ರಾಜ್ಯದ ಎಲ್ಲ ವರ್ಗದ ಜನರಿಗೂ ಶಿಕ್ಷಣ,ಆರೋಗ್ಯ,ವಸತಿ,ಉದ್ಯೋಗ,ರೈತರ ಸಬಲೀಕರಣ ಮಾಡಲು ಅನಾರೋಗ್ಯವಿದ್ದರೂ ಬಂದಿದ್ದೇನೆ.ಪಂಚರತ್ನ ಯೋಜನೆ ಜಾರಿಗೆ ಪೂರ್ಣ ಪ್ರಮಾಣದಲ್ಲಿ ಅಧಿಕಾರ ಕೊಡಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದರು.
ಮಳವಳ್ಳಿ ತಾಲ್ಲೂಕಿನ ಹಿಟ್ಟನಹಳ್ಳಿ ಕೊಪ್ಪಲು ಗ್ರಾಮದಲ್ಲಿ ಮಧ್ಯರಾತ್ರಿ 12 ಗಂಟೆಗೆ ಬಂದ ಪಂಚರತ್ನ ರಥಯಾತ್ರೆಗೆ ಗ್ರಾಮಸ್ಥರು ಅದ್ದೂರಿ ಸ್ವಾಗತ ಕೋರಿ ಕುಮಾರಸ್ವಾಮಿಗೆ ಬೃಹತ್ ಗಾತ್ರದ ಮೂಸಂಬಿ ಹಾರ ಹಾಕಿ ಬರಮಾಡಿಕೊಂಡರು.
ನಾನು ಪ್ರತಿ ದಿವಸ 60 ರಿಂದ 80 ಗ್ರಾಮಗಳಿಗೆ ಭೇಟಿ ಮಾಡುತ್ತಿದ್ದೇನೆ. ನನಗೆ ಎರಡು ಬಾರಿ ಹೃದಯ ಚಿಕಿತ್ಸೆ ಆಗಿದೆ.ಆರೋಗ್ಯದ ಸಮಸ್ಯೆ ನಡುವೆಯೂ ಸಹ ಕರ್ನಾಟಕದ ಜನರ ಬದುಕನ್ನು ಹಸನು ಮಾಡಲು ಹೋರಾಟ ಮಾಡುತ್ತಿದ್ದೇನೆ.
ರೈತರ ಸಬಲೀಕರಣ
ಇಂದು ರೈತರ ಪರಿಸ್ಥಿತಿ ಚಿಂತಾಜನಕವಾಗಿದೆ.ಅದಕ್ಕಾಗಿ ರೈತಬಂಧು ಕಾರ್ಯಕ್ರಮದ ಮೂಲಕ ರೈತನ ಬಾಳು ಹಸನು ಮಾಡಲು ಹೊರಟಿದ್ದೇನೆ. ಒಂದು ಎಕರೆ ಭೂಮಿ ಇದ್ದರೂ ಸಹ ಯಾವ ರೀತಿ ರೈತರನ್ನು ಸಬಲೀಕರಣ ಮಾಡಬೇಕೆಂಬ ಬಗ್ಗೆ ಚಿಂತನೆ ಮಾಡುತ್ತಿದ್ದೇನೆ. ರೈತರ ಸಾಲ ಮನ್ನಾ ಮಾಡುವುದರ ಜೊತೆಗೆ ರೈತರ ಸಬಲೀಕರಣ ಮಾಡಲು ಪೂರ್ಣ ಪ್ರಮಾಣದ ಸರ್ಕಾರಕ್ಕೆ ಮಣ್ಣಿನ ಮಕ್ಕಳ ಸರ್ಕಾರಕ್ಕೆ ಒಂದು ಅವಕಾಶ ಕೊಡಿ ಎಂದು ಮನವಿ ಮಾಡಿದರು.
ಸಮ್ಮಿಶ್ರ ಸರ್ಕಾರದಲ್ಲಿ ಸಾಲ ಮನ್ನಾ ಮಾಡಲು ದುಡ್ಡು ಎಲ್ಲಿದೆ,ಯಾವ ರೀತಿ ಸಾಲಮನ್ನಾ ಮಾಡುತ್ತೀರಿ ಎಂದು ಕೇಳಿದ್ರು.ಆದರೆ ನಾನು ಮಾತು ಕೊಟ್ಟಂತೆ 26 ಲಕ್ಷ ಕುಟುಂಬದ 25 ಸಾವಿರ ಕೋಟಿ ಸಾಲ ಮನ್ನಾ ಮಾಡಿದೆ.ಬಿಜೆಪಿ ಸರ್ಕಾರ ಇನ್ನೂ ಎರಡು ಲಕ್ಷ ಜನರ ಸಾಲಮನ್ನಾ ಮಾಡದೆ ಅವರನ್ನು ಸಂಕಷ್ಟಕ್ಕೆ ದೂಡಿದೆ ಎಂದರು.
