Thursday, September 19, 2024

ಪ್ರಾಯೋಗಿಕ ಆವೃತ್ತಿ

ಆನೆ ಹಿಂಡನ್ನು ಕಾಡಿಗಟ್ಟಲು ದಿನೇಶ್ ಗೂಳಿಗೌಡ‌- ಮಧು ಮಾದೇಗೌಡ ಮನವಿ

ಮಂಡ್ಯ ಭಾಗದಲ್ಲಿ ಆನೆಗಳ ಹಾವಳಿ ಮಿತಿ ಮೀರಿದ್ದು, ರೈತರ ಜಮೀನಿಗೆ ದಾಳಿ ಮಾಡಿ ಬೆಳೆಗಳನ್ನು ನಾಶ ಮಾಡುವ ಮೂಲಕ ಸಾಕಷ್ಟು ನಷ್ಟ ಮಾಡಿವೆ.ಈ ಕಾರಣದಿಂದ ಕೂಡಲೇ ಆನೆಗಳ ಹಿಂಡನ್ನು ಕಾಡಿಗಟ್ಟಲು ಕ್ರಮ ವಹಿಸಬೇಕು ಎಂದು ವಿಧಾನ ಪರಿಷತ್ ಶಾಸಕ‌ರಾದ ದಿನೇಶ್ ಗೂಳಿಗೌಡ ಹಾಗೂ ಮಧು ಮಾದೇಗೌಡ ಅವರು ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ‌ (ಪಿಸಿಸಿಎಫ್) ಬ್ರಿಜೇಶ್ ಕುಮಾರ್ ದೀಕ್ಷಿತ್ ಅವರನ್ನು ಭೇಟಿ ಮಾಡಿ ಒತ್ತಾಯಿಸಿದರು.

ಹಿರಿಯ ಐಎಫ್‌ಎಸ್ ಅಧಿಕಾರಿ ಬ್ರಿಜೇಶ್ ಕುಮಾರ್ ದೀಕ್ಷಿತ್ ಅವರನ್ನು ಬೆಂಗಳೂರಿನ ಮಲ್ಲೇಶ್ವರದ ಅರಣ್ಯ ಭವನದಲ್ಲಿ ಬುಧವಾರ ಭೇಟಿ ಮಾಡಿದ ಇಬ್ಬರು ಶಾಸಕರು ಆನೆಗಳ ಹಾವಳಿ ಬಗ್ಗೆ ಸಮಾಲೋಚನೆ ನಡೆಸಿದರು.ಕೂಡಲೇ ಆನೆಗಳನ್ನು ಕಾಡಿಗಟ್ಟಿ ರೈತರ ಸಮಸ್ಯೆ ಪರಿಹರಿಸುವಂತೆ ಸೂಚಿಸಿದರು. ಮಂಡ್ಯ ಭಾಗದಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳು, ಕಾಡಾನೆಗಳ ದಾಳಿಯಿಂದ ಬೆಳೆಗಳಿಗೆ ಆಗುತ್ತಿರುವ ನಷ್ಟದ ಬಗ್ಗೆ ತಿಳಿಸಿದರು.

ಬೆಳೆ ನಾಶ ಮಾಡುತ್ತಿವೆ

ಕಳೆದೊಂದು ವಾರದಿಂದ ಮಂಡ್ಯ ಮತ್ತು ಮದ್ದೂರಿನ ಹಳ್ಳಿಗಳಿಗೆ ಐದು ಕಾಡಾನೆಗಳು ನುಗ್ಗಿ ರೈತರ ಕಬ್ಬಿನ ಬೆಳೆ ಮತ್ತು ಭತ್ತದ ಬೆಳೆಗಳನ್ನು ನಾಶ ಮಾಡುತ್ತಿವೆ.ಅವುಗಳನ್ನು ಕಾಡಿಗಟ್ಟಲು ರೈತರು ಪ್ರಯತ್ನ ಮಾಡುತ್ತಿದ್ದರೂ ಸಾಧ್ಯವಾಗುತ್ತಿಲ್ಲ. ಇದರಿಂದ ರೈತರಿಗೆ ತೀವ್ರ ತೊಂದರೆಯಾಗುತ್ತಿದೆ.‌ ಈಗಾಗಲೇ ಕಾಡಾನೆಗಳು ನಾಡಿಗೆ ನುಗ್ಗಿ ಹಾವಳಿ ಮಾಡಿದ ಬಗ್ಗೆಯೂ ಮಾಹಿತಿ ನೀಡಿದರು.

