Friday, September 20, 2024

ಪ್ರಾಯೋಗಿಕ ಆವೃತ್ತಿ

ಇಸ್ರೇಲ್ ಬೆಂಬಲಿಸಿದ ಅಮೆರಿಕಾ| ಕಮಲ ಹ್ಯಾರಿಸ್ ಪಾರ್ಟಿಯ ಆಹ್ವಾನ ತಿರಸ್ಕರಿಸಿದ ಕವಯಿತ್ರಿ !

ಗಾಝಾದ ಮೇಲೆ ಇಸ್ರೇಲ್‌ ಘೋಷಿಸಿದ ಯುದ್ಧವನ್ನು ಅಮೆರಿಕ ಬೆಂಬಲಿಸಿದ್ದಕ್ಕೆ, ಭಾರತೀಯ ಮೂಲದ ಕವಯಿತ್ರಿ ರೂಪಿ ಕೌರ್ ಅವರು ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಕಳುಹಿಸಿದ ದೀಪಾವಳಿ ಪಾರ್ಟಿಯ ಆಹ್ವಾನವನ್ನು ತಿರಸ್ಕರಿಸಿದ್ದಾರೆ.

ಗಾಝಾದ ಮೇಲಿನ ಇಸ್ರೇಲ್‌ ದಾಳಿಯ ವೇಳೆ ಯುದ್ಧವನ್ನು ಅಮೆರಿಕ ಬೆಂಬಲಿಸಿರುವುದು, ಇಂತಹ ಸನ್ನಿವೇಶದಲ್ಲಿ ದೀಪಾವಳಿ ಆಚರಿಸುವುದು ಅಚ್ಚರಿ ತಂದಿದೆ ರೂಪಿ ಕೌರ್ ಅವರು ಹೇಳಿದ್ದಾರೆ.

ಈ ಬಗ್ಗೆ ಎಕ್ಸ್‌ನಲ್ಲಿ ಕೆನಡಾದ ಬರಹಗಾರ್ತಿ ರೂಪಿ ಕೌರ್ ಬರೆದುಕೊಂಡಿದ್ದು, ನಾಗರಿಕರ ಮೇಲಿನ ಅದರಲ್ಲೂ 50% ಮಕ್ಕಳ ಸಾಮೂಹಿಕ ಶಿಕ್ಷೆಯನ್ನು ಬೆಂಬಲಿಸುವ ದೇಶದ ಯಾವುದೇ ಆಹ್ವಾನವನ್ನು ನಾನು  ತಿರಸ್ಕರಿಸುತ್ತೇನೆ ಎಂದು ಹೇಳಿದ್ದಾರೆ.

ಇಂದು ಅಮೆರಿಕ ಸರ್ಕಾರವು ಗಾಝಾದ ಮೇಲೆ ಬಾಂಬ್ ದಾಳಿಗೆ ಧನಸಹಾಯ ಮಾತ್ರ ನೀಡುತ್ತಿಲ್ಲ, ಅವರು ಪ್ಯಾಲೆಸ್ತೀನಿಯನ್ನರ ವಿರುದ್ಧದ  ನರಮೇಧವನ್ನು ಸಮರ್ಥಿಸುತ್ತಿದ್ದಾರೆ. ಎಷ್ಟು ನಿರಾಶ್ರಿತರ ಶಿಬಿರಗಳು, ಆರೋಗ್ಯ ಸೌಲಭ್ಯಗಳು ಮತ್ತು ಆರಾಧನಾ ಸ್ಥಳಗಳನ್ನು ಸ್ಫೋಟಿಸಲಾಗಿದೆ ಎಂಬುದನ್ನು ಲೆಕ್ಕಹಾಕಿದೆಯಾ ಎಂದು ಕೌರ್ ಪ್ರಶ್ನಿಸಿದ್ದಾರೆ.

ಈ ಬಗ್ಗೆ ಯುಎಸ್ ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡಲು ಅವರು ದಕ್ಷಿಣ-ಏಷ್ಯಾದ ಸಮುದಾಯಕ್ಕೆ ಕರೆ ನೀಡಿದ್ದಾರೆ.

ಕಮಲಾ ಹ್ಯಾರಿಸ್ ಕಳೆದ ರಾತ್ರಿ ವಾಷಿಂಗ್ಟನ್‌ನಲ್ಲಿರುವ ತನ್ನ ಅಧಿಕೃತ ನಿವಾಸದಲ್ಲಿ ಸುಮಾರು 300 ಜನರೊಂದಿಗೆ ದೀಪಾವಳಿಯನ್ನು ಆಚರಿಸಿದ್ದು, ಅದರಲ್ಲಿ ಹೆಚ್ಚಿನವರು ಭಾರತೀಯರು ಭಾಗಿಯಾಗಿದ್ದರು.  ಈ ಆಚರಣೆಯನ್ನು ಬಹಿಷ್ಕರಿಸಲು ಹಲವು ಗುಂಪುಗಳು ಕರೆ ನೀಡಿದ್ದವು.

ಕಾರ್ಯಕ್ರಮದಲ್ಲಿ ಮಾತನಾಡಿದ್ದ ಹ್ಯಾರಿಸ್, ಯುದ್ಧದ ಬಗ್ಗೆ ಬಿಡೆನ್ ಆಡಳಿತದ ನಿಲುವನ್ನು  ಪುನರುಚ್ಛರಿಸಿದ್ದರು. ಅಧ್ಯಕ್ಷ ಜೋ ಬಿಡೆನ್ ಮತ್ತು ನಾನು, ತನ್ನನ್ನು ತಾನು ರಕ್ಷಿಸಿಕೊಳ್ಳುವ ಇಸ್ರೇಲ್‌ನ ನಿಲುವನ್ನು ಬೆಂಬಲಿಸಲು ಕೆಲಸ ಮಾಡುತ್ತಿದ್ದೇವೆ ಎಂದು ಎಲ್ಲರೊಂದಿಗೆ ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ. ಗಾಝಾದಲ್ಲಿರುವ ಜನರಿಗೆ ಮಾನವೀಯ ನೆರವು ನೀಡಬೇಕಾದ ಅಗತ್ಯವನ್ನು ನಾವು ಬೆಂಬಲಿಸುತ್ತೇವೆ ಎಂದು ಅವರು ಹೇಳಿದರು.

ಅ.7ರ ದಾಳಿಯ ನಂತರ ಹಮಾಸ್‌ನಿಂದ ಗಾಝಾದಲ್ಲಿ ಒತ್ತೆಯಾಳಾಗಿರಿಸಿದ್ದ 240 ಜನರನ್ನು ಉಲ್ಲೇಖಿಸಿದ ಹ್ಯಾರಿಸ್, ನಮಗೆ ಅಮೇರಿಕನ್ ಒತ್ತೆಯಾಳುಗಳನ್ನು ದೇಶಕ್ಕೆ ಕರೆತರುವುದು ಮುಖ್ಯವಾಗಿದೆ ಎಂದು ಹೇಳಿದ್ದಾರೆ. ಪ್ಯಾಲೆಸ್ತೀನ್‌ ಜನರಿಗೆ ಹಕ್ಕಿದೆ,  ಅವರು ಸ್ವ-ನಿರ್ಣಯ ಮತ್ತು ಘನತೆ ಹೊಂದಲು ಅರ್ಹರು. ನಾವು ಅದನ್ನು ಬೆಂಬಲಿಸುವುದನ್ನು ಮುಂದುವರಿಸುತ್ತೇವೆ ಎಂದು ಹ್ಯಾರಿಸ್ ಇದೇ ವೇಳೆ ಹೇಳಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!