Friday, September 20, 2024

ಪ್ರಾಯೋಗಿಕ ಆವೃತ್ತಿ

ಪೋಕ್ಸೋ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯಿದೆ) ಮತ್ತು ಸನ್ಯಾಸಾಶ್ರಮ‌……..

ವಿವೇಕಾನಂದ ಎಚ್.ಕೆ

ಪೋಕ್ಸೋ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯಿದೆ ) ಮತ್ತು ಸನ್ಯಾಸಾಶ್ರಮ‌……..ಇಷ್ಟೊಂದು ದುರ್ಬಲ ವ್ಯವಸ್ಥೆಯಲ್ಲಿ ನಾವಿದ್ದೇವೆಯೇ…….

ಒಂದು ಪ್ರಖ್ಯಾತ, ಬೃಹತ್ ಶಿಕ್ಷಣ ಸಂಸ್ಥೆಗಳನ್ನು ನಡೆಸುವ, ರಾಜ್ಯದ ಪ್ರತಿಷ್ಠಿತ ಮಠ ಮತ್ತು ಅದರ ಮುಖ್ಯಸ್ಥರಾಗಿದ್ದ ರಾಜ್ಯದ ಅತ್ಯಂತ ಮಹತ್ವದ ಪ್ರಭಾವಿ ವ್ಯಕ್ತಿಯೂ ಆಗಿದ್ದ, ಪ್ರಗತಿಪರ ಚಿಂತನೆಯ ಕ್ರಾಂತಿಕಾರಿ ಮಠಾಧೀಶರು ಆಗಿದ್ದ ಗೌರವಾನ್ವಿತ ಪೂಜ್ಯ ಸ್ವಾಮೀಜಿಗಳೆಂಬ ವ್ಯಕ್ತಿಯನ್ನು ಒಂದು ದಿನ ದಿಢೀರನೆ ರಾಜ್ಯದ ಪೋಲೀಸರು ಬಂಧಿಸುತ್ತಾರೆ. ಅದಕ್ಕೆ ತನಿಖಾಧಿಕಾರಿಗಳು ನೀಡುವ ಕಾರಣ ಅವರ ಮೇಲೆ ಹೆಣ್ಣು ಮಕ್ಕಳಿಬ್ಬರು ನೀಡಿರುವ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರದ ದೂರು. ಇದನ್ನು ಕೇಳಿ ರಾಜ್ಯದ ಜನ ದಿಗ್ಬ್ರಮೆಗೆ ಒಳಗಾಗುತ್ತಾರೆ……

ನಂತರ ಉನ್ನತ ಅಧಿಕಾರಿಗಳಿಂದ ತನಿಖೆ ನಡೆಯುತ್ತದೆ. ಎಲ್ಲಾ ಸಾಕ್ಷಿ, ‌ದಾಖಲೆ, ಹೇಳಿಕೆಗಳನ್ನು ಪರಿಶೀಲಿಸಿ ರಾಜ್ಯದ ಪೋಲೀಸರು ಎರಡು ಪೋಕ್ಸೋ ಪ್ರಕರಣ ದಾಖಲಿಸಿ ವಿವರವಾದ ಆರೋಪ ಪಟ್ಟಿ ಸಲ್ಲಿಸುತ್ತಾರೆ. ಅದರಲ್ಲಿ ಈ ಪ್ರಸಿದ್ಧ ಮತ್ತು ಪ್ರಭಾವಿ ವ್ಯಕ್ತಿಯ ಮೇಲೆ ಅತ್ಯಾಚಾರವೂ ಸೇರಿ ಸಾಕಷ್ಟು ಅಸಹ್ಯ ರೀತಿಯ ವರ್ತನೆಯನ್ನು ಆರೋಪಿಸುತ್ತಾರೆ……

ನೆನಪಿಡಿ ಅವರ ವಯಸ್ಸು ಸುಮಾರು 65 ಮತ್ತು ಅವರು ನಮ್ಮ ನಿಮ್ಮಂತೆ ಸಾಮಾನ್ಯರಲ್ಲ. ಅವರ ಮೇಲೆ ಸುಳ್ಳು ಕೇಸು ಹಾಕುವುದು ಅಷ್ಟು ಸುಲಭವಲ್ಲ. ಈ ಆರೋಪದ ಪರಿಣಾಮ ಅವರು ಜೈಲಿಗೆ ಹೋಗಿ ಪೀಠಾಧಿಪತಿ ಸ್ಥಾನವನ್ನು ಕಳೆದುಕೊಳ್ಳುತ್ತಾರೆ……