ನಾಗರಿಕರಲ್ಲಿ ಭೀತಿ

ಆನೆ ಕಾಟದಿಂದ ಮಂಡ್ಯ ಸುತ್ತಮುತ್ತಲಿನ ರೈತರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಯಭೀತರಾಗಿದ್ದಾರೆ. ಇದರಿಂದ ಹೊರಗಡೆ ಬರಲು, ಹೊಲ-ಗದ್ದೆಗಳಿಗೆ ಹೋಗಲು ಹೆದರುವ ಪರಿಸ್ಥಿತಿ ನಿರ್ಮಾಣ ಆಗಿದೆ. ಅವುಗಳನ್ನು ತಕ್ಷಣ ಕಾಡಿಗಟ್ಟಲು ಅರಣ್ಯ ಇಲಾಖೆ ಸಮರೋಪಾದಿಯಲ್ಲಿ ಕಾರ್ಯಪ್ರವೃತ್ತವಾಗಬೇಕು. ಪಕ್ಕದ ಜಿಲ್ಲೆಗಳಿಂದ ಹೆಚ್ಚುವರಿ ಸಿಬ್ಬಂದಿಯನ್ನು ಕರೆಸಿ ಕ್ರಮ ವಹಿಸಬೇಕು. ಅಲ್ಲದೆ, ಅವುಗಳು ಮುಂದೆ ಹೊಲಗಳಿಗೆ, ಊರಿಗೆ ನುಗ್ಗದಂತೆ‌, ಬೇಲಿ, ಕಂದಕ‌ ಮುಂತಾದ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದರು.

ಬೆಳೆ ಪರಿಹಾರಕ್ಕೆ ಒತ್ತಾಯ

ಈಗಾಗಲೇ ಕಾಡಾನೆ ಹಾವಳಿಯಿಂದ ಸಾಕಷ್ಟು ಬೆಳೆಗಳು ನಷ್ಟವಾಗಿವೆ. ಅವರ ಜೀವನಕ್ಕೆ ಆಧಾರವಾಗಿರುವ ಸಾಲ ಮಾಡಿ ಬೆಳೆದಂತಹ ಬೆಳೆಯೂ ಈಗ ಕಾಡು ಪ್ರಾಣಿಗಳ ಹಾವಳಿಯಿಂದ ಹಾಳಾಗಿವೆ. ಹೀಗಾಗಿ ಬೆಳೆ ನಷ್ಟಕ್ಕೆ ರೈತರಿಗೆ ಪರಿಹಾರ ಕೊಡಬೇಕು ಎಂದು ಶಾಸಕ‌ದ್ವಯರು ಒತ್ತಾಯಿಸಿದ್ದಾರೆ.

ಮನವಿಗೆ ಸ್ಪಂದನೆ

ಮನವಿಗೆ ಸ್ಪಂದಿಸಿದ ಪಿಸಿಸಿಎಫ್ ದೀಕ್ಷಿತ್ ಅವರು ಈ ಸಂಬಂಧ ಮೈಸೂರು, ಮಂಡ್ಯ ಭಾಗದ ಅರಣ್ಯಾಧಿಕಾರಿಗಳಿಗೆ ಕರೆ ಮಾಡಿ, ತಕ್ಷಣ ಸೂಕ್ತ ಕ್ರಮಕ್ಕೆ ಸೂಚನೆ ನೀಡಿದ್ದಾರೆ ಎಂದು ಶಾಸಕದ್ವಯರು ತಿಳಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!