ಅಪ್ರಾಪ್ತ ಮತ್ತು ವಯಸ್ಕ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿ, ಭಾರತೀಯ ಕುಸ್ತಿ ಫೆಡರೇಷನ್ ಮುಖ್ಯಸ್ಥ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್‌ನನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿ ಮಂಡ್ಯ ನಗರದಲ್ಲಿ ಕರ್ನಾಟಕ ಜನಶಕ್ತಿ ಸಂಘಟನೆ ನೇತೃತ್ವದಲ್ಲಿ ಅತ್ಯಾಚಾರ ವಿರೋಧಿ ಆಂದೋಲನ ಸೇರಿದಂತೆ ಹಲವು ಸಂಘಟನೆಗಳ ಕಾರ್ಯಕರ್ತರು ಸೋಮವಾರ ಸಂಜೆ ಪಂಜಿನ ಮರೆವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಮಂಡ್ಯ ನಗರಸಭೆ ಮುಂಭಾಗದಲ್ಲಿ ಜಮಾಯಿಸಿದ ಕಾರ್ಯಕರ್ತರು, ಬಿಜೆಪಿ ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ಹಾಗೂ ಮಹಿಳಾ ಪೀಡಕ ಬ್ರಿಜ್ ಭೂಷಣ್ ವಿರುದ್ಧ ಘೋಷಣೆಗಳನ್ನು ಮೊಳಗಿಸಿದರು. ನಂತರ ವಿವಿ ರಸ್ತೆ ಮೂಲಕ ಮೆರವಣಿಗೆ ಸಾಗಿ, ಕೆ.ಆರ್.ರಸ್ತೆ ಹಾಗೂ ಆರ್.ಪಿ.ರಸ್ತೆಯಲ್ಲಿ ಮುನ್ನಡೆದು ಸಂಜಯ ಸರ್ಕಲ್ ನಲ್ಲಿ ಸಮಾವೇಶಗೊಂಡರು.

ಈ ಸಂದರ್ಭದಲ್ಲಿ ಕರ್ನಾಟಕ ಜನಶಕ್ತಿ ಸಂಘಟನೆಯ ರಾಜ್ಯ ಕಾರ್ಯದರ್ಶಿ ಪೂರ್ಣಿಮ ಮಾತನಾಡಿ, ಬಿಜೆಪಿ ಸಂಸದನಾಗಿರುವ ಬ್ರಿಜ್ ಭೂಷಣ್ ಎಂಬ ಮಹಿಳಾ ಪೀಡಕನನ್ನು ನರೇಂದ್ರ ಮೋದಿ ಸರ್ಕಾರ ರಕ್ಷಿಸುವ ಕೆಲಸ ಮಾಡುತ್ತಿದೆ. ಆ ಮೂಲಕ ನಮ್ಮ ಸರ್ಕಾರ ಅತ್ಯಾಚಾರಿಗಳ ಸರ್ಕಾರ ಎಂದು ಬಿಜೆಪಿ ಪಕ್ಷವೇ ಪರೋಕ್ಷವಾಗಿ ಒಪ್ಪಿಕೊಂಡಿದೆ ಎಂದು ಹೇಳಿದರು.

ದೆಹಲಿಯ ಜಂತರ್ ಮಂತರ್ ನಲ್ಲಿ ಕಳೆದ 1 ತಿಂಗಳಿಂದ ಹೋರಾಟ ನಡೆಸುತ್ತಿದ್ದ ಕ್ರೀಡಾಪಟುಗಳನ್ನು ನೂತನ ಸಂಸತ್ ಉದ್ಘಾಟನೆ ದಿನವೇ ಅತ್ಯಂತ ಹೀನಾಯವಾಗಿ ಪೊಲೀಸ್ ದೌರ್ಜನ್ಯ ನಡೆಸಿ ಬಂಧಿಸಿರುವುದು ನಾಚಿಕೆಗೇಡಿನ ವಿಚಾರ. ಇದು ದೇಶವೇ ತಲೆ ತಗ್ಗಿಸುವವಂತಹ ನಡೆ ಎಂದು ಆಕ್ರೋಶ ಹೊರ ಹಾಕಿದರು.
ಇದೇ ಸಂದರ್ಭದಲ್ಲಿ ದಲಿತ ಮುಖಂಡ ಚಂದ್ರಶೇಖರ್, ಕರ್ನಾಟಕ ಜನಶಕ್ತಿಯ ಜಿಲ್ಲಾ ಕಾರ್ಯದರ್ಶಿ ಸಿದ್ದರಾಜು, ಅರುಣೋದಯ ಕಲಾತಂಡದ ಮಂಜುಳಾ, ನೆಲದನಿ ಬಳಗದ ಮಂಗಲ ಲಂಕೇಶ್, ನಿತ್ಯ ಸ್ನೇಹಿ ಕಲಾತಂಡ ವೈರಮುಡಿ ಅವರು ಮಾತನಾಡಿ ಕೇಂದ್ರ ಸರ್ಕಾರ ನಡೆಯ ವಿರುದ್ದ ಆಕ್ರೋಶ ಹೊರ ಹಾಕಿ, ಕೂಡಲೇ ಬ್ರಿಜ್ ಭೂಷಣ್ ಶರಣ್ ಸಿಂಗ್ ನನ್ನು ಬಂಧಿಸಬೇಕೆಂದು ಆಗ್ರಹಿಸಿದರು.
ನಂತರ ಬ್ರಿಜ್ ಭೂಷಣ್ ಪೋಸ್ಟರ್ ಗೆ ಚಪ್ಪಲಿಯಿಂದ ಹೊಡೆದು, ಬೆಂಕಿ ಇಟ್ಟು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆyಯಲ್ಲಿ ಕರ್ನಾಟಕ ಜನಶಕ್ತಿ, ಮಹಿಳಾ ಮುನ್ನೆಡೆ ಹಾಗೂ ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಹಲವು ಮಹಿಳೆಯರು ಪಾಲ್ಗೊಂಡಿದ್ದರು.