ಕೇವಲ 14 ತಿಂಗಳು ಮಾತ್ರ ಕಳೆದಿದೆ. ಇಡೀ ವಾತಾವರಣ ಸಂಪೂರ್ಣ ಬದಲಾಗಿದೆ. ಅವರಿಗೆ ಜಾಮೀನು ಮಂಜೂರಾಗಿದೆ. ಅವರು ಮಠದ ಸ್ಥಳಕ್ಕೆ ಹೋಗಲು ನಿಷೇಧವಿದೆ. ಆದರು ಆ ಮಠದ ಮುಖ್ಯಸ್ಥರು ಈಗ ಅವರೇ. ದೂರದಿಂದಲೇ ಕೋಟ್ಯಾಂತರ ರೂಪಾಯಿಗಳ ಆಸ್ತಿಯ ಮಠವನ್ನು ನಿಯಂತ್ರಿಸುತ್ತಾರೆ. ಮತ್ತೆ ಆ ವ್ಯಕ್ತಿಯ ಪಾದಗಳಿಗೆ ಭಕ್ತರು ಕೈ ಮುಗಿದು ಪೂಜಿಸುತ್ತಾರೆ. ಅವರು ಎಂದಿನಂತೆ ಶ್ರೀ ಶ್ರೀ ಶ್ರೀ ಪರಮ ಪೂಜ್ಯ …….. ಸ್ವಾಮಿಗಳು….

ಇದು ನಾಟಕದ ಒಂದು ಅಧ್ಯಾಯ ಮಾತ್ರ.

ಎರಡನೇ ಅಧ್ಯಾಯದಲ್ಲಿ…..

ಆ ವ್ಯಕ್ತಿ ನಿಜವಾದ ಅಪರಾಧಿಯೋ, ನಿರಪರಾಧಿಯೋ ನ್ಯಾಯಾಲಯ ಮುಂದೆಂದೋ ಒಂದು ದಿನ ತೀರ್ಮಾನ ಮಾಡುತ್ತದೆ. ಅದರ ತೀರ್ಪನ್ನು ಪ್ರಶ್ನಿಸುತ್ತಾ ಮೇಲಿನ ನ್ಯಾಯಾಲಯಗಳು ಮತ್ತೆಷ್ಟೋ ವರ್ಷಗಳ ನಂತರ ಮತ್ತೆ ಬೇರೆಯ ತೀರ್ಪು ಕೊಡಬಹುದು. ಅದು ಬೇರೆ ವಿಷಯ. ಆದರೆ……

ಭಾರತದ ಸಂವಿಧಾನ, ಅಪರಾಧ ಕಾನೂನು, ಪೋಲೀಸ್ ವ್ಯವಸ್ಥೆ, ನ್ಯಾಯಾಂಗ ವ್ಯವಸ್ಥೆ, ಧಾರ್ಮಿಕ ವ್ಯವಸ್ಥೆ, ಸಮಾಜದ ಜನಸಾಮಾನ್ಯರು ಮತ್ತು ಮಾನವೀಯ ಮೌಲ್ಯಗಳು ಇಷ್ಟೊಂದು ಕೆಳ ಹಂತಕ್ಕೆ ಇಳಿದಿದೆಯೇ, ಇಡೀ ವ್ಯವಸ್ಥೆ ದುರ್ಬಲವಾಗಿದೆಯೇ, ಅಸಹಾಯಕವಾಗಿದೆಯೇ. ಈ ಸಂಶಯ ನಮ್ಮನ್ನು ಕಾಡುತ್ತಿಲ್ಲವೇ…..

ಚಿಕ್ಕ ಮಕ್ಕಳನ್ನು ಅತ್ಯಾಚಾರ ಮಾಡಿ, ಪೋಲೀಸರಿಂದ ಬಂಧನಕ್ಕೊಳಗಾಗಿ, ಜೈಲಿಗೆ ಹೋಗಿ, ಕೇಲವೇ ತಿಂಗಳುಗಳಲ್ಲಿ ಅಲ್ಲಿಂದ ಹೊರಬಂದು ಮತ್ತೆ ಅದೇ‌ ಸ್ಥಾನ ಗೌರವ ಪಡೆಯುವ ಸಮಾಜದಲ್ಲಿ ನಾವು ಬದುಕುವುದಾದರು ಹೇಗೆ, ಯಾರನ್ನು ನಂಬಿ ನಾವು ನೆಮ್ಮದಿಯಾಗಿರುವುದು, ಈ ಘಟನೆ ಈಗಾಗಲೇ ಹುಟ್ಟಾ ಕ್ರಿಮಿನಲ್ ಆಗಿರುವ ವ್ಯಕ್ತಿಗಳಿಗೆ ಪ್ರೋತ್ಸಾಹ ನೀಡಿದಂತಾಗಲಿಲ್ಲವೇ, ಕೊಲೆ ಅತ್ಯಾಚಾರಿಗಳಿಗೆ ಬಿಡುಗಡೆ ಭಾಗ್ಯ ಸಿಗುವಂತಾಗಲಿಲ್ಲವೇ. ಅಷ್ಟು ದೊಡ್ಡ ಆರೋಪಿಯೇ ಮತ್ತೆ ಸಮಾಜದಲ್ಲಿ ತಲೆ ಎತ್ತಿ ನಡೆಯುವಾಗ ಕಳ್ಳ, ವಂಚಕ, ಭ್ರಷ್ಟರು ಇದನ್ನು ಗಮನಿಸದೇ ಇರುತ್ತಾರೆಯೇ…….

