Thursday, September 19, 2024

ಪ್ರಾಯೋಗಿಕ ಆವೃತ್ತಿ

ಬಡವರು, ಮಧ್ಯಮ ವರ್ಗಕ್ಕೆ ಆರೋಗ್ಯ ಸೇವೆ ತಲುಪಲಿ : ಕೆ.ಸಿ ಮಂಜುನಾಥ್

ಪ್ರಸ್ತುತ ದಿನಗಳಲ್ಲಿ ಆರೋಗ್ಯ ಸೇವೆಗಳು ಬಡವರು ಮತ್ತು ಮಧ್ಯಮ ವರ್ಗಗಳಿಗೆ ಗಗನ ಕುಸುಮವಾಗಿವೆ, ಆದ್ದರಿಂದ ಸರ್ಕಾರ ಆರೋಗ್ಯ ಸೇವೆಗಳು ಅವರಿಗೆ ಸಮರ್ಪಕವಾಗಿ ತಲುಪುವಂತಾಗಲಿ ಎಂದು ಮಂಡ್ಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಸಿ ಮಂಜುನಾಥ್ ತಿಳಿಸಿದರು.

ಮಂಡ್ಯ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಮಂಡ್ಯನಗರದ ಪತ್ರಕರ್ತರ ಸಂಘದಲ್ಲಿ ನಡೆದ ‘ಜಿಲ್ಲಾ ಮಟ್ಟದ ಮಾಧ್ಯಮ ಮಿತ್ರರಿಗೆ ಆರೋಗ್ಯ ಕಾರ್ಯಕ್ರಮಗಳ ಒಂದು ದಿನದ ಕಾರ್ಯಗಾರ’ದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಒಕ್ಕೂಟ ಸರ್ಕಾರ, ರಾಜ್ಯ ಸರ್ಕಾರ ಹಾಗೂ ವಿಶ್ವ ಆರೋಗ್ಯ ಸಂಸ್ಥೆಗಳು ಬಡವರಿಗೆ ಉತ್ತಮ ಆರೋಗ್ಯ ಸೌಲಭ್ಯಗಳನ್ನು ತಲುಪಿಸಲು ಹಲವಾರು ಯೋಜನೆಗಳನ್ನು ರೂಪಿಸಿವೆ. ಅವುಗಳನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಅಗತ್ಯವಿರುವವರಿಗೆ ತಲುಪಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕೆಂದು ಕಿವಿಮಾತು ಹೇಳಿದರು.

ಜಿಲ್ಲಾ ಆಶ್ರಿತರೋಗ ನಿಯಂತ್ರಣಾಧಿಕಾರಿ ಡಾ. ಭವಾನಿ ಶಂಕರ್ ಮಾತನಾಡಿ, ಸಾರ್ವಜನಿಕರಿಗೆ ಆರೋಗ್ಯ ಇಲಾಖೆಯಿಂದ ಹಮ್ಮಿಕೊಳ್ಳುವ ಆರೋಗ್ಯ ಕಾರ್ಯಕ್ರಮಗಳ ಅರಿವು ಅಗತ್ಯ. ಸರ್ಕಾರ ಸಾರ್ವಜನಿಕರಿಗಾಗಿ ಹಲವು ಆರೋಗ್ಯದ ಸವಲತ್ತುಗಳನ್ನು ವಿತರಿಸುತ್ತದೆ. ಸಾರ್ವಜನಿಕರಿಗೆ ಇದರ ಮಾಹಿತಿ ಇಲ್ಲಾದಿದ್ದಲ್ಲಿ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನ ಕಷ್ಟಕರವಾಗುತ್ತದೆ. ಪ್ರಚಾರಕ್ಕೆ ಮಾಧ್ಯಮಗಳು ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಸಂಜಯ್ ಅವರು ಮಾತನಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕು ಆರೋಗ್ಯ ಕೇಂದ್ರ, ಜಿಲ್ಲಾ ಆರೋಗ್ಯ ಕೇಂದ್ರಗಳು ಸಾರ್ವಜನಿಕರಿಗಾಗಿ ಕಾರ್ಯನಿರ್ವಹಿಸುತ್ತಿದ್ದು, ಸಮುದಾಯ ಆರೋಗ್ಯಾಧಿಕಾರಿಗಳು ಗ್ರಾಮೀಣ ಪ್ರದೇಶಗಳಲ್ಲೂ ಲಭ್ಯವಿರುತ್ತಾರೆ ಗ್ರಾಮೀಣ ಜನರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಶ್ರೀರಂಗಪಟ್ಟಣ ತಾಲ್ಲೂಕಿನ ನಗುವನಹಳ್ಳಿ, ಮೇಲುಕೋಟೆ, ಚಿಕ್ಕ ಅರಸಿನಕೆರೆ ಗ್ರಾಮಗಳು ತಂಬಾಕು ಮುಕ ಗ್ರಾಮವಾಗಿದ್ದು, ಈ ಸಂಬಂಧ ರಾಜ್ಯ ಮಟ್ಟದ ಬಹುಮಾನ ಪಡೆದಿದ್ದೇವೆ. ಮಂಡ್ಯ ಜಿಲ್ಲೆಯನ್ನು ಸಂಪೂರ್ಣ ತಂಬಾಕು ಮುಕ್ತ ಜಿಲ್ಲೆಯನ್ನಾಗಿಸೋಣ ಈ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಿ ಕೆಲಸ ಮಾಡೋಣ ಎಂದರು.

ಇತ್ತೀಚೆಗಷ್ಟೆ ಮದ್ದೂರು ಬಳಿ ಅನಧಿಕೃತವಾಗಿ ತೆರದಿದ್ದ ಹುಕ್ಕಬಾರ್ ನ್ನು ನಿಷೇಧಿಸಿದ್ದೇವೆ. ಅಪ್ರಾಪ್ತ ಮಕ್ಕಳು ಇಂಹತ ದುಶ್ಚಟಗಳಿಗೆ ಬಲಿ ಆಗುತ್ತಿದ್ದಾರೆ. ಜಿಲ್ಲೆಯಲ್ಲಿ ಹುಕ್ಕಬಾರ್ ನ್ನು ಸಂಪೂರ್ಣ ನಿಷೇಧಿಸುವುದಕ್ಕೆ ಮಾಧ್ಯಮದವರ ಬೆಂಬಲ ಅಗತ್ಯವಿದೆ ಎಂದರು.

ಆರೋಗ್ಯ ಶಿಕ್ಷಣಾಧಿಕಾರಿ ಡಾ.ವೇಣುಗೋಪಾಲ ಅವರು ಆಯುಷ್ಮಾನ್ ಆರೋಗ್ಯ ಕಾರ್ಡ್, ಪ್ರಧಾನಮಂತ್ರಿ ಜನೌಷಧಿ ಕೇಂದ್ರ, ತಾಯಿ ಕಾರ್ಡ್, ಜನನಿ ಸುರಕ್ಷಾ ಯೋಜನೆ,  ಭ್ರೂಣಲಿಂಗ ಪತ್ತೆ, ನಮ್ಮ ಕ್ಲಿನಿಕ್, ಈ-ಸಂಜೀವಿನಿ, ಶ್ರವಣ ದೋಷ ನಿಯಂತ್ರಣ ಮತ್ತು ನಿವಾರಣೆಯ ಬಗ್ಗೆ ತರಬೇತಿ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಆಶಾಲತಾ, ಆರೋಗ್ಯ ಇಲಾಖೆಯ ಡಾ.ಅನಿಲ್ ಕುಮಾರ್, ತಿಮ್ಮರಾಜು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!