Monday, September 16, 2024

ಪ್ರಾಯೋಗಿಕ ಆವೃತ್ತಿ

ಪಂಚರತ್ನ ಯೋಜನೆಗಳ ಅನುಷ್ಠಾನಕ್ಕೆ ಜೆಡಿಎಸ್ ಅಧಿಕಾರಕ್ಕೆ ತರಬೇಕಿದೆ : ಎಂ.ಶ್ರೀನಿವಾಸ್

ರಾಜ್ಯದ ಜನಸಾಮಾನ್ಯರು, ಬಡಜನರಿಗಾಗಿ ಹೆಚ್.ಡಿ.ಕುಮಾರಸ್ವಾಮಿ ಅವರು ಪಂಚರತ್ನ ಯೋಜನೆ ಜಾರಿಗೆ ತರಲು ಹೋರಾಟ ನಡೆಸುತ್ತಿದ್ದು,ಪಂಚರತ್ನ ಯೋಜನೆ ಅನುಷ್ಠಾನಕ್ಕೆ ಜೆಡಿಎಸ್ ಅಧಿಕಾರಕ್ಕೆ ತರುವುದು ಅಗತ್ಯವಿದೆ ಎಂದು ಶಾಸಕ ಎಂ.ಶ್ರೀನಿವಾಸ್ ತಿಳಿಸಿದರು.

ಮಂಡ್ಯ ನಗರದ ಕಾಳಿಕಾಂಬ ದೇವಾಲಯದಲ್ಲಿ ಮಂಡ್ಯ ವಿಧಾಸಭಾ ಕ್ಷೇತ್ರದ ಜೆಡಿಎಸ್ ಮುಖಂಡ ಎಚ್.ಎನ್.ಯೋಗೇಶ್ ನೇತೃತ್ವದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಜನ್ಮದಿನ ಪ್ರಯುಕ್ತ ವಿಶೇಷ ಪೂಜೆ ಮತ್ತು ಸಿಹಿ ವಿತರಣೆ ಹಾಗೂ ಸೇವಾ ಕಾರ್ಯಗಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಮ್ಮ ನೆಚ್ಚಿನ ನಾಯಕರಾದ ಹೆಚ್.ಡಿ.ಕುಮಾರಸ್ವಾಮಿ ಅವರ ಜನ್ಮದಿನವನ್ನು ಹಲವು ಸೇವಾ ಕಾರ್ಯಗಳ ಮೂಲಕ ಆಚರಿಸುತ್ತಿದೇವೆ, ಮುಂದಿನ 2023ರ ಚುನಾವಣೆಯಲ್ಲಿ ಜೆಡಿಎಸ್ ಬಹುಮತದೊಂದಿಗೆ ಗೆಲವು ಸಾಧಿಸಿ, ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಲಿದ್ದಾರೆ. ಇದರಲ್ಲಿ ಯಾವುದೇ ಸಂಶಯ ಬೇಡ. ರಾಜ್ಯದ ಸಮಗ್ರ ಅಭಿವೃದ್ದಿಗೆ ಜೆಡಿಎಸ್ ಅಧಿಕಾರಕ್ಕೆ ಬರಬೇಕಿದೆ. ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಮಾಡುವ ಹಂಬಲ ರಾಜ್ಯದ ಜನತೆಗಿದೆ ಎಂದು ತಿಳಿಸಿದರು.

ಜೆಡಿಎಸ್ ಮುಖಂಡ ಎಚ್.ಎನ್.ಯೋಗೇಶ್ ಮಾತನಾಡಿ, ಇವತ್ತು ರಾಷ್ಟ್ರ ಕಂಡ ಅಪ್ರತಿಮ ಮಾಜಿ ಪ್ರಧಾನಮಂತ್ರಿಗಳಾದ ದೇವೇಗೌಡ ಅವರ ಸುಪುತ್ರರಾದ ಮಾಜಿ ಹಾಗೂ ಭಾವಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರ ಜನ್ಮದಿನವನ್ನು ಸೇವಾ ಕಾರ್ಯಗಳೊಂದಿಗೆ ಸರಳವಾಗಿ ಆಚರಿಸುತಿದ್ದೇವೆ.
ಇಂದು ಜನಪರ ಕಾಳಜಿಯುಳ್ಳವರು ಮತ್ತು ಜನಪರ ಕೆಲಸ ಮಾಡುವವರು ಇದ್ದಾರೆ ಎಂದರೆ, ಅದು ನಮ್ಮ ಕುಮಾರಸ್ವಾಮಿಯವರು ಮಾತ್ರ. ಅವರ ಎಲ್ಲಾ ಅಭಿಮಾನಿಗಳು ಮತ್ತು ಜೆಡಿಎಸ್ ಮುಖಂಡರ ಸಮ್ಮುಖದಲ್ಲಿ ದೇವರಲ್ಲಿ ವಿಶೇಷಪೂಜೆ, ಆಯುಸ್ಸು, ಆರೋಗ್ಯ, ರಾಜಕೀಯ ಶಕ್ತಿಗಾಗಿ ಪ್ರಾರ್ಥನೆ ಸಲ್ಲಿಸಿದ್ದೇವೆ ಎಂದು ತಿಳಿಸಿದರು.

ಜಿಲ್ಲಾಸ್ಪತ್ರೆಯ ರೋಗಿಗಳಿಗೆ ಹಣ್ಣು-ಹಂಪಲು-ಬ್ರೆಡ್ ವಿತರಣೆ, ವೃದ್ದಾಶ್ರಮಗಳಿಗೆ ನೆರವು, ವಿಶೇಷಚೇತನರಿಗೆ ಸೇವಾಕಾರ್ಯ, ಹೋಬಳಿವಾರು ಸೇವಾ ಚಟುವಟಿಕೆ ನಡೆಯುತ್ತಿವೆ ಎಂದು ಹೇಳಿದರು.

ಡಿ.17ರಂದು ಜಿಲ್ಲಾಸ್ಪತ್ರೆಯಲ್ಲಿನ ಗರ್ಭಿಣಿ-ಬಾಣಂತಿಯರಿಗೆ ಪೌಷ್ಠಿಕಾಹಾರ, ದಾಸೋಹ, ಹಣ್ಣು-ಹಂಪಲು ವಿತರಣೆ ಹಾಗೂ ವಿವಿಧ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ, ಜೆಡಿಎಸ್ ಕಾರ್ಯಕರ್ತರ ಸಹಕಾರ ಹೀಗೆ ಮುಂದುವರಿಯಲಿ, ಕುಮಾರಸ್ವಾಮಿ ಅವರು ನಾಡಿನ ಮುಖ್ಯಮಂತ್ರಿಯಾಗಿ, ಪ್ರಧಾನಮಂತ್ರಿಯಾಗಲು ನಾವೆಲ್ಲಾ ಶಕ್ತಿ ತುಂಬೋಣ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಪಿಇಟಿ ಅಧ್ಯಕ್ಷ ವಿಜಯ್ ಆನಂದ್, ಜಿಲ್ಲಾ ವಕ್ತಾರ ಮಹಲಿಂಗೇಗೌಡ ಮುದ್ದನಘಟ್ಟ, ಮನ್ಮುಲ್ ಉಪಾಧ್ಯಕ್ಷ ರಘುನಂದನ್, ನಗರಸಭಾ ಅಧ್ಯಕ್ಷ ಮಂಜು, ಸದಸ್ಯ ನಾಗೇಶ್, ಮುಖಂಡ ಆನೆಕೆರೆ ಬೀದಿ ಎಂ.ಎಸ್. ಸುರೇಶ್ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!