ಉಚಿತ ಶಿಕ್ಷಣ
ಇಂದು ರೈತರ ಮಕ್ಕಳು ಶಿಕ್ಷಣ ಪಡೆಯಲು 25 ರಿಂದ 50 ಸಾವಿರ ರೂ.ಫೀಸ್ ಕಟ್ಟಿ ಶಿಕ್ಷಣ ಪಡೆಯಬೇಕಿದೆ.ಶಿಕ್ಷಣಕ್ಕಾಗಿ ಸಾಲ ಮಾಡುವ ಪರಿಸ್ಥಿತಿ ಉಂಟಾಗಿದೆ.ಅದಕ್ಕಾಗಿ ಉಚಿತ ಶಿಕ್ಷಣ ಕೊಡಲು ನಿರ್ಧರಿಸಿದ್ದೇನೆ ಎಂದು ತಿಳಿಸಿದರು.
ಉಚಿತ ಚಿಕಿತ್ಸೆ
ರಾಜ್ಯದ ಆರು ಸಾವಿರ ಗ್ರಾ.ಪಂ.ವ್ಯಾಪ್ತಿಯಲ್ಲಿ 30 ಬೆಡ್ ಗಳ ಆಸ್ಪತ್ರೆ ವೈದ್ಯರು,ಸಿಬ್ಬಂದಿ ನೇಮಕ ಮಾಡಿ ಉಚಿತ ಚಿಕಿತ್ಸೆ ನೀಡಲಾಗುವುದು. ಯುವಕರಿಗೆ ಉದ್ಯೋಗ, ವಸತಿ ಯೋಜನೆ ನೀಡುವುದು ನನ್ನ ಆದ್ಯತೆ ಎಂದರು.
ರೈತರ ಸಾಲ ಮನ್ನಾ ಮಾಡಿದರೆ ಮತ್ತೆ ಸಾಲ ಮಾಡುತ್ತಾರೆ.ಐದು ವರ್ಷ ಪೂರ್ಣ ಅಧಿಕಾರ ಕೊಡಿ.ರೈತರ ಎಲ್ಲ ಸಮಸ್ಯೆ ಬಗೆಹರಿಸುತ್ತೇನೆ. ಅದಕ್ಕಾಗಿ ಮಣ್ಣಿನ ಮಕ್ಕಳ ಸರ್ಕಾರ ತರಬೇಕು ಎಂದು ಕರೆ ನೀಡಿದರು.
ಸರ್ಕಾರ ವಿಸರ್ಜನೆ
ರೈತರನ್ನು ಅನ್ನದಾತ ಅಂತ ಹೇಳುತ್ತಾರೆ.ಆದರೆ ಅವನ ಪರ ಯಾರೂ ನಿಲ್ಲಲ್ಲ.ಆರೋಗ್ಯದ ತೊಂದೆರೆಗಳ ನಡುವೆಯೂ ರೈತರು, ಯುವಕರು,ಮಹಿಳೆಯರು, ಸಣ್ಣಪುಟ್ಟ ಕೆಲಸ ಮಾಡುವ ಕಾರ್ಮಿಕರಿಗೆ ಅನುಕೂಲ ಮಾಡಲು ಬಂದಿದ್ದೇನೆ.
ಮೋದಿಯವರ ಎಂಟು ವರ್ಷಗಳ ಆಡಳಿತದ ಬಗ್ಗೆ, ಬಿಜೆಪಿ ಬಗ್ಗೆ ಮಾತನಾಡಲ್ಲ. ನಿಮ್ಮ ಬದುಕು ಕಟ್ಟಲು ಎಲ್ಲಾ ಜಾತಿಯ ಜನರಿಗಾಗಿ ಮಾಡಿರುವ ಪಂಚರತ್ನ ಯೋಜನೆ ಜಾರಿ ಮಾಡದಿದ್ದರೆ ಸರ್ಕಾರ ವಿಸರ್ಜನೆ ಮಾಡುತ್ತೇನೆ ಎಂದರು.
ಶಾಸಕ ಕೆ.ಅನ್ನದಾನಿ,ವಿಧಾನ ಪರಿಷತ್ ಮಾಜಿ ಸದಸ್ಯ ಅಪ್ಪಾಜಿಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಅಪ್ಪಾಜಿಗೌಡ, ಮನ್ಮುಲ್ ನಿರ್ದೇಶಕರಾದ ವಿಶ್ವನಾಥ್, ನೆಲ್ಲಿಗೆರೆ ಬಾಲು ,ಜಿ.ಪಂ.ಮಾಜಿ ಸದಸ್ಯ ಕಂಸಾಗರ ರವಿ ಮತ್ತಿತರರಿದ್ದರು.