ಇನ್ನು ಮೂರನೆಯ ಅಧ್ಯಾಯ…..

ನೇರವಾಗಿ ನಮಗೆ ಮತ್ತು ನಮ್ಮ ಆತ್ಮಸಾಕ್ಷಿಗೆ ಸಂಬಂಧಿಸಿದ್ದು. ಈ ಅಧ್ಯಾಯದಲ್ಲಿ ಆ ಮಠಾಧೀಶರ ಪಾತ್ರ ಇರುವುದಿಲ್ಲ. ಏಕೆಂದರೆ ಒಬ್ಬ ವ್ಯಕ್ತಿ ಈ ಸಮಾಜದಲ್ಲಿ ಹೇಗೆ ಬದುಕಬೇಕು ಎಂಬುದು ಆತನ ಸ್ವತಂತ್ರ ‌ನಿರ್ಧಾರ. ಒಬ್ಬ ಸ್ವಾಮೀಜಿಯಾಗಿ ನನ್ನ ನಡವಳಿಕೆ ಹೇಗಿರಬೇಕು ಎಂಬುದು ಅವರೇ ನಿರ್ಧರಿಸುತ್ತಾರೆ. ಅದರ ಪರಿಣಾಮ ಫಲಿತಾಂಶ, ಒಳಿತು ಕೆಡಕು ಅವರೇ ಅನುಭವಿಸುತ್ತಾರೆ.

ಆದರೆ ಈ ಸಮಾಜಕ್ಕೆ ಮತ್ತು ಇಲ್ಲಿನ ವ್ಯವಸ್ಥೆಗೆ ಏನಾಗಿದೆ. ವ್ಯವಸ್ಥೆ ವ್ಯಕ್ತಿಯಂತೆ ಸ್ವತಂತ್ರ ತೀರ್ಮಾನ ಕೈಗೊಳ್ಳುವುದಿಲ್ಲ. ಅದು ಒಂದು ಕ್ರಮಬದ್ಧ ನೀತಿ ನಿಯಮಗಳ ಧರ್ಮ ಮತ್ತು ಕಾನೂನು ಹೊಂದಿದೆ. ಸಾರ್ವಜನಿಕವಾಗಿ ವ್ಯಕ್ತಿಗಳು ಅದಕ್ಕೆ ಬದ್ದರಾಗಿಯೇ ನಡೆಯಬೇಕು. ಮನುಷ್ಯನ ಘನತೆಯನ್ನು ಕಾಪಾಡಿ ಸಮಾಜವನ್ನು ಕ್ರಮಬದ್ಧವಾಗಿ ಶತಶತಮಾನಗಳ ಕಾಲ ಮುನ್ನಡೆಸಲು ರೂಪಿಸಿಕೊಂಡ ನಿಯಮಗಳಿವು. ಸದ್ಯ ಸಂವಿಧಾನ ನಮ್ಮ ಅಂತಿಮ ನ್ಯಾಯಾಲಯ. ಅದು ಸಹ ಯಾವ ಕಾರಣದಿಂದಲೇ ಆಗಿರಲಿ ಈ ರೀತಿ ವಿವೇಚನೆ ಇಲ್ಲದೆ ಕೇವಲ ವಕೀಲಿಕೆಯ ಕಾರಣ ಆರೋಪಿ ಕೆಲವೇ ಸಮಯದಲ್ಲಿ ನಿರಾಳವಾಗುವುದು, ಜನ ಅವರನ್ನು ಮತ್ತೆ ವಿಜೃಂಭಿಸುವುದು ಭವಿಷ್ಯದ ದೃಷ್ಟಿಯಿಂದ ಎಷ್ಟು ಸರಿ.

