ಕೇಂದ್ರ ಪುರಸ್ಕೃತ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಔಪಚಾರೀಕರಣ (PM FME) ಯೋಜನೆಯಡಿ ಬಾಕಿ ಇರುವ ಸಹಾಯಧನ ಪಾವತಿಸಲು ಕ್ರಮವಹಿಸಲಾಗುವುದು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ಕಾಂಗ್ರೆಸ್ ಶಾಸಕ ಮಧು ಜಿ.ಮಾದೇಗೌಡರ ಚುಕ್ಕೆ ರಹಿತ ಪ್ರಶ್ನೆಗೆ ವಿಧಾನ ಪರಿಷತ್ತಿನಲ್ಲಿ ಶುಕ್ರವಾರ ಉತ್ತರ ನೀಡಿರುವ ಸಚಿವರು, ರಾಜ್ಯದಲ್ಲಿ ಒಟ್ಟು 2,169 ಫಲಾನುಭವಿಗಳಿಗೆ ರೂ. 74.36 ಕೋಟಿ ಸಹಾಯಧನ ಪಾವತಿಸಲು ಬಾಕಿ (2024ರ ಜೂನ್ ಅಂತ್ಯಕ್ಕೆ) ಇದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪಾಲು ಸೇರಿ ಒಟ್ಟು 62.50 ಕೋಟಿ ರೂಪಾಯಿಗಳನ್ನು ಕೆಪೆಕ್ ಸಂಸ್ಥೆಗೆ ಬಿಡುಗಡೆ ಮಾಡಿದ್ದು, ಆ ಮೂಲಕ ಫಲಾನುಭವಿಗಳ ಖಾತೆಗೆ ವರ್ಗಾಯಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಸಹಾಯಧನ ಬಿಡುಗಡೆ ಮಾಡದಿರುವುದರಿಂದ ಯೋಜನೆಯ ಫಲಾನುಭವಿಗಳಿಗೆ ತೀವ್ರ ತೊಂದರೆ ಆಗುತ್ತಿರುವ ಬಗ್ಗೆ ಶಾಸಕ ಮಧು ಅವರು ಸರ್ಕಾರದ ಗಮನ ಸೆಳೆದಿದ್ದರು.
ಇದಕ್ಕೆ ಉತ್ತರಿಸಿರುವ ಕೃಷಿ ಸಚಿವರು, PM FME ಯೋಜನೆಯ ಮಹತ್ವವನ್ನು ಮನಗಂಡು ರಾಜ್ಯ ಸರ್ಕಾರ 2024-25ನೇ ಸಾಲಿನ ಆಯವ್ಯಯದಲ್ಲಿ ರೂ 80 ಕೋಟಿ ಅನುದಾನ ನಿಗದಿಪಡಿಸಿರುತ್ತದೆ. ಈಗಾಗಲೇ ಕೇಂದ್ರ ಪಾಲಿನ ರೂ. 37.50 ಕೋಟಿ ಅನುದಾನವು ಬಿಡುಗಡೆ ಆಗಿದ್ದು, ಇದಕ್ಕೆ ಅನುಗುಣವಾಗಿ ರಾಜ್ಯ ಸರ್ಕಾರದ ಪಾಲು ರೂ. 25 ಕೋಟಿ ಸೇರಿದಂತೆ ಒಟ್ಟು ರೂ. 62.50 ಕೋಟಿ ಅನುದಾನವನ್ನು ಕೃಷಿ ಆಯುಕ್ತರ ಮೂಲಕ PM FME ಯೋಜನೆಯ ರಾಜ್ಯ ನೋಡಲ್ ಏಜೆನ್ಸಿಯಾದ ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ (ಕೆಪೆಕ್) ಸಂಸ್ಥೆಗೆ ಬಿಡುಗಡೆ ಮಾಡಲಾಗಿದೆ. ಈ ಅನುದಾನವನ್ನು ಕೆಪೆಕ್ ಸಂಸ್ಥೆಯಿಂದ ಅರ್ಹ ಫಲಾನುಭವಿಗಳ ಬ್ಯಾಂಕ್ (Mirror Account) ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತಿದೆ ಎಂದು ವಿವರಿಸಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ 59 ಫಲಾನುಭವಿಗಳಿಗೆ ರೂ. 470.62 ಲಕ್ಷ; ಮೈಸೂರು- 34 ಫಲಾನುಭವಿಗಳಿಗೆ ರೂ. 192.77 ಲಕ್ಷ; ಹಾಸನ- 87 ಫಲಾನುಭವಿಗಳಿಗೆ ರೂ. 286.94 ಲಕ್ಷ ಹಾಗೂ ಚಾಮರಾಜನಗರ – 8 ಫಲಾನುಭವಿಗಳಿಗೆ ರೂ. 30.91 ಲಕ್ಷ ಸಹಾಯಧನ ಪಾವತಿಸಲು ಬಾಕಿ ಇದೆ.




