ಜಿಲ್ಲೆಯ ಎಲ್ಲಾ ವಿದ್ಯಾಸಂಸ್ಥೆಗಳ ಬಳಿ ಶೇ.100ರಷ್ಟು ತಂಬಾಕು ಮುಕ್ತಗೊಳಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ನಿರಂತರ ಕೋಟ್ಪಾ ಕಾರ್ಯಾಚರಣೆ ಇಂದು ಮದ್ದೂರು ಪಟ್ಟಣದ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ನಿಯಮಬಾಹಿರವಾಗಿ ತಂಬಾಕು ಉತ್ಪನ್ನಗಳನ್ನು ವಿದ್ಯಾಸಂಸ್ಥೆಗಳ ವ್ಯಾಪ್ತಿಯಲ್ಲಿ ಮಾರಾಟ ಮಾಡುತ್ತಿರುವ ಅಂಗಡಿಗಳ ಬಳಿಗೆ ತೆರಳಿ ಕರಪತ್ರ ಹಂಚುವ ಮೂಲಕ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಾದ ಡಾ.ಸಂಜಯ್ ಎಂ.ಡಿ, ಆರಕ್ಷಕ ವೃತ್ತ ನಿರೀಕ್ಷಕ ಹರೀಶ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರವೀಂದ್ರಗೌಡ ರವರು ಜಾಗೃತಿ ಮೂಡಿಸಿದರು.
ಪಟ್ಟಣದ ವಿವಿಧ ಶಾಲಾ- ಕಾಲೇಜುಗಳ ಬಳಿ ಕೋಟ್ಪಾ ಕಾರ್ಯಾಚರಣೆ ನಡೆಸಲಾಯಿತು.ಇನ್ನು ಮುಂದೆ ತಂಬಾಕು ಉತ್ಪನ್ನಗಳನ್ನು ಶಾಲಾ ವ್ಯಾಪ್ತಿಯಲ್ಲಿ ಮಾರದಂತೆ ಎಚ್ಚರಿಕೆ ನೀಡಲಾಯಿತು.
ಈ ಕಾರ್ಯಾಚರಣೆಯಲ್ಲಿ ಸೆಕ್ಷನ್ 4 ರ ಅಡಿಯಲ್ಲಿ 16 ಪ್ರಕರಣ ಹಾಗೂ ರೂ. 2100/- ದಂಡ ಮತ್ತು ಸೆಕ್ಷನ್ 6ಬಿ ರ ಅಡಿಯಲ್ಲಿ 7 ಪ್ರಕರಣ ಹಾಗೂ ರೂ. 900/- ದಂಡ ಸೇರಿದಂತೆ ಒಟ್ಟಾರೆಯಾಗಿ 23 ಪ್ರಕರಣಗಳನ್ನು ದಾಖಲಿಸಿ ರೂ 3000/- ದಂಡ ವಿಧಿಸಲಾಯಿತು.
ಹಾಗೆಯೇ ಇನ್ನು ಮುಂದೆ ಈ ರೀತಿಯಾಗಿ ನಿಯಮ ಉಲ್ಲಂಘನೆ ಮಾಡದಂತೆ ಹಾಗೂ ಮದ್ದೂರು ಸಾರ್ವಜನಿಕ ಆಸ್ಪತ್ರೆಯ ತಂಬಾಕು ವ್ಯಸನಮುಕ್ತ ಕೇಂದ್ರದ ಉಚಿತ ಸೇವಾ ಸೌಲಭ್ಯಗಳನ್ನು ಬಳಸಿಕೊಳ್ಳಲು ಸಾರ್ವಜನಿಕರಿಗೆ ಕರಪತ್ರಗಳನ್ನು ವಿತರಿಸಿ ತಿಳುವಳಿಕೆ ಮೂಡಿಸಲಾಯಿತು.
ಇಂದಿನ ಕಾರ್ಯಾಚರಣೆಯಲ್ಲಿ ಜಿಲ್ಲಾ ಸಲಹೆಗಾರರಾದ ತಿಮ್ಮರಾಜು ಎಸ್.ಎನ್.,ಸಮಾಜ ಕಾರ್ಯಕರ್ತರಾದ ಮೋಹನ್ ಕುಮಾರ್ ವೈ.ಕೆ.,ಎಎಸ್ಐ ಮಂಜುನಾಥ್,ಆರೋಗ್ಯ ಇಲಾಖೆಯ ಹರ್ಷ ಹಾಜರಿದ್ದರು.