ಹೌದು ಕಾನೂನಿನ ಪ್ರಕಾರ ಎಲ್ಲವೂ ಸರಿ ಇರಬಹುದು. ಇತರೆ ಪ್ರಕರಣಗಳಲ್ಲಿ ಇದನ್ನು ಗುರಾಣಿಯಾಗಿ ಬಳಸಬಹುದು, ವಾದ ಮಾಡುವ ಮೂಲಕ ಎಲ್ಲವನ್ನೂ ಸಮರ್ಥಿಸಬಹುದು‌‌ ಆದರೆ ನಮ್ಮೆಲ್ಲರ ಆತ್ಮಸಾಕ್ಷಿಗೆ ಏನೆಂದು ಉತ್ತರಿಸುವುದು. ಆ ಅತ್ಯಾಚಾರಕ್ಕೆ ಒಳಗಾದ ಮಕ್ಕಳಿಗೆ ಹೇಗೆ ಸಮಾಧಾನ ಮಾಡುವುದು. ಈ ವ್ಯವಸ್ಥೆ ಇರುವುದೇ ಹೀಗೆ ಎಂದು ಹೇಳೋಣವೇ…..

ನಾಲ್ಕನೇ ಅಧ್ಯಾಯದಲ್ಲಿ…..

ಒಂದು ವೇಳೆ ಆ ವ್ಯಕ್ತಿ ನಿರಪರಾಧಿಯೇ ಆಗಿದ್ದರೆ ಇಡೀ ವ್ಯವಸ್ಥೆ ಎಷ್ಟೊಂದು ಕಠೋರವಾಗಿ ಒಬ್ಬ ವ್ಯಕ್ತಿಯನ್ನು ಬಿಂಬಿಸಿದೆ ಎಂದು ಭಾವಿಸಿ ತಲೆ ತಗ್ಗಿಸಬೇಕಲ್ಲವೇ. ಆ ಮಕ್ಕಳು ಚಿಕ್ಕ ವಯಸ್ಸಿನಲ್ಲೇ ಅಷ್ಟು ದೊಡ್ಡ ಸುಳ್ಳು ಹೇಳುವ ಮಟ್ಟಕ್ಕೆ ಬೆಳೆದರೆ ಅಥವಾ ಅವರನ್ನು ಯಾರೋ ದುಷ್ಟರು ದುರುಪಯೋಗ ಪಡಿಸಿಕೊಂಡರೆ. ಯಾವುದೇ ನಿಜವಾದರೂ ವ್ಯವಸ್ಥೆ ಸರಿ ಇಲ್ಲ ಎಂದೇ ಹೇಳಬೇಕಾಗುತ್ತದೆ….

ಅಂತಿಮವಾಗಿ ಐದನೆಯ ಅಧ್ಯಾಯದಲ್ಲಿ……..

ಸ್ವಾಮೀಜಿಗಳಿಗೊಂದು ಕಿವಿ ಮಾತು……

ಮಾನ್ಯ ಗೌರವಾನ್ವಿತ ಪೂಜ್ಯ ಸ್ವಾಮೀಜಿಯವರೇ, ಸುಮಾರು 65 ವರ್ಷ ವಯಸ್ಸಿನ ನಿಮಗೆ ಈ ನೆಲ ಸಾಕಷ್ಟು ಕೊಟ್ಟಿದೆ. ನೀವು ಒಂದು ಸಣ್ಣ ಸಾಮ್ರಾಜ್ಯವನ್ನು ಬಹಳ ವರ್ಷಗಳ ಕಾಲ ಆಳಿದ್ದೀರಿ. ನಿಮ್ಮ ಆಡಳಿತ ಸಮಯದಲ್ಲಿ ನಿಜಕ್ಕೂ ಅನೇಕ ಒಳ್ಳೆಯ ಮಾನವೀಯ ಕೆಲಸಗಳನ್ನು ಮಾಡಿದ್ದೀರಿ. ಸಮ ಸಮಾಜದ ನಿರ್ಮಾಣಕ್ಕಾಗಿ ಸ್ವಲ್ಪ ಮಟ್ಟಿಗೆ ಶ್ರಮಿಸಿದ್ದೀರಿ. ಏನೋ ವೈಯಕ್ತಿಕ ಕಾಮನೆಗಳನ್ನು ನಿಯಂತ್ರಿಸಲು ಸಾಧ್ಯವಾಗದೆ ವಿಕೃತ ಮೆರೆದು ಸಿಕ್ಕಿ ಹಾಕಿಕೊಂಡಿದ್ದೀರಿ. ಬಹುತೇಕ ಎಲ್ಲವೂ ಬಟಾಬಯಲಾಗಿದೆ…..

