ಮಂಡ್ಯನಗರದಲ್ಲಿ ಕಳೆದ ಒಂದೂವರೆ ತಿಂಗಳಿಂದ ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತಸಂಘದ ವತಿಯಿಂದ ನಿರಂತರ ಹೋರಾಟ ನಡೆಯುತ್ತಿದೆ. ಆದರೆ ಯಾವ ರಾಜಕೀಯ ಪಕ್ಷಗಳಾದರೂ ನಮಗೆ ನ್ಯಾಯ ದೊರಕಿಸಿಕೊಡುವ ಕೆಲಸ ಮಾಡಿವೆಯೇ….ಇಲ್ಲ. ಹಾಗಾಗಿ ನಮ್ಮ ರೈತಶಕ್ತಿ, ಮುಂದೆ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಬೇಕಾಗಿದೆ ಎಂದು ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಅವರ ಪುತ್ರ ದರ್ಶನ ಪುಟ್ಟಣ್ಣಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ವಿದೇಶದಿಂದ ಶುಕ್ರವಾರ ತಾಯ್ನಾಡಿಗೆ ಬಂದಿಳಿದ ಅವರು ಮಂಡ್ಯ ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿ ರೈತಸಂಘದ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಯಾವ ರಾಜಕೀಯ ಪಕ್ಷಗಳಿಗೂ ಕಾಳಜಿ ಇಲ್ಲ
ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿಗೆ ಒತ್ತಾಯಿಸಿ ರೈತರು ಒಂದೂವರೆ ತಿಂಗಳಿನಿಂದ ಚಳವಳಿ ಮಾಡುತ್ತಿದ್ದಾರೆ. ರಾಜಕೀಯ ಪಕ್ಷಗಳಿಗೆ ಕಾಳಜಿ ಇದ್ದಿದ್ದರೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕಿತ್ತು. ರೈತರ ಬಗ್ಗೆ ಯಾವ ರಾಜಕೀಯ ಪಕ್ಷಗಳಿಗೂ ಕಾಳಜಿ ಇಲ್ಲ ಎಂಬುದು ಇದರಿಂದ ತಿಳಿಯುತ್ತದೆ ಎಂದರು.

ರೈತ ಚಳವಳಿ ಪ್ರಾರಂಭವಾಗಿ 45 ದಿನ ಆಗಿದೆ. ಯಾರಾದರೂ ಬಂದು ನಮ್ಮ ಬೇಡಿಕೆಗಳನ್ನು ಕೇಳಿದ್ದಾರಾ ? ಕನಿಷ್ಠ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರಾ ? ಸ್ವಲ್ಪವಾದರೂ ಮಾನ-ಮರ್ಯಾದೆ ಇದ್ದಿದ್ದರೆ ಬಂದು ನಿರ್ಣಯ ಮಾಡಬೇಕಿತ್ತು ಎಂದು ರಾಜಕೀಯ ಪಕ್ಷಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹೊಸ ನಡೆ ನುಡಿಯ ರಾಜಕಾರಣಕ್ಕೆ ನಾಂದಿ
ನಾವು ಹೊಸ ನಡೆ ನುಡಿಯ ರಾಜಕಾರಣಕ್ಕೆ ಮುಂದಾಗಿದ್ದೇವೆ. ಎಲ್ಲ ಪಕ್ಷಗಳನ್ನು ನೋಡಿದ್ದೀರಿ, ನಾವು ಹೊಸ ಆಲೋಚನೆ ಇಟ್ಟುಕೊಂಡು ರಾಜಕೀಯಕ್ಕೆ ಧುಮುಕಿ ಏನಾದರೂ ಒಳ್ಳೆಯದನ್ನು ಮಾಡಲು ಹೊರಟ್ಟಿದ್ದೇವೆ. ಎಲ್ಲರೂ ಹುಟ್ಟುತ್ತಾರೆ, ಸಾಯುತ್ತಾರೆ, ಈ ಮಧ್ಯೆ ಏನಾದರೂ ಒಳ್ಳೆಯದನ್ನು ಮಾಡಬೇಕು ಎಂದು ನಮ್ಮಪ್ಪ ರೈತ ಮುಖಂಡ ಪುಟ್ಟಣ್ಣಯ್ಯ ಹೇಳುತ್ತಿದ್ದರು. ಅದರಂತೆ ನಾವು ಒಳ್ಳೆಯದನ್ನು ಮಾಡುವುದಕ್ಕಾಗಿಯೇ ರಾಜಕೀಯಕ್ಕೆ ಧುಮುಕಿದ್ದೇವೆ. ನಮ್ಮೊಡನೆ ಎಲ್ಲರೂ ಕೈಜೋಡಿಸಿ, ರೈತಸಂಘವನ್ನು ಬಲಿಷ್ಠವಾಗಿ ಕಟ್ಟೋಣ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಮುಖಂಡರಾದ ಎಸ್.ಸಿ. ಮಧುಚಂದನ್, ಪ್ರಸನ್ನ, ಹರೀಶ್, ಲಿಂಗಪ್ಪಾಜಿ, ಹರೀಶ್, ರವಿ, ಬೊಮ್ಮೇಗೌಡ, ವಿಜಯಕುಮಾರ್ ಮತ್ತಿತರರಿದ್ದರು.




