Friday, September 20, 2024

ಪ್ರಾಯೋಗಿಕ ಆವೃತ್ತಿ

ರಾಮಮಂದಿರ ಉದ್ಘಾಟನೆ ತಡೆಗೆ ಅಲಹಾಬಾದ್ ಹೈಕೋರ್ಟ್‌ನಲ್ಲಿ ಪಿಐಎಲ್

ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಮತ್ತು ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮಕ್ಕೆ ತಡೆ ನೀಡಬೇಕೆಂದು ಕೋರಿ ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟ್‌ನಲ್ಲಿ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ.

ಗಾಜಿಯಾಬಾದ್ ಜಿಲ್ಲೆಯ ಭೋಲಾ ದಾಸ್ ಅವರು ಮೊದಲ ಪಿಐಎಲ್‌ ಸಲ್ಲಿಸಿದ್ದು, “ಜನವರಿ 22ರಂದು ಅಯೋಧ್ಯೆಯಲ್ಲಿ ನಡೆಯುವ ಪ್ರಾಣ-ಪ್ರತಿಷ್ಠಾಪನೆ ಸಮಾರಂಭದಲ್ಲಿ ಪ್ರಧಾನಿ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಭಾಗವಹಿಸುವುದನ್ನು ನಿರ್ಬಂಧಿಸಬೇಕು. 2024ರ ಲೋಕಸಭಾ ಚುನಾವಣೆ ಮುಗಿಯುವವರೆಗೆ ರಾಮಮಂದಿರಕ್ಕೆ ಅವರು ತೆರಳದಂತೆ ನಿರ್ಬಂಧ ಹೇರಬೇಕು. ನ್ಯಾಯದ ಹಿತಾಸಕ್ತಿಯಲ್ಲಿ ಸನಾತನ ಧರ್ಮ ಗುರು ಶಂಕರಾಚಾರ್ಯ ಮಠಗಳ ಒಪ್ಪಿಗೆ ಬರುವವರೆಗೆ ಉದ್ಘಾಟನೆಯನ್ನು ನಿರ್ಬಂಧಿಸಬೇಕು” ಎಂದು ಕೋರಿದ್ದಾರೆ.

ತಮ್ಮ ಅರ್ಜಿಯಲ್ಲಿ ದಾಸ್ ಅವರು ಪ್ರಧಾನಿ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಶಂಕರಾಚಾರ್ಯಗಳ ಮಠಗಳ ನಾಲ್ವರು ಮುಖ್ಯಸ್ಥರನ್ನು ಪ್ರತಿವಾದಿಗಳನ್ನಾಗಿ ಮಾಡಿದ್ದಾರೆ.

“ಆಡಳಿತಾರೂಢ ಬಿಜೆಪಿಯು ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಸಮಯದಲ್ಲಿ ಬಿಜೆಪಿ ತನ್ನ ರಾಜಕೀಯ ಹಿತಾಸಕ್ತಿಗಾಗಿ ಸನಾತನ ಸಂಸ್ಕೃತಿಯನ್ನು ನಾಶಪಡಿಸುತ್ತಿದೆ” ಎಂದು ಆರೋಪಿಸಲಾಗಿದೆ.

ಎರಡನೇ ಪಿಐಎಲ್‌ಅನ್ನು ಅಖಿಲ ಭಾರತ ವಕೀಲರ ಒಕ್ಕೂಟ (ಎಐಎಲ್‌ಯು) ಸಲ್ಲಿಸಿದೆ. ಇದು 2023ರ ಡಿಸೆಂಬರ್ 21 ರಂದು ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿ ಹೊರಡಿಸಿದ ಸುತ್ತೋಲೆಯನ್ನು ಪ್ರಶ್ನಿಸಿದೆ. “ಸರ್ಕಾರವು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ರಾಮಕಥೆ, ರಾಮಾಯಣ ಪಠಣ ಮತ್ತು ಭಜನೆ-ಕೀರ್ತನೆಗಳನ್ನು ಆಯೋಜಿಸುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದೆ. ರಾಜ್ಯದ ಎಲ್ಲ ಹನುಮಾನ್ ಮತ್ತು ವಾಲ್ಮೀಕಿ ದೇವಸ್ಥಾನಗಳಲ್ಲಿ ಕಲಶ ಯಾತ್ರೆ ನಡೆಸುವಂತೆ ಹೇಳಿದೆ. ಇದು ಧರ್ಮವನ್ನು ರಾಜಕೀಯಗೊಳಿಸುತ್ತಿದೆ” ಎಂದು ವಾದಿಸಲಾಗಿದೆ.

ಕೃಪೆ: ಈದಿನ.ಕಾಂ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!