಮೂಲಕ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಿಗೆ ಜನಾಭಿಪ್ರಾಯ ಕಾಂಗ್ರೆಸ್ ಪಕ್ಷದ ಪರವಾಗಿದೆ ಎಂಬುದನ್ನು ತಿಳಿಸಲು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಜನರನ್ನು ಸೇರಿಸಬೇಕು ಎಂದರು.

ಕುತಂತ್ರಿಗಳಿಂದ ಸಭೆ

ಕ್ಷೇತ್ರದಲ್ಲಿರುವ ಕೂಳೆ ಗ್ಯಾಂಗ್ ಸುಳ್ಳನ್ನು ಸತ್ಯ ಅಂತ ಹೇಳುತ್ತಿದೆ. ಎರಡು ತಿಂಗಳ ಹಿಂದೆ ಮುತ್ತತ್ತಿಯಲ್ಲಿ ಕುತಂತ್ರಿಗಳು ಸಭೆ ನಡೆಸಿದ್ದಾರೆ. ಅವರೇ ಸಿದ್ಧರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರ ಮನೆಗೆ ಹೋಗಿ ನರೇಂದ್ರಸ್ವಾಮಿಗೆ ಟಿಕೆಟ್ ಕೊಡಬೇಡ ಎಂದು ಸುಳ್ಳು ಹೇಳುತ್ತಿದ್ದಾರೆ. ಅವರಿಗೆ ಗೊತ್ತಿಲ್ಲವಾ ಯಾರು ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ಬಗ್ಗೆ. ಇಂಥವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು.

ಈ ಬಾರಿ ರಾಜ್ಯದಲ್ಲಿ ಹೊಂದಾಣಿಕೆ ರಾಜಕೀಯ ನಡೆಯುವುದಿಲ್ಲ. ಅಭಿವೃದ್ಧಿಯಲ್ಲಿ ಶೂನ್ಯ ಆಗಿರುವ ಜಿಲ್ಲೆಯನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ಜೆಡಿಎಸ್ ಶಾಸಕರು ಬಂದು ಮಂಡ್ಯ ಜಿಲ್ಲೆಗೆ ಒಂದೇ ಒಂದು ಯೋಜನೆ ಜಾರಿ ಮಾಡಿದ್ದೇನೆ ಎಂದು ಬಹಿರಂಗವಾಗಿ ಹೇಳಲಿ ಎಂದು ಸವಾಲು ಹಾಕಿದರು.

ಬುದ್ಧಿ ಕಲಿಸಿ

ಇಂದು ಮಳವಳ್ಳಿ ಪಟ್ಟಣದ ರಸ್ತೆಗಳೆಲ್ಲ ಹಳ್ಳಕೊಳ್ಳಗಳಿಂದ ಕೂಡಿವೆ. ಕ್ಷೇತ್ರಕ್ಕೆ ಒಂದೇ ಒಂದು ಯೋಜನೆ ಜಾರಿ ಮಾಡಿಸಿರುವ ಬಗ್ಗೆ ಶಾಸಕರು ಹೇಳಲಿ. ಅಂಬೇಡ್ಕರ್ ಭವನಕ್ಕೆ ಕಲ್ಲು ಹಾಕಿಸಿಕೊಳ್ಳಲು ಬರುತ್ತದೆ. ಡಿಸಿಸಿ ಬ್ಯಾಂಕ್ ನಲ್ಲಿ 4 ಸ್ಥಾನಗಳನ್ನು ಗೆದ್ದ ಬಿಜೆಪಿ ಅವರಿಗೆ ಅಧಿಕಾರವನ್ನು ಹಿಡಿಯಲು ಯಾರು ಸಹಕಾರ ನೀಡಿದವರು ಎಂಬುದು ಎಲ್ಲರಿಗೂ ಗೊತ್ತಿದೆ. ಒಂದೇ ಒಂದು ಯೋಜನೆ ಕ್ಷೇತ್ರಕ್ಕೆ ತಂದಿರುವ ಬಗ್ಗೆ ಜನರ ಮುಂದೆ ದಾಖಲೆ ತೆರೆದಿಡಲಿ ಎಂದು ಸವಾಲು ಹಾಕಿದರು.

ಕೈ ಮುಗಿದು ಕೇಳುತ್ತೇನೆ

ಇನ್ನು ಈ ಒಳ ಸಂಬಂಧಗಳು ಸಾಕು. ಯಾರೋ ಕೆಲವು ಬೆರಳೆಣಿಕೆಯ ಮುಖಂಡರು ವಿರೋಧ ಪಕ್ಷದ ಜೊತೆ ಕೈಜೋಡಿಸಿರುವ ಬಗ್ಗೆ ನನಗೆ ಮಾಹಿತಿ ಇದೆ. ಇದೆಲ್ಲವನ್ನು ಬಿಟ್ಟು ಬಿಡಿ. ನಿಮ್ಮ ಕೈ ಮುಗಿದು ಕೇಳುತ್ತೇನೆ. ಕಾಂಗ್ರೆಸ್ ಋಣದಲ್ಲಿದ್ದು, ಯಾರು ಮತ್ತೆ ಇಂತಹ ತಪ್ಪು ಮಾಡಬೇಡಿ. ನನಗೆ ಪ್ರತಿ ಬೂತ್ ನಲ್ಲೂ 10 ರಿಂದ 15 ಮಂದಿ ಯುವಕರ ಪಟ್ಟಿ ಕೊಡಿ‌‌. ಅವರಿಗೆ ತರಬೇತಿ ಕಾರ್ಯಕ್ರಮ ನೀಡಿ, ಹೊಸ ತಂಡವನ್ನು ಕಟ್ಟುತ್ತೇನೆ. ಈ ಬಾರಿ ನನಗೆ ಅವಕಾಶ ಮಾಡಿಕೊಟ್ಟರೆ ಕ್ಷೇತ್ರದ ಅಭಿವೃದ್ಧಿಯ ಜೊತೆಗೆ ಜನರ ಋಣ ತೀರಿಸುವ ಕೆಲಸ ಮಾಡುತ್ತೇನೆ ಎಂದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ದೇವರಾಜು, ಸುಂದರ್ ರಾಜು, ಅಜ್ಜಹಳ್ಳಿ ರಾಮಕೃಷ್ಣ, ಪುಟ್ಟಸ್ವಾಮಿ, ಶಕುಂತಳ ಮಲ್ಲಿಕ್, ವೆಂಕಟೇಗೌಡ ಮಹದೇವು, ಕುಳ್ಳ ಚನ್ನಂಕಯ್ಯ,ಅಂಬರೀಶ್, ವಿ.ಪಿ. ನಾಗೇಶ್, ಮಾಕಾ೯ಲು ಮಾಧು, ದ್ಯಾಪೇಗೌಡ, ವಿಶ್ವಾಸ್, ಮಲ್ಲಯ್ಯ, ಶಿವಕುಮಾರ್ ಬಸವರಾಜು, ಶಾಂತರಾಜು ಮುಂತಾದವರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!