Monday, November 23, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಪೊಲೀಸ್ ಇನ್ಸ್’ಪೆಕ್ಟರ್ ವಿರುದ್ದ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ

ಮಂಡ್ಯ ಗ್ರಾಮಾಂತರ ಠಾಣೆ ಪೊಲೀಸ್ ಇನ್ಸ್’ಪೆಕ್ಟರ್ ಶಿವಪ್ರಸಾದ್ ರಾವ್ ಹಾಗೂ ಸಿಬ್ಬಂದಿಗಳು ಪ್ರಭಾವ, ಅಮಿಷಗಳಿಗೆ ಬಲಿಯಾಗಿ ಜನವಿರೋಧಿ ಕರ್ತವ್ಯ ನಿರ್ವಹಿಸುತ್ತಿರುವ ಹಲವು ಘಟನೆಗಳು ವರದಿಯಾಗುತ್ತಿದ್ದು, ಅವರ ವಿರುದ್ದ ಸೂಕ್ರ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಮುಖಂಡರು ಸೋಮವಾರ ಪ್ರತಿಭಟನೆ ನಡೆಸಿದರು.

ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಪ್ರತಿಭಟನಕಾರರು, ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ, ಜೂಜಾಟ, ಅಪ್ರಾಪ್ತರಿಗೆ ಹುಕ್ಕಾ ಮಾರಾಟ ಹಾಗೂ ಕ್ಲಬ್, ಗದ್ದೆ ಬಯಲಿನಲ್ಲಿ ಇಸ್ಪೀಟ್ ದಂಧೆ ಅವ್ಯಾಹತವಾಗಿದೆ. ಠಾಣೆಯಲ್ಲಿ ಜನಸ್ನೇಹಿ ಆಡಳಿತ ನಡೆಯದೇ ಬಡ ಜನರನ್ನು ಬೆದರಿಸುವ ತಂತ್ರಗಳು ಜರುಗುತ್ತಿವೆ. ಇದಕ್ಕೆ ಮೊನ್ನೆ ನಡೆದ ಹೆಬ್ಬಕವಾಡಿ ಗ್ರಾಮದ ಇಬ್ಬರು ಮಹಿಳೆಯರ ಆತ್ಮಹತ್ಯೆ ಪ್ರಕರಣಗಳೇ ಉದಾಹರಣೆಯಾಗಿವೆ ಎಂದು ದೂರಿದರು.

ಮಂಡ್ಯ ತಾಲ್ಲೂಕಿನ ಬೂದನೂರು ಗ್ರಾಮ ಪಂಚಾಯತಿ ಕಚೇರಿ ಮುಂದೆ ಕಳೆದ ಮಾ.8-ರಂದು ನಿವೇಶನರಹಿತರು ಅಹೋರಾತ್ರಿ ಧರಣಿ ನಡೆಸುವಾಗ ಆಗಮಿಸಿದ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಆನಂದ್ ಕುಮಾರ್, ತಾಪಂ ಇಒ ವೀಣಾ ನೇತೃತ್ವದಲ್ಲಿ ಆಗಮಿಸಿದ ಅಧಿಕಾರಿಗಳ ತಂಡ ಅಹವಾಲು ಸ್ವೀಕರಿಸುತ್ತಿದ್ದಾಗ ಮಧ್ಯ ಪ್ರವೇಶಿಸಿದ ಗ್ರಾಪಂ ಅಧ್ಯಕ್ಷೆ ಮಾನಸ, ಸದಸ್ಯ ಬಿ.ಕೆ.ಕೆಂಪೇಗೌಡ ಅವರು ಪ್ರತಿಭಟನಾನಿರತರಿಗೆ ಧಮಕಿ ಹಾಕಿ, ಬೂದನೂರು ಸತೀಶ್ ಎಂಬುವರಿಗೆ ಕೊಲೆ ಬೆದರಿಕೆ ಹಾಕಿದರು. ಇದರಿಂದ ಬೇಸರಗೊಂಡ ಪ್ರತಿಭಟನಾಕಾರರು ಹಾಗೂ ಆ ವ್ಯಕ್ತಿಗಳ ನಡುವೆ ಮಾತಿನ ವಾಗ್ವಾದ ಜರುಗಿತು. ಈ ವೇಳೆ ಸ್ಥಳದಲ್ಲಿದ್ದ ಗ್ರಾಮಾಂತರ ಠಾಣೆ ಪೊಲೀಸ್ ಪೇದೆ ಪ್ರಕಾಶ್ ಹಾಗೂ ಸಿಬ್ಬಂದಿ ಸಮಾಧಾನಗೊಳಿಸಿ ಹೋದರು. ಬಳಿಕ ಈ ಇಬ್ಬರು ವ್ಯಕ್ತಿಗಳನ್ನು ಹೊರಗೆ ಕಳುಹಿಸಿ ಸಭೆ ನಡೆಸಲಾಯಿತು. ಗ್ರಾಪಂ ಸದಸ್ಯ ಬಿ. ಕೆ. ಕೆಂಪೇಗೌಡ ಅನಧಿಕೃತವಾಗಿ ಹುಕ್ಕಾ ಬಾರ್ ನಡೆಸುತ್ತಿರುವ ಬಗ್ಗೆ ಹಾಗೂ ಗ್ರಾಪಂ ಅವ್ಯವಹಾರಗಳ ಕುರಿತು ನಾವು ದೂರು ನೀಡಿದ್ದ ಹಿನ್ನಲೆಯಲ್ಲಿ ದುರುದ್ದೇಶಪೂರ್ವಕವಾಗಿ 6 ಜನರ ವಿರುದ್ಧ ಅವರ ದೂರು ದಾಖಲಿಸಿ ಮೊದಲು ನಾವು ನೀಡಿದ ದೂರನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿ ನಮ್ಮ ಹಕ್ಕುಗಳಿಗೆ ಚ್ಯುತಿ ಎಸಗಿ ಕರ್ತವ್ಯ ಲೋಪ ಮಾಡಿದ್ದಾರೆ ಎಂದು ದೂರಿದರು.

