Thursday, September 19, 2024

ಪ್ರಾಯೋಗಿಕ ಆವೃತ್ತಿ

ಪವರ್ ಟಿವಿ ಪ್ರಸಾರ ಸ್ಥಗಿತ 6 ವಾರ ಮುಂದುವರಿಕೆ: ಹೈಕೋರ್ಟ್ ವಿಭಾಗೀಯ ಪೀಠ ತೀರ್ಪು

ಪರವಾನಗಿ ನವೀಕರಿಸದ ಆರೋಪದ ಹಿನ್ನೆಲೆಯಲ್ಲಿ ಪವರ್ ಟಿವಿ ಕನ್ನಡ ಟಿ.ವಿ ಚಾನಲ್ ಕಾರ್ಯಕ್ರಮಗಳ ಪ್ರಸಾರ ಸ್ಥಗಿತಗೊಳಿಸಿ ಏಕಸದಸ್ಯ ನ್ಯಾಯಪೀಠ ನೀಡಿದ್ದ ಮಧ್ಯಂತರ ನಿರ್ದೇಶನ ತೆರವಿಗೆ ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ನ್ಯಾಯಪೀಠ ನಿರಾಕರಿಸಿದೆ.

ಏಕಸದಸ್ಯ ನ್ಯಾಯಪೀಠ ನೀಡಿದ್ದ ಆದೇಶ ಪ್ರಶ್ನಿಸಿ, ‘ಮೆಸರ್ಸ್‌ ಪವರ್ ಸ್ಮಾರ್ಟ್‌ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿ’ ನಿರ್ದೇಶಕ ಬೆಂಗಳೂರಿನ ದಬ್ಬೇಗಟ್ಟ ಮಧು ಲಕ್ಷ್ಮಣ, ‘ಮೆಸರ್ಸ್‌ ಮಿಟ್ಕಾನ್ ಇನ್ಫ್ರಾಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ’ ನಿರ್ದೇಶಕ ಮುಂಬೈನ ಶ್ರೀಕಾಂತ್ ಮಿಥೇಶ್ ಬಾಂಗ್ಡಿಯಾ ಮತ್ತು ‘ಪವರ್ ಸ್ಮಾರ್ಟ್‌ ಮೀಡಿಯಾ‘ದ ಬೆಂಗಳೂರಿನ ಹೆಚ್ಚುವರಿ ನಿರ್ದೇಶಕ ರಾಕೇಶ್ ಸಂಜೀವ ಶೆಟ್ಟಿ ಅಲಿಯಾಸ್ ರಾಕೇಶ್ ಶೆಟ್ಟಿ ಸಲ್ಲಿಸಿದ್ದ ಮೇಲ್ಮನವಿ ಮೇಲಿನ ತೀರ್ಪನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ಪ್ರಕಟಿಸಿತು.

“ಪರವಾನಗಿ ನವೀಕರಣಕ್ಕೆ ಸಂಬಂಧಿಸಿದಂತೆ ಸಕ್ಷಮ ಪ್ರಾಧಿಕಾರವು ಮೇಲ್ಮನವಿದಾರರ ಅಹವಾಲನ್ನು ಆಲಿಸಿ ಆರು ವಾರಗಳಲ್ಲಿ ಇತ್ಯರ್ಥಗೊಳಿಸಿಕೊಳ್ಳಬೇಕು” ಎಂದು ನ್ಯಾಯಪೀಠ ಗಡುವು ನೀಡಿದೆ.

ಮೇಲ್ಮನವಿದಾರ ಕಂಪನಿಗಳ ಪರ ಹಿರಿಯ ವಕೀಲರಾದ ಎಸ್.ಎಸ್. ನಾಗಾನಂದ ಹಾಗೂ ರಿಟ್ ಅರ್ಜಿದಾರರ ಪರ ಹಿರಿಯ ವಕೀಲರಾದ ಪ್ರಭುಲಿಂಗ ಕೆ.ನಾವದಗಿ ವಾದ ಮಂಡಿಸಿದರು.

ಪ್ರಕರಣವೇನು?

‘ನಮ್ಮ ವಿರುದ್ಧ ಪವರ್ ಟಿವಿ ಮಾನ ಹಾನಿಕರ ಸುದ್ದಿಗಳನ್ನು ಪ್ರಸಾರ ಮಾಡುತ್ತಿದೆ’ ಎಂದು ಆರೋಪಿಸಿ ಜೆಡಿಎಸ್‌ನ ವಿಧಾನ ಪರಿಷತ್‌ ಮಾಜಿ ಸದಸ್ಯ ಎಚ್.ಎಂ. ರಮೇಶ್ ಗೌಡ, ಅವರ ಪತ್ನಿ ಡಾ. ಎ. ರಮ್ಯಾ ರಮೇಶ್ ಹಾಗೂ ಐಪಿಎಸ್ ಅಧಿಕಾರಿ ಬಿ.ಆರ್. ರವಿಕಾಂತೇ ಗೌಡ ಸಲ್ಲಿಸಿದ್ದ ರಿಟ್ ಅರ್ಜಿಗಳನ್ನು ನ್ಯಾಯಮೂರ್ತಿ ಎಸ್ ಆರ್ ಕೃಷ್ಣಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತ್ತು.

‘ಪವರ್ ಟಿ.ವಿ. ಚಾನಲ್, ಕೇಬಲ್ ಟೆಲಿವಿಷನ್ ನೆಟ್ವರ್ಕ್‌ಗಳ (ನಿಯಂತ್ರಣ) ಕಾಯ್ದೆ–1995ರ ಆದೇಶವನ್ನು ಉಲ್ಲಂಘಿಸಿರುವ ಕಾರಣ ತಕ್ಷಣದಿಂದಲೇ ಸುದ್ದಿಗಳೂ ಸೇರಿದಂತೆ ಯಾವುದೇ ಕಾರ್ಯಕ್ರಮಗಳನ್ನು ಜುಲೈ 8 ರವರೆಗೆ ಪ್ರಸಾರ ಮಾಡಬಾರದು’ ಎಂದು ಕಳೆದ ತಿಂಗಳ 25ರಂದು ಆದೇಶಿಸಿತ್ತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!