Thursday, September 19, 2024

ಪ್ರಾಯೋಗಿಕ ಆವೃತ್ತಿ

ಪೋಕ್ಸೋ : ಮಹಿಳಾ ಪೊಲೀಸರಿಗೆ ಐದು ಲಕ್ಷ ರೂ. ದಂಡ

ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿದ್ದವನ ಹೆಸರಿನ ಬೇರೊಬ್ಬ ಅಮಾಯಕನನ್ನ ಬಂಧಿಸಿ, ಒಂದು ವರ್ಷ ನ್ಯಾಯಾಂಗ ಬಂಧನ ವಿಧಿಸಿದ್ದ ಇಬ್ಬರು ಮಹಿಳಾ ಪೊಲೀಸರಿಗೆ ಮಂಗಳೂರಿನ ಎರಡನೇ ಹೆಚ್ಚುವರಿ ಎಫ್‌ಟಿಎಸ್‌ಸಿ ನ್ಯಾಯಾಲಯ (ಪೋಕ್ಸೋ) ಐದು ಲಕ್ಷ ರೂಪಾಯಿ ದಂಡ ವಿಧಿಸಿದೆ. ಆ ಹಣವನ್ನು ನಿರಪರಾಧಿಗೆ