ಈ ವಿಚಾರವಾಗಿ ಮಂಡ್ಯ ಶಾಸಕರಾದ ಪಿ. ರವಿಕುಮಾರ್ ಗಣಿಗ ಅವರಿಗೆ ಗ್ರಾಮಸ್ಥರು ಮಾಹಿತಿ ನೀಡಿದಾಗ ಪೊಲೀಸ್ ಇನ್ಸ್’ಪೆಕ್ಟರ್ ಶಿವಪ್ರಸಾದ್ ರಾವ್ ಗ್ರಾಪಂ ಅಧ್ಯಕ್ಷೆಯ ದೂರಿನಲ್ಲಿ ತಿರುಳಿಲ್ಲ, ಅ ಸಂಬಂಧ ಬಿ ರಿಪೋರ್ಟ್ ಹಾಕುತ್ತಿರುವುದಾಗಿ ತಿಳಿಸಿದ್ದಾರೆ. ಕರ್ತವ್ಯಕ್ಕೆ ಅಡ್ಡಿ, ನೀರಿನ ಬಾಟಲಿಯಿಂದ ಹಲ್ಲೆ ಮುಂತಾಗಿ ಆರೋಪಿಸಿರುವುದು ದೂರು ಸತ್ಯಕ್ಕೆ ದೂರವಾಗಿದೆ. ಅ ರೀತಿ ಕೃತ್ಯ ನಡೆದಿದ್ದರೆ ಸ್ಥಳದಲ್ಲಿದ್ದ ಜಿಪಂ ಉಪ ಕಾರ್ಯದರ್ಶಿ, ತಾಪಂ ಇಒ ದೂರು ಸಲ್ಲಿಸುತ್ತಿದ್ದರು. ಕನಿಷ್ಠ ಸಾಕ್ಷಿಗಳಾಗಿ ಪರಿಗಣಿಸಬಹುದಿತ್ತು. ಗ್ರಾಪಂ ಅಧೀನ ಸಿಬ್ಬಂದಿಗಳನ್ನು ಸಾಕ್ಷಿಗಳಾಗಿ ಮಾಡಿಕೊಂಡು ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಲಿಸಿರುವುದನ್ನು ಗಮನಿಸಬಹುದಾಗಿದೆ. ಇದರಿಂದಾಗಿ ಬಡ, ದಲಿತ ಮಹಿಳೆಯರು ಆತಂಕಗೊಂಡಿದ್ದು, ಅವರ ಜೀವಹಾನಿಯಾದರೆ ಈ ಅಧಿಕಾರಿ ಹಾಗೂ ಸಿಬ್ಬಂದಿಯೇ ನೇರ ಹೊಣೆ ಎಂದು ಪೊಲೀಸರ ವಿರುದ್ದ ಕಿಡಿಕಾರಿದುರ.

ಅನಧಿಕೃತ ಹುಕ್ಕಾ ಬಾರ್ ಪ್ರಕರಣದಲ್ಲಿ ನಾವು ನೀಡಿದ ಮಾಹಿತಿಯನ್ನು ಬಹಿರಂಗಪಡಿಸಿ ಲೋಪ ಎಸಗಲಾಗಿದೆ. ಅಪ್ರಾಪ್ತರಿಗೆ ಹುಕ್ಕಾ ಮಾರಾಟ, ಕಳ್ಳತನ ಪ್ರಕರಣ ನಡೆದಿದ್ದರೂ ಪ್ರಭಾವಕ್ಕೆ ಒಳಗಾಗಿ ಮುಚ್ಚಿ ಹಾಕುವ ಮೂಲಕ ಲೋಪವೆಸಗಿಲಾಗಿದೆ.ಅಲ್ಲದೆ ನ್ಯಾಯಾಲಯದ ಸಮನ್ಸ್ ಜಾರಿ ಮಾಡುವಲ್ಲಿ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಇವೆಲ್ಲ ಘಟನೆಗಳ ಬಗ್ಗೆ ತಮಗೆ ದೂರು ನೀಡಿದರೂ ಕ್ರಮವಾಗಿಲ್ಲ. ಕೂಡಲೇ ಈ ಕುರಿತು ಸದರಿ0 ಅಧಿಕಾರಿ, ಸಿಬ್ಬಂದಿ ವಿರುದ್ಧ ತನಿಖೆ ನಡೆಸಿ ಸೂಕ್ತ ಕ್ರಮ ವಹಿಸಬೇಕು. ಈ ಕೂಡಲೇ ಠಾಣೆಯಿಂದ ವರ್ಗಾವಣೆ ಮಾಡಬೇಕು ಎಂದು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಅವರಿಗೆ ದೂರು ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಸಾಮಾಜಿಕ ಹೋರಾಟಗಾರ ಬೂದನೂರು ಸತೀಶ್, ನಾವು ದ್ರಾವಿಡರು ಸಂಘಟನೆಯ ಅಭಿಗೌಡ, ಕರವೇ (ಶಿವರಾಮೇಗೌಡ ಬಣ) ಜಿಲ್ಲಾಧ್ಯಕ್ಷ ಹೆಚ್.ಡಿ.ಜಯರಾಂ, ಗಂಗರಾಜ್, ನರಸಿಂಹಮೂರ್ತಿ, ಜಾಗೃತ ಕರ್ನಾಟಕದ ನಗರಕೆರೆ ಜಗದೀಶ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