ಮಾಜಿ ಪ್ರಧಾನಿ ಮತ್ತು ಜೆಡಿಎಸ್ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡರ ಬಗ್ಗೆ ಲಘುವಾಗಿ ಮಾತನಾಡಿದ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರನ್ನು ಕಾಂಗ್ರೆಸ್ ಪಕ್ಷ ಉಚ್ಚಾಟನೆ ಮಾಡಬೇಕೆಂದು ಜೆಡಿಎಸ್ ಕಾರ್ಯಕರ್ತರು ಆಗ್ರಹಿಸಿದರು.
ಮದ್ದೂರು ತಾಲ್ಲೂಕಿನ ಭಾರತೀನಗರದ ವಿಶ್ವೇಶ್ವರಯ್ಯ ವೃತ್ತದ ಬಳಿ ಘೋಷಣೆ ಕೂಗುತ್ತ ಮಾನವ ಸರಪಳಿ ರಚಿಸಿದ ಜೆಡಿಎಸ್ ಕಾರ್ಯಕರ್ತರು ರಾಜಣ್ಣ ಅವರ ವಿರುದ್ಧ ಹರಿಹಾಯ್ದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಚಿಕ್ಕತಿಮ್ಮೇಗೌಡ ಮಾತನಾಡಿ, ಗೌರವಾನ್ವಿತ ಮಾಜಿ ಪ್ರಧಾನಿ ಬಗ್ಗೆ ಇಷ್ಟೊಂದು ಲಘುವಾಗಿ ಮಾತನಾಡುತ್ತನೆಂದರೆ ಇವನೆಂತಹ ಲಜ್ಜೆಗೆಟ್ಟವನು. ದೇವೇಗೌಡರ ಕಾಲಿನ ಧೂಳಿಗೆ ಈತ ಸಮನಲ್ಲ. ತುಮಕೂರಿಗೆ ಹೇಮಾವತಿ ನೀರನ್ನು ತಂದು ಕೊಟ್ಟವರು ನಮ್ಮ ದೇವೇಗೌಡರ ವಿರುದ್ದ ಮಾತನಾಡಿದ ಇವನಿಗೆ ತಕ್ಕ ಶಾಸ್ತಿ ನಮ್ಮ ಪಕ್ಷದ ಕಾರ್ಯಕರ್ತರು ಮಾಡಲಿದ್ದಾರೆ ಎಂದು ಏಕ ವಚನದಲ್ಲೆ ಹರಿಹಾಯ್ದರು.
ನಂತರ ಮಾತಾನಾಡಿದ ಹಾಪ್ ಕಾಮ್ಸ್ ಸ್ವಾಮಿ, ಕಾಂಗ್ರೆಸ್ ಪಕ್ಷ ನೀಚ ಮನಸ್ಥಿತಿಯುಳ್ಳ ಕೆ.ಎನ್.ರಾಜಣ್ಣ ಅವರನ್ನು ಕೂಡಲೇ ಉಚ್ಚಾಟಿಸಿ ಎಚ್ಚರಿಕೆ ನೀಡಬೇಕು. ದೇವೆಗೌಡರ ಕಾಲಿಗೆ ಬಿದ್ದು ಕ್ಷಮೆ ಕೇಳಬೇಕು, ಇಲ್ಲವಾದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಮರಿ ಮಾದೇಗೌಡ,ದೇವರಹಳ್ಳಿ ವೆಂಕಟೇಶ್, ಕೆ.ಟಿ.ಸುರೇಶ್, ಗುರುದೇವರಹಳ್ಳಿ ಅರವಿಂದ್,ಅಣ್ಣೂರು ವಿನಯ್, ಯೋಗೇಂದ್ರ,ಕರಡಕೆರೆ ಯೋಗೇಶ್ ಮತ್ತಿತರರಿದ್ದರು.