ರಸ್ತೆ ಕಾಮಗಾರಿ ಸಂಪೂರ್ಣ ಕಳಪೆಯಾಗಿ ಮಾಡುತ್ತಿದ್ದ ಹಿನ್ನಲೆಯಲ್ಲಿ ಸಿಟ್ಟಿಗೆದ್ದ ಗ್ರಾಮಸ್ಥರು ಗುತ್ತಿಗೆದಾರನಿಗೆ ಛೀಮಾರಿ ಹಾಕಿ ಕೆಲಸ ನಿಲ್ಲಿಸಿದ ಘಟನೆ ನಡೆದಿದೆ.
ಮಂಡ್ಯ ತಾಲ್ಲೂಕಿನ ಕಾಳೇನಹಳ್ಳಿ ಗ್ರಾಮದಲ್ಲಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಕರೆದಿರುವ ಟೆಂಡರ್ ನಲ್ಲಿ ಕಾಳೇನಹಳ್ಳಿ ಗ್ರಾಮದಲ್ಲಿ 20ಲಕ್ಷ ರೂ.ಗಳ ರಸ್ತೆ ಕಾಮಗಾರಿ ನಡೆಸಲಾಗುತ್ತಿದೆ.ರಸ್ತೆ ಕಾಮಗಾರಿ ಮಾಡುವ ಮೊದಲು ಚರಂಡಿ ಕಾಮಗಾರಿ ಮಾಡಬೇಕು.
ಆದರೆ ಕಾಳೇನಹಳ್ಳಿ ಗ್ರಾಮದ ಈ ರಸ್ತೆಯಲ್ಲಿ ಒಂದು ಭಾಗದಲ್ಲಿ ಮಾತ್ರ ಚರಂಡಿ ಇದ್ದು,ಮತ್ತೊಂದು ಭಾಗದಲ್ಲಿ ಚರಂಡಿ ಇಲ್ಲ.ಅವೈಜ್ಞಾನಿಕವಾಗಿ ರಸ್ತೆ ಕಾಮಗಾರಿ ಮಾಡಲಾಗುತ್ತಿದೆ.
ಬೆಂಗಳೂರಿನ ವಿನಯ್ ಎಂಬ ಗುತ್ತಿಗೆದಾರರು ಈ ಕಾಮಗಾರಿ ಮಾಡಬೇಕು.ಆದರೆ ಅವರು ಸುರೇಶ್ ಎಂಬಾತನಿಗೆ ಉಪಗುತ್ತಿಗೆ ನೀಡಿದ್ದಾರೆ.ಈ ಸುರೇಶ್ ಎಂಬಾತ ಐದು ತಿಂಗಳ ಹಿಂದೆ ಬಂದು ಇದ್ದ ರಸ್ತೆಯನ್ನು ಕೆರೆದು ಒಂದು ಇಂಚು ಜಲ್ಲಿ ಕೂಡ ಹಾಕದೆ ರೋಲ್ ಮಾಡಿ ಹೋಗಿದ್ದ.ಈಗ ಕಳೆದ ಶುಕ್ರವಾರ ಬಂದು ಕಾಂಕ್ರೀಟ್ ಹಾಕಲು ಬಂದಾಗ ಜನರು ಗುತ್ತಿಗೆದಾರನನ್ನು ತರಾಟೆಗೆ ತೆಗೆದುಕೊಂಡು ಅಂದಾಜು ಪಟ್ಟಿಯಲ್ಲಿರುವಂತೆ ಮಣ್ಣು, ಜಲ್ಲಿ ಹಾಕಿ ಕಾಂಕ್ರೀಟ್ ಹಾಕುವಂತೆ ಬೈದು ಕಳಿಸಿದ್ದಾರೆ.
ಪಂಚಾಯತ್ ರಾಜ್ ಇಲಾಖೆಯ ಇಂಜಿನಿಯರ್ ಮತ್ತು ಗುತ್ತಿಗೆದಾರರು ಶಾಮೀಲಾಗಿ ಕಳಪೆ ಕಾಮಗಾರಿ ಮಾಡಿಸುತ್ತಿದ್ದಾರೆ ಎಂದು ಗ್ರಾಮದ ಮುಖಂಡರು ಆರೋಪಿಸಿದ್ದು, ಉತ್ತಮ ಗುಣಮಟ್ಟದ ಕಾಮಗಾರಿ ಮಾಡುವವರೆಗೂ ಕೆಲಸ ಮಾಡಲು ಬಿಡುವುದಿಲ್ಲವೆಂದು ಪಟ್ಟು ಹಿಡಿದಿದ್ದಾರೆ.ಉತ್ತಮ ಗುಣಮಟ್ಟದ ಕಾಮಗಾರಿ ಮಾಡಬೇಕೆಂದು ನುಡಿ ಕರ್ನಾಟಕ.ಕಾಮ್ ಆಶಯವಾಗಿದೆ.