ಸಂಗ್ರಹ: ರೈತರ ಶಾಲೆ , ಮಂಡ್ಯ
ಏಳು ಬಗೆಯ ಸಸ್ಯಮೂಲಗಳನ್ನು ಬಳಸಿ ತಯಾರಿಸುವ ‘ಪೂಚಿ ಮರಂದು’ ಎಲ್ಲ ಬಗೆಯ ಕೀಟಗಳನ್ನೂ ನಿಯಂತ್ರಿಸುತ್ತದೆ. ಹಾಗಾಗಿ ಇದನ್ನು Brad Spectrum Biopesticide ಎಂದು ಕರೆಯುತ್ತಾರೆ.
ತರಕಾರಿ ಬೆಳೆಗೆ ಬರುವ ಎಲ್ಲ ಬಗೆಯ ಕೀಟಗಳನ್ನು ನಿಯಂತ್ರಿಸುವುದಲ್ಲದೆ, ಹೂ ಉದುರುವುದನ್ನು ತಪ್ಪಿಸುತ್ತದೆ. ತೊಗರಿ, ಅವರೆ ಮತ್ತು ವಿವಿಧ ತರಕಾರಿ ಬೆಳೆಗಳ ಕಾಯಿಕೊರಕ ಹುಳುಗಳನ್ನು ‘ಪೂಚಿ ಮರುಂದು’ ಸಿಂಪಡಿಸುವ ಮೂಲಕ ನಿಯಂತ್ರಿಸಬಹುದು.
ತಯಾರಿಸುವ ವಿಧಾನ: ಬೇವಿನ ಬೀಜ, ಹಸಿ ಶುಂಠಿ, ಲೋಳೆಸರ, ಲಕ್ಕಿ ಸೊಪ್ಪು, ಎಕ್ಕದ ಎಲೆ, ಸೀತಾಪಲದ ಎಲೆ ಮತ್ತು ವಿಷಮಧಾರೆ ಸೊಪ್ಪು ಹೀಗೆ ಈ ಏಳು ಪದಾರ್ಥಗಳನ್ನು ತಲಾ ಒಂದು ಕೆಜಿಯಂತೆ ಪ್ರತ್ಯೇಕವಾಗಿ ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ.
ನಂತರ ಎಲ್ಲವನ್ನೂ ಪಾತ್ರೆಯೊಂದರಲ್ಲಿ ಹಾಕಿ ಮಿಕ್ಸ್ ಮಾಡಿ ಒಂದು ವಾರ ಎತ್ತಿಡಿ. ಪ್ರತಿ ದಿನ ದ್ರಾವಣವನ್ನು ತಿರುವುತ್ತಿರಬೇಕು. ವಾರದ ನಂತರ ದ್ರಾವಣವನ್ನು ಸೋಸಿ ಎತ್ತಿಟ್ಟುಕೊಳ್ಳಿ.
ಹೀಗೆ ಸಿದ್ದವಾದದ ‘ಪೂಚಿ ಮರುಂದು’ ಕೀಟನಾಶಕವನ್ನು ಒಂದು ಲೀಟರ್ ಹತ್ತು ಲೀಟರ್ ನೀರು ಸೇರಿಸಿ ಬೆಳೆಗಳಿಗೆ ಸಿಂಪಡಿಸಬಹುದು.
ಹೆಗ್ಗಡದೇವನಕೋಟೆ, ಪಿರಿಯಾಪಟ್ಟಣ ಮತ್ತು ಕೊಳ್ಳೇಗಾಲ ಸುತ್ತಮುತ್ತಲಿನ ರೈತರು ಕಡಿಮೆ ವೆಚ್ಚದಲ್ಲಿ ಸಿದ್ದವಾಗುವ ಈ ಸಸ್ಯಮೂಲದ ಕೀಟನಾಶಕವನ್ನು ಬೆಳೆಗಳಿಗೆ ಸಿಂಪಡಿಸಿ ಒಳ್ಳೆಯ ಫಲಿತಾಂಶವನ್ನು ಕಂಡುಕೊಂಡಿದ್ದಾರೆ. ಕೃಷ್ಣ ಪ್ರಸಾದ್ , ಸಹಜ ಸಮೃದ್ಧ ಅವರು.
(ಪೂಚಿ ಮರುಂದು ತಮಿಳುನಾಡಿನ ಪಾರಂಪರಿಕ ಕೃಷಿ ಪದ್ದತಿಯಿಂದ ಬಂದ ಜನಪದ ಔಷಧ. ಪೂಚಿ ಅಂದರೆ ಕೀಟ, ಮರುಂದು ಅಂದರೆ ಔಷಧ)




