Thursday, September 19, 2024

ಪ್ರಾಯೋಗಿಕ ಆವೃತ್ತಿ

ಜಲಜೀವನ್ ಮಿಷನ್ ಯೋಜನೆಯಲ್ಲಿ ಭ್ರ‍‍‍‍ಷ್ಟಾಚಾರ – ಲೋಕಾಯುಕ್ತಕ್ಕೆ ದೂರು : ಪಿ.ಎಂ‌.ನರೇಂದ್ರಸ್ವಾಮಿ

ಜಲಜೀವನ್ ಮಿಷನ್ ಯೋಜನೆಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿದ್ದು, ತನಿಖೆ ನಡೆಸುವಂತೆ ದಾಖಲೆಗಳ ಸಮೇತ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಿದ್ದೇನೆ ಎಂದು ಮಾಜಿ ಸಚಿವ,ಕೆಪಿಸಿಸಿ ಉಪಾಧ್ಯಕ್ಷ ಪಿ.ಎಂ‌.ನರೇಂದ್ರ ಸ್ವಾಮಿ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು,ಈಗಾಗಲೇ ಜಿ.ಪಂ‌., ತಾ.ಪಂ., ಗ್ರಾ.ಪಂ ಹಾಗೂ 15 ನೇ ಹಣಕಾಸು ಯೋಜನೆಯಡಿ ಪ್ರತಿ ಗ್ರಾಮದ ಮನೆಗಳಿಗೆ ನಲ್ಲಿ ಸಂಪರ್ಕ ಇದೆ. ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ನಲ್ಲಿ ಸಂಪರ್ಕ ಹಾಕಲಾಗಿದೆ‌.

ಈಗ ಮತ್ತೆ ಜಲ ಜೀವನ್ ಮಿಷನ್ ಯೋಜನೆಯಡಿ ನಲ್ಲಿ ಇರುವವರಿಗೆ ಮತ್ತೆ ನಲ್ಲಿ  ಅಳವಡಿಸುತ್ತಿದ್ದಾರೆ. ಹಾಗಾದರೆ ಎರಡೆರಡು ಪೈಪ್ ಲೈನ್ ಹಾಕಿದ್ದಾರಾ? ಸಾರ್ವಜನಿಕರ ತೆರಿಗೆ ಹಣವನ್ನು ಈ ರೀತಿ ಪೋಲು ಮಾಡುತ್ತಿರುವುದು ಸರಿಯೇ ಎಂದು ಟೀಕಿಸಿದರು.

ಅಲ್ಲದೆ ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡಿಲ್ಲ. ಇಷ್ಟ ಬಂದ ಹಾಗೆ ಕಾಮಗಾರಿ ಮಾಡಲಾಗಿದೆ.
ನಿಗದಿಗಿಂತ ಕಡಿಮೆ ವ್ಯಾಸದ ಪೈಪುಗಳನ್ನು ಅಳಡಿಸಲಾಗಿದೆ. ಅವುಗಳ ಗುಣಮಟ್ಟವೂ ಕಡಿಮೆಯಿದೆ. ಇದಕ್ಕೆಲ್ಲಾ ಅನುಮೋದನೆ ನೀಡಿದವ್ಯಾರು? ಎಸ್ಟಿಮೇಟ್ ಸಿದ್ಧಪಡಿಸಿದರ‍್ಯಾರು? ಹಳೆಯ ಪೈಪ್‌ಲೈನ್ ಇದ್ದಾಗಲೂ ಹೊಸ ಪೈಪ್‌ಲೈನ್ ಮಾಡುವ ಅವಶ್ಯಕತೆ ಇತ್ತೇ? ಎಂಬೆಲ್ಲಾ ಪ್ರಶ್ನೆಗಳಿಗೆ ಲೋಕಾಯುಕ್ತ ತನಿಖೆಯಿಂದ ಉತ್ತರ ಸಿಗಬೇಕಿದೆ ಎಂದರು.

ಮಳವಳ್ಳಿ ಸೇರಿದಂತೆ ಇಡೀ ಜಿಲ್ಲೆಯಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ನಡೆದಿರುವ ಕಾಮಗಾರಿಯಲ್ಲಿ ದೊಡ್ಡ ಮಟ್ಟದ ಹಗರಣ ನಡೆದಿದೆ. ಹಲವೆಡೆ ಹಳೆಯ ಪೈಪ್‌ಲೈನ್‌ನೊಂದಿಗೆ ಹೊಸ ಪೈಪ್‌ಲೈನ್ ಮಾಡಲಾಗಿದೆ. ಕೆಲವೆಡೆ ಹಳೆಯ ಪೈಪ್‌ಲೈನ್‌ಗೆ ಸಂಪರ್ಕ ನೀಡಿ, ಹೊಸದಾಗಿ ಪೈಪ್‌ಲೈನ್ ಮಾಡಲಾಗಿದೆ ಎಂದು ಬಿಲ್ ಮಾಡಿಕೊಳ್ಳಲಾಗಿದೆ. ಎಸ್.ಆರ್. ದರಕ್ಕಿಂತ ಹೆಚ್ಚು ಮೊತ್ತಕ್ಕೆ ಟೆಂಡರ್ ನೀಡಲಾಗಿದೆ. ಬಹುತೇಕ ಕಾಮಗಾರಿಗಳಲ್ಲಿ ಶೇ.75ರಷ್ಟು ಸಾಮಗ್ರಿ ವೆಚ್ಚವಾಗಿ ಬಿಲ್ ಮಾಡಲಾಗಿದೆ ಎಂದು ಆರೋಪಿಸಿದರು.

ಶಾಸಕರ ಆಪ್ತರಿಗೆ ಕಾಮಗಾರಿ

ಮಳವಳ್ಳಿ ತಾಲೂಕಿನಲ್ಲಿ 127 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಟೆಂಡರ್ ಆಗಿದ್ದು, 6 ತಿಂಗಳಲ್ಲಿ ಕಾಮಗಾರಿ ಮುಗಿಯಬೇಕಿತ್ತು. ಆದರೆ, ಹಲವೆಡೆ 2 ವರ್ಷವಾದರೂ ಪೂರ್ಣವಾಗಿಲ್ಲ. ಒಂದೇ ಯೋಜನೆಗೆ 3-4 ಅನುದಾನಗಳನ್ನು ಬಳಸಲಾಗುತ್ತಿದೆ. ಹಳೆಯ ಬೋರ್‌ವೆಲ್‌ಗಳನ್ನೇ ತೋರಿಸಿ, ಬಿಲ್ ಮಾಡಲಾಗಿದೆ. ಸ್ಥಳೀಯ ಶಾಸಕರ ಆಪ್ತರೇ ಶೇ.50ರಷ್ಟು ಕಾಮಗಾರಿಗಳನ್ನು ನಿರ್ವಹಿಸುತ್ತಿದ್ದಾರೆ. ಈ ಮೂಲಕ ಸಾರ್ವಜನಿಕರ ತೆರಿಗೆ ಹಣ ಪೋಲಾಗುವ ಜತೆಗೆ ಲೂಟಿಯೂ ಆಗುತ್ತಿದೆ. ಇದಕ್ಕೆ ಸರಕಾರ ಕಡಿವಾಣ ಹಾಕಬೇಕೆಂದು ಆಗ್ರಹಿಸಿದರು.

ಕಾಂಕ್ರೀಟ್ ಹಾಕುತ್ತಿಲ್ಲ

ಜಲಜೀವನ್ ಮಿಷನ್ ಯೋಜನೆಯಡಿ 3 ಅಡಿ ಆಳದಲ್ಲಿ ಪೈಪ್‌ಲೈನ್ ಅಳವಡಿಸಬೇಕೆಂಬ ನಿಯಮವನ್ನು ಉಲ್ಲಂಘಿಸಲಾಗಿದೆ. ಪೈಪ್‌ಲೈನ್‌ಗಾಗಿ ರೋಡ್ ಕಟ್ಟಿಂಗ್ ಮಾಡಿದ್ದು, ಅವುಗಳಿಗೆ ಕಾಂಕ್ರಿಟ್ ರೀಫಿಲ್ಲಿಂಗ್ ಮಾಡುತ್ತಿಲ್ಲ ಎಂದು ಆರೋಪಿಸಿದ ಅವರು, ಬಹುಗ್ರಾಮ ಕುಡಿಯುವ ನೀರಿನ ಯೋಜನೆ  ಅನುಷ್ಠಾನ ಗೊಂಡಿರುವ ಗ್ರಾಮಗಳಲ್ಲೂ ಜಲಜೀವನ್ ಮಿಷನ್ ಯೋಜನೆಯಡಿ ಮನೆಮನೆಗೆ ಮತ್ತೊಂದು ಸಂಪರ್ಕ ನೀಡಲಾಗುತ್ತಿದೆಯೇ ಎಂದು ಮರು ಪ್ರಶ್ನೆ ಮಾಡಿದರು.

ಮಳವಳ್ಳಿ ತಾಲೂಕಿನಲ್ಲಿ ಬಿ.ಜಿ.ಪುರ ಮತ್ತು ಇತರ 56 ಹಳ್ಳಿಗಳು, ನೆಟ್ಕಲ್ ಮತ್ತು ಇತರ 20 ಗ್ರಾಮಗಳು, ಕಿರುಗಾವಲು ಮತ್ತು ಇತರ 46 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಮೂರು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಅನುಷ್ಠಾನಗೊಂಡಿವೆ. ಹೀಗಿದ್ದರೂ ಮತ್ತೆ ಮಾಡುವ ಅಗತ್ಯವಿತ್ತೇ ಎಂದು ಪ್ರಶ್ನಿಸಿದರು.

ದಿಕ್ಕು ತಪ್ಪಿದೆ

ಮಳವಳ್ಳಿ ತಾಲ್ಲೂಕಿನಲ್ಲಿ ಕುದ್ರೋಳಿ ಬಿಲ್ಡರ್ಸ್ ಅಂಡ್ ಇನ್ಪಸ್ಟ್ರಕ್ಚರ್ ಪ್ರೈ.ಲಿ. ಅವರಿಗೆ 64 ಕೋಟಿ ವೆಚ್ಚದ ಕಾಮಗಾರಿ ನೀಡಲಾಗಿತ್ತು. ಅವರು ಅರ್ಧಕ್ಕೆ ನಿಲ್ಲಿಸಿದ್ದಾರೆ. ಆದರೆ ಸಪ್ಲೈ ಬಿಲ್ ಎಂದು ಅವರಿಗೆ 40 ಕೋಟಿ ಹಣ ನೀಡಲಾಗಿದೆ. ಈಗ ಅವರಿಂದ ಹೆಚ್ಚುವರಿ ನೀಡಿರುವ ಹಣವನ್ನು ಇನ್ನೂ ವಸೂಲು ಮಾಡಿಲ್ಲ.
ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಜಲಜೀವನ್ ಮಿಷನ್ ಯೋಜನೆ ದಿಕ್ಕುತಪ್ಪಬಾರದು. ಜನರ ತೆರಿಗೆ ಹಣವೂ ಪೋಲಾಗಬಾರದು ಎಂಬುದಷ್ಟೇ ನನ್ನ ಉದ್ದೇಶ ಎಂದು ತಿಳಿಸಿದರು.

ಕಾಮಗಾರಿ ಪೂರ್ಣವಾಗದೆ ಬಿಲ್ ಮಂಜೂರು

ಮಳವಳ್ಳಿ ಪಟ್ಟಣದಲ್ಲಿ ಮಾಡಿರುವ 24*7 ಕುಡಿಯುವ ನೀರಿನ ಯೋಜನೆಗೆ 70 ಕೋಟಿ ರೂ.ವೆಚ್ಚ ಮಾಡಲಾಗಿದೆ. ಆದರೆ ಕಾಮಗಾರಿ ಸಂಪೂರ್ಣವಾಗಿ ಆಗದಿದ್ದರೂ ಪುರಸಭೆಯಿಂದ ಎಲ್ಲಾ ಬಿಲ್ ಪಾವತಿ ಮಾಡಲಾಗಿದೆ. ರೋಡ್ ಕಟಿಂಗ್ ಮುಚ್ಚಿಲ್ಲ, ಪೈಪ್ ಲೈನ್ ಕಾಮಗಾರಿ ಪೂರ್ಣವಾಗಿಲ್ಲ. ಆದರೂ ಬಿಲ್ ಪಾವತಿ ಮಾಡಲಾಗಿದ್ದು ಈ ಬಗ್ಗೆಯೂ ತನಿಖೆಗೆ ಆಗ್ರಹಿಸುತ್ತಿರುವುದಾಗಿ ತಿಳಿಸಿದರು.

ಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಜಿ.ಪಂ. ಮಾಜಿ ಅಧ್ಯಕ್ಷ ಸುರೇಶ್ ಕಂಠಿ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!