ಗುತ್ತಿಗೆದಾರರು ಅಭಿವೃದ್ಧಿ ಕೆಲಸಗಳಿಗೆ ಹಣ ಹಾಕುವ ಗೆಳೆಯರು.ಅವರನ್ನು ಯಾವುದೇ ಕಾರಣಕ್ಕೂ ಅಗೌರವದಿಂದ ಕಾಣಬೇಡಿ ಎಂದು ನಿವೃತ್ತ ಅಧೀಕ್ಷಕ ಅಭಿಯಂತರ ಕೆ.ಜಿ. ವಿಜಯಕುಮಾರ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಸಲಹೆ ನೀಡಿದರು.
ಮಂಡ್ಯ ನಗರದ ಹೊರವಲಯದಲ್ಲಿರುವ ಅಗ್ರಿ ಕ್ಲಬ್ ನಲ್ಲಿ ಮಂಡ್ಯ ಜಿಲ್ಲಾ ಗುತ್ತಿಗೆದಾರರ ಸಂಘ ಅಧೀಕ್ಷಕ ಅಭಿಯಂತರ ಕೆ.ಜಿ.ವಿಜಯ್ ಕುಮಾರ್ ಹಾಗೂ ಕಾರ್ಯಪಾಲಕ ಅಭಿಯಂತರ ಪಿ.ಹೊನ್ನರಾಜು ಅವರಿಗೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಿತ್ತು.
ಈ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕೆ.ಜಿ.ವಿಜಯ್ ಕುಮಾರ್, ಗುತ್ತಿಗೆದಾರರು ಹಣ ಹಾಕದೆ ಇದ್ದರೆ ನಾವು ನೀವು ಏನು ಮಾಡಲು ಆಗುವುದಿಲ್ಲ. ಅವರಿಲ್ಲದೆ ಅಭಿವೃದ್ಧಿ ಕೆಲಸಗಳು ನಡೆಯುವುದಿಲ್ಲ.ಅವರು ಆರ್ಥಿಕ ಶ್ರಮ ಸೇರಿದಂತೆ ಇನ್ನಿತರ ಶ್ರಮವನ್ನು ಹಾಕಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಾರೆ. ಆರ್ಥಿಕ ಶ್ರಮ ಹಾಕುವ ಗುತ್ತಿಗೆದಾರರಿಗೆ ಹೆಚ್ಚಿನ ಗೌರವ ಕೊಡಿ ಎಂದೂ ಅವರಿಗೆ ಅವಮಾನ ಮಾಡಬೇಡಿ ಎಂದು ಹಿತವಚನ ನುಡಿದರು.
ಗುತ್ತಿಗೆದಾರರು ಕಚೇರಿಗೆ ಬಂದಾಗ ಅವರನ್ನು ಸಮಾಧಾನದಿಂದ ಕೂರಿಸಿ ಮಾತನಾಡಿ. ಅವರೊಂದಿಗೆ ಕಷ್ಟ-ಸುಖವನ್ನು ಹಂಚಿಕೊಳ್ಳಿ.ಅಭಿವೃದ್ಧಿ ಕೆಲಸ ಮಾಡುವ ಗುತ್ತಿಗೆದಾರರು ಇಲ್ಲದಿದ್ದರೆ ಗುರಿ ತಲುಪುವುದು ಕಷ್ಟ ಎಂದರು.
ನನ್ನ ಸೇವಾ ಅವಧಿಯಲ್ಲಿ ಮಂಡ್ಯ ಜಿಲ್ಲೆಯ ಹಲವೆಡೆ ಕರ್ತವ್ಯ ನಿರ್ವಹಿಸಿದ್ದೇನೆ. ನನ್ನ ಅವಧಿಯಲ್ಲಿ ಸಚಿವರಾಗಿದ್ದ ಕೆ.ಎನ್. ನಾಗೇಗೌಡ ಅವರನ್ನು ನೆನಪಿಸಿಕೊಳ್ಳಲು ಬಯಸುತ್ತೇನೆ. ವಿ.ಸಿ ನಾಲೆ ಆಧುನೀಕರಣ ಮಾಡುವ ಮೂಲಕ ಕಾವೇರಿ ನೀರನ್ನು ಒಣ ಪ್ರದೇಶಗಳಿಗೆ ಹರಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.
ನಾನು ಮಂಡ್ಯದಲ್ಲಿ 20ರಿಂದ 22 ವರ್ಷ ಸೇವೆ ಸಲ್ಲಿಸಿದ್ದೇನೆ.ನನ್ನ ಸೇವಾವಧಿಯಲ್ಲಿ ನನ್ನ ಹೆಗಲಿಗೆ ಹೆಗಲು ಕೊಟ್ಟ ನನ್ನ ಧರ್ಮಪತ್ನಿಗೆ ಕೃತಜ್ಞತೆ ತಿಳಿಸುತ್ತೇನೆ. ಹಾಗೆಯೇ ಸೇವಾವಧಿಯಲ್ಲಿ ಸಹಕಾರ ನೀಡಿದ ಗುತ್ತಿಗೆದಾರರು, ಅಧಿಕಾರಿಗಳು, ಸಿಬ್ಬಂದಿಗಳು, ಸವಡೆಗಳು, ಚಾಲಕರು ಹಾಗೂ ಡಿ. ದರ್ಜೆ ನೌಕರರಿಗೆ ವಂದನೆಗಳನ್ನು ತಿಳಿಸುತ್ತೇನೆ ಎಂದರು.
ತಾ. ಪಂ. ಮಾಜಿ ಸದಸ್ಯ, ಗುತ್ತಿಗೆದಾರ ತ್ಯಾಗರಾಜು ನಿರೂಪಣೆ ಮಾಡಿದರು. ಗುತ್ತಿಗೆದಾರರ ಸಂಘದ ಖಜಾಂಚಿ ಎಂ.ಎಚ್. ಯತಿರಾಜು, ಕಾರ್ಯದರ್ಶಿ ರವೀಂದ್ರ,ಸದಸ್ಯರಾದ ಎಂ. ಯೋಗೇಶ್, ತಮ್ಮಣ್ಣ, ನವೀನ್ ಕುಮಾರ್,ಸುನಿಲ್ ಬಾಬು ಮತ್ತಿತರರು ಬೀಳ್ಕೊಡುಗೆ ಸಮಾರಂಭ ಯಶಸ್ವಿಯಾಗಿ ನಡೆಯುವಂತೆ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ್ದು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.