ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಯಾವುದೋ ಒಂದು ಧರ್ಮ, ಜಾತಿಗೆ ಸೀಮಿತವಾಗಿ ಜನರನ್ನು ಎತ್ತಿ ಕಟ್ಟಿ ರಾಜಕಾರಣ ಮಾಡುತ್ತಿರುವುದು ಅಕ್ಷಮ್ಯ ಅಪರಾಧ ಎಂದು ಬಿಜೆಪಿ ಮುಖಂಡ ಚಂದಗಾಲು ಶಿವಣ್ಣ ಆರೋಪಿಸಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಅವರು ಚನ್ನಪಟ್ಟಣದಲ್ಲಿ ಅಭಿವೃದ್ಧಿ ಕಾರ್ಯಗಳಿಗಾಗಿ ಮುಖ್ಯಮಂತ್ರಿಯವರ ವಿಶೇಷ ಅನುದಾನದಡಿ 50 ಕೋಟಿ ರೂ.ಹಣ ಮಂಜೂರು ಮಾಡಿಸಿಕೊಂಡು ಗುದ್ದಲಿ ಪೂಜೆ ನೆರವೇರಿಸುತ್ತಿದ್ದ ಸಂದರ್ಭದಲ್ಲಿ ಜೆಡಿಎಸ್ ಕಾರ್ಯಕರ್ತರು ಅವರ ಕಾರಿನ ಮೇಲೆ ಮೊಟ್ಟೆ ಹಾಗೂ ಕಲ್ಲು ತೂರಿ ಗೂಂಡಾ ವರ್ತನೆ ಮಾಡಿರುವುದು ಅಕ್ಷಮ್ಯ. ಎಚ್.ಡಿ.ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿ ವಿಶೇಷ ಅನುದಾನ ಏನು ಎಂಬುದನ್ನು ಅರ್ಥ ಮಾಡಿಕೊಳ್ಳದೆ ತಮ್ಮ ಪಕ್ಷದ ಕಾರ್ಯಕರ್ತರಿಂದ ಕಲ್ಲು,ಮೊಟ್ಟೆ ತೂರಿಸುವ ಮೂಲಕ ಜನರನ್ನು ಎತ್ತಿ ಕಟ್ಟಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕುಮಾರಸ್ವಾಮಿ ಅವರು ಶಿಷ್ಟಾಚಾರ,ತಾರತಮ್ಯದ ಬಗ್ಗೆ ಮಾತನಾಡುತ್ತಾರೆ. ಆದರೆ ಮಂಡ್ಯ ಜಿಲ್ಲೆಗೆ ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಒಂಬತ್ತು ಸಾವಿರ ಕೋಟಿ ಅನುದಾನವನ್ನು ಬಿಡುಗಡೆ ಗೊಳಿಸಿದ್ದು ಎಷ್ಟು ಸರಿ? ಕುಮಾರಸ್ವಾಮಿಯವರು ಇಡೀ ರಾಜ್ಯವನ್ನು ಕುಟುಂಬ ಎನ್ನುವ ಭಾವನೆಯಲ್ಲಿ ನೋಡಬೇಕಿತ್ತು. ಆದರೆ ತಮ್ಮ ಮಗ ಸ್ಪರ್ಧಿಸಿದ್ದಾನೆ ಎನ್ನುವ ಕಾರಣಕ್ಕೆ ಇಷ್ಟೊಂದು ದೊಡ್ಡ ಮೊತ್ತವನ್ನು ಮಂಡ್ಯ ಜಿಲ್ಲೆಗೆ ಮಾತ್ರ ಬಿಡುಗಡೆ ಮಾಡಿಸಿದ್ದು ತಾರತಮ್ಯವಲ್ಲವೇ ಎಂದು ಕಿಡಿ ಕಿಡಿಕಾರಿದರು.
ಚನ್ನಪಟ್ಟಣದಲ್ಲಿ ಮೊನ್ನೆ ನಡೆದ ಘಟನೆಗೆ ಸಂಪೂರ್ಣ ಹೊಣೆಯನ್ನು ಕುಮಾರಸ್ವಾಮಿಯವರೇ ಹೊರಬೇಕು. ರಾಜಕಾರಣ ಎಲ್ಲಾ ಕಾಲಕ್ಕೂ ಇರುತ್ತದೆ ವಿರೋಧ ಪಕ್ಷವಿದ್ದರೆ, ಆಡಳಿತ ಪಕ್ಷಗಳಿಗೂ ಬೆಲೆ, ಇನ್ನು ಮುಂದಾದರೂ ಶಿಷ್ಟಾಚಾರವನ್ನು ಹೇಗೆ ಗೌರವಿಸಬೇಕು ಎಂಬುದನ್ನು ಕುಮಾರಸ್ವಾಮಿ ಅರಿಯಲಿ. ಇಂತಹ ಸಣ್ಣ ಕಾರಣಕ್ಕಾಗಿ ಅನುದಾನ ವಾಪಸ್ ಹೋಗಬಾರದು, ಕುಮಾರಸ್ವಾಮಿಯವರಿಗೆ ಅವಮಾನವಾಗಿದ್ದರೆ ಅದನ್ನು ಪ್ರಶ್ನೆ ಮಾಡಲಿ, ಆದರೆ ಅದು ಬಿಟ್ಟು ಹೀಗೆ ಕಲ್ಲು ಮೊಟ್ಟೆ ತೂರಾಟ ಮಾಡಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಿ.ಎಸ್. ಪುಟ್ಟರಾಜುರವರು 600 ಕೋಟಿ ಅನುದಾನವನ್ನು ತಮ್ಮ ಕ್ಷೇತ್ರ ಪಾಂಡವಪುರಕ್ಕೆ ತೆಗೆದುಕೊಂಡು ಹೋದರು. ಆಗ ಶಾಸಕರಾದ ಎಂ.ಶ್ರೀನಿವಾಸ್ ಮತ್ತು ನಾರಾಯಣಗೌಡರು ನಮ್ಮ ಕ್ಷೇತ್ರಗಳಿಗೆ 100 ಕೋಟಿ ಕೊಟ್ಟಿದ್ದರೆ ಸಾಕಷ್ಟು ಅಭಿವೃದ್ಧಿ ಮಾಡಬಹುದಿತ್ತು ಎಂದು ದೂರಿದರು. ಆಗ ಇವೆಲ್ಲ ಕುಮಾರಸ್ವಾಮಿ ಹಲವರಿಗೆ ಗೊತ್ತಾಗಲಿಲ್ಲವೆ. 224 ಕ್ಷೇತ್ರಗಳನ್ನು ಒಂದೇ ರೀತಿ ನೋಡಬೇಕಾಗಿತ್ತಲ್ಲವೇ ಎಂದು ತಿರುಗೇಟು ನೀಡಿದರು.
ಕುಮಾರಸ್ವಾಮಿಯವರೇ ನಿಮ್ಮ ನಾಯಕತ್ವ ಕೇವಲ ಚನ್ನಪಟ್ಟಣಕ್ಕೆ ಸೀಮಿತವಲ್ಲ, 23 ಕ್ಷೇತ್ರಗಳಿಗೆ ಅನ್ಯಾಯವಾಗುವಂತೆ ನೋಡಿಕೊಳ್ಳಬೇಕು. ಮೈಶುಗರ್ ಅಭಿವೃದ್ಧಿ ವಿಚಾರದಲ್ಲಿ ನೂರಕ್ಕೆ ನೂರರಷ್ಟು ಸ್ಪಂದಿಸುವ ಕೆಲಸ ಮಾಡದ ಕುಮಾರಸ್ವಾಮಿ, ನನ್ನದು ತಾಯಿ ಹೃದಯ ಅಂತಾರೆ. ತಾಯಿ ಹೃದಯ ಎನ್ನುವ ನೀವು ಚುನಾವಣೆ ಬಂದಾಗ ಮಾತ್ರ ಇದನ್ನು ತೋರಿಸುತ್ತೀರಿ. ಬೇರೆ ದಿನ ಬೇಡವಾ? ಈ ರಾಜ್ಯದ ಎಲ್ಲಾ ಭಾಗಗಳಿಂದಲೂ ತೆರಿಗೆ ಸಂಗ್ರಹವಾಗುವ ಸಂದರ್ಭದಲ್ಲಿ ಒಂದೆರಡು ಕ್ಷೇತ್ರಗಳಿಗೆ ಹೆಚ್ಚಿನ ಅನುದಾನವನ್ನು ಕೊಡಿಸುವುದು ಎಷ್ಟು ಸರಿ? ಅಧಿಕಾರಿಗಳಿಗೆ ಧಮಕಿ ಹಾಕುವ ಮೂಲಕ ಅನುದಾನ ವಾಪಸ್ ಹೋಗುವಂತೆ ಮಾಡುತ್ತಿದ್ದೀರಿ. ವೈಯಕ್ತಿಕ ದ್ವೇಷ ಸಾಧನೆ ಬಿಟ್ಟು ಇಡೀ ರಾಜ್ಯವನ್ನು ನೋಡಿ ಮಾತನಾಡಿ ಎಂದು ಸವಾಲು ಹಾಕಿದರು.
ಗೋಷ್ಠಿಯಲ್ಲಿ ಬಿಜೆಪಿ ಮಾಧ್ಯಮ ವಕ್ತಾರ ಸಿ.ಟಿ ಮಂಜುನಾಥ್,ಸಾಮಾಜಿಕ ಜಾಲತಾಣದ ವಿನೋಬ ಉಪಸ್ಥಿತರಿದ್ದರು.




