ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಕರೆ ನೀಡಿದ್ದ ಮಂಡ್ಯ ಬಂದ್ ಗೆ ಜಿಲ್ಲಾದ್ಯಂತ ವ್ಯಾಪಕ ಜನ ಬೆಂಬಲ ವ್ಯಕ್ತವಾಯಿತು.
ಮಂಡ್ಯನಗರವು ಸಂಪುರ್ಣವಾಗಿ ಬಂದ್ ಆಗಿತ್ತು, ಜಿಲ್ಲೆಯ ವಿವಿಧ ಭಾಗದಿಂದ ಬಂದ ಹೋರಾಟಗಾರರು ಕಾವೇರಿ ಹೋರಾಟದಲ್ಲಿ ಭಾಗಿಯಾದರು. ಎಲ್ಲಾ ರಾಜಕೀಯ ಪಕ್ಷಗಳ ನಾಯಕರು, ಮಂಡ್ಯನಗರದ ಸರ್.ಎಂ.ವಿ ಪ್ರತಿಮೆ ಮುಂಭಾಗ ನಡೆಯುತ್ತಿರುವ ಹೋರಾಟದಲ್ಲಿ ಭಾಗವಹಿಸಿ, ಸುಪ್ರೀಂ ಕೋರ್ಟ್ ತೀರ್ಪು ಇಲ್ಲಿನ ಜನರಿಗೆ ಮರಣ ಶಾಸನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೋರಾಟದಲ್ಲಿ ಬಿಜೆಪಿ ಮುಖಂಡ ಸಿ.ಟಿ.ರವಿ ಭಾಗವಹಿಸಿ ಮಾತನಾಡಿದರು. ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿಯ ಎಲ್ಲಾ ಮುಖಂಡರು ಹೋರಾಟದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಕಾಂಗ್ರೆಸ್ ಪಕ್ಷದ ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಜೆಡಿಎಸ್ ಪಕ್ಷದ ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್ ಪಾಲ್ಗೊಂಡಿದ್ದರು.
ಬ್ಯಾರಿಕೇಟ್ ಹಾಕಿ ಹೋರಾಟಗಾರರನ್ನು ತಡೆಯಲು ಯತ್ನಿಸಿದ ಪೊಲೀಸರು
ಮಂಡ್ಯ ಬಂದ್ ಹಿನ್ನೆಲೆಯಲ್ಲಿ ಹೋರಾಟಕ್ಕೆ ಬರುತ್ತಿದ್ದವರನ್ನು ಪೊಲೀಸರು ತಡೆದಿದ್ದಾರೆ ಎಂದು ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ಧರಣಿ ಸ್ಥಳದಲ್ಲಿ ಹೋರಾಟಗಾರರು ಪೊಲೀಸರ ವಿರುದ್ಧ ಕಿಡಿಕಾರಿದರು. ಪುಟ್ಟ ಪುಟ್ಟ ಮಕ್ಕಳು ಖಾಲಿ ಬಿಂದಿಗೆಗಳನ್ನು ಹೊತ್ತು ಹೋರಾಟದಲ್ಲಿ ಭಾಗವಹಿಸಿದ್ದರು. ಅಲ್ಲದೇ ಎಮ್ಮೆ ಹಾಗೂ ನಾಯಿಗಳನ್ನು ಕರೆತಂದು ಹೋರಾಟ ನಡೆಸುವ ಮೂಲಕ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಲಾಯಿತು.

ವೃತ್ತದ ಕಡೆಗೆ ನಾಲ್ಕು ದಿಕ್ಕಿನಲ್ಲೂ ಯಾವುದೇ ವಾಹನ ಸಂಚಾರ ಮಾಡದಂತೆ ಬ್ಯಾರಿಕೇಡ್ ಹಾಕಲಾಗಿತ್ತು, ಇದರಿಂದ ರೊಚ್ಚಿಗೆದ್ದ ಅಲ್ಲದೆ ಹೋರಾಟಗಾರರು ಬ್ಯಾರಿಕೇಡ್ ಗಳನ್ನು ಕಿತ್ತು ಒಗೆಯುವುದಾಗಿ ಕಿಡಿಕಾರಿದರು. ನಂತರ ಮುಖಂಡರಾದ ಸುನಂದ ಜಯರಾಂ ಮತ್ತು ಎಂಎಸ್ ಆತ್ಮಾನಂದ ಅವರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಬ್ಯಾರಿಕೇಟ್ ಗಳನ್ನು ತೆರವು ಮಾಡುವಂತೆ ಕೋರಿದರು.

ಈ ಸಂದರ್ಭದಲ್ಲಿ ಮುಖಂಡರಾದ ಜಿ.ಬಿ.ಶಿವಕುಮಾರ್, ಅಶೋಕ್ ಜಯರಾಮ್, ಸಿ.ಪಿ.ಉಮೇಶ್, ಸುನಂದಾ ಜಯರಾಮ್, ನಗರಸಭೆ ಮಾಜಿ ಅಧ್ಯಕ್ಷರಾದ ಅಂಬುಜಮ್ಮ, ನಿರ್ಮಲ ಚಿಕ್ಕೇಗೌಡ, ಸದಸ್ಯೆ ಮೀನಾಕ್ಷಿ, ಕೆ.ಬೋರಯ್ಯ, ಎನ್.ಎಸ್.ಇಂದ್ರೇಶ್, ಕನ್ನಡ ಸೇನೆ ಮಂಜುನಾಥ್, ಎಂ.ಎಲ್.ತುಳಸೀಧರ್, ಕಾರಸವಾಡಿ ಮಹದೇವ, ನೀನಾ ಪಟೇಲ್, ಎಂ.ವಿ.ಕೃಷ್ಣ, ಶಂಕರೇಗೌಡ, ಸಾತನೂರು ವೇಣುಗೋಪಾಲ್, ಬಿಜೆಪಿ ಶ್ರೀರಂಗಪಟ್ಟಣ ಮಂಡಲ ಅಧ್ಯಕ್ಷ ಪೀಹಳ್ಳಿ ರಮೇಶ್, ಮಂಡ್ಯ ನಗರ ಪ್ರಧಾನ ಕಾರ್ಯದರ್ಶಿ ಎಂ.ಚಾಮರಾಜು, ಶ್ರೀರಂಗಪಟ್ಟಣ ತಾ.ಪಂ.ಮಾಜಿ ಅಧ್ಯಕ್ಷ ಟಿ.ಶ್ರೀಧರ್, ಎಸ್.ಸಚ್ಚಿದಾನಂದ ಇಂಡುವಾಳು, ಕೀಲಾರ ಕೃಷ್ಣೇಗೌಡ, ರೈತಸಂಘದ ಮುದ್ದೇಗೌಡ,ಕೀಲಾರ ಶಿವಮೂರ್ತಿ ಎಲ್ಲರೊಳಗಾಗು ಮಂಕುತಿಮ್ಮ ಟ್ರಸ್ಟ್ ಅಧ್ಯಕ್ಷ ಎಂ.ವಿನಯ್ ಕುಮಾರ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.