ನೀವು ಸುಖದ ಸುಪ್ಪತ್ತಿಗೆಯನ್ನು ನೋಡಿದ್ದೀರಿ. ಜೈಲುವಾಸವನ್ನು ಅನುಭವಿಸಿದ್ದೀರಿ. ಇನ್ನು ಸಾಕು. ಒಮ್ಮೆ ಏಕಾಂತದಲ್ಲಿ ನಿಮ್ಮ ಆತ್ಮದೊಳಗೆ ಪ್ರವೇಶಿಸಿ. ಆಧ್ಯಾತ್ಮ ಚಿಂತಕರಾದ ನಿಮಗೆ ಅದು ಅಸಾಧ್ಯವೇನಲ್ಲ. ಒಂದು ವೇಳೆ ನೀವು ಘಟನೆಯಲ್ಲಿ ಭಾಗಿಯಾಗಿದ್ದರೆ ಕಾನೂನಿನ ಬಲೆಯೊಳಗೆ ಸಿಗದಂತೆ ವಿಷಾಧ ವ್ಯಕ್ತಪಡಿಸಿ ಅಥವಾ ನೀವು ನಿರಪರಾಧಿಯಾಗಿದ್ದರೆ ಯಾರು ಒಪ್ಪಲಿ ಬಿಡಲಿ ನೀವು ಮನಸ್ಸಿನ ಮಾತನ್ನು ಹೇಳಿ ವಾನಪ್ರಸ್ಥಾಶ್ರಮದಿಂದ ದಯವಿಟ್ಟು ಅಂತಿಮ ಸನ್ಯಾಸಾಶ್ರಮಕ್ಕೆ ತೆರಳಿ ಈ ಸಮಾಜಕ್ಕೆ ಒಂದು ತೆರೆದ ಮನಸ್ಸಿನ ತ್ಯಾಗದ ಸಂದೇಶ ನೀಡಿ….

ಈ ಸಮಾಜದಲ್ಲಿ ಸವಾಲು ಎಸೆದು ಗೆದ್ದವರು, ಫೀನಿಕ್ಸ್ ನಂತೆ ಬೂದಿಯಿಂದ ಎದ್ದು ಬಂದವರು, ಸೇಡು ತೀರಿಸಿಕೊಂಡವರು, ಹಿಯಾಳಿಸಿದವರ ಮುಂದೆ ಎದ್ದು ನಿಂತವರು ಸಾಕಷ್ಟು ಮಂದಿ ಇದ್ದಾರೆ. ಆದರೆ ಆತ್ಮಸಾಕ್ಷಿಯ ಕರೆಗೆ ಓಗೊಟ್ಟು ತ್ಯಾಗ ಮಾಡಿದ ಮಹಾಪುರುಷರು ಅತ್ಯಂತ ವಿರಳ. ಆ ಕೆಲಸವನ್ನು ನೀವು ಮಾಡಿದರೆ ಖಾವಿ ತೊಟ್ಟ ಸರ್ವಸಂಗ ಪರಿತ್ಯಾಗದ ಸಂಕೇತಕ್ಕೆ ಒಂದು ಅರ್ಥ ಬರುತ್ತದೆ ಮತ್ತು ನೀವು ಅದಕ್ಕೆ ಒಂದು ಮಾದರಿಯಾಗುವಿರಿ. ಆಯ್ಕೆ ನಿಮ್ಮ ವಿವೇಚನೆಗೆ ಬಿಟ್ಟದ್ದು…..

ಹಾಗೆಯೇ ಈ ಸ್ವಾಮೀಜಿಗೆ ಪಾದಪೂಜೆ ಮಾಡುವ ಅಥವಾ ಅವರನ್ನು ತಿರಸ್ಕರಿಸುವ ವಿವೇಚನೆ ಜನರಿಗೆ ಬಿಟ್ಟದ್ದು….

ಒಟ್ಟಿನಲ್ಲಿ ಮುಂದಿನ ನಮ್ಮ ಮಕ್ಕಳಿಗೆ ಇದರಿಂದ ಒಂದು ಸಂದೇಶ ರವಾನೆಯಾಗುತ್ತದೆ. ಅದು ಹೇಗಿರಬೇಕು ಎಂಬ ಆಯ್ಕೆ ನಮ್ಮೆಲ್ಲರಿಗೆ ಸೇರಿದ್ದು.
ದಯವಿಟ್ಟು ಯೋಚಿಸಿ ನಿರ್ಧರಿಸಿ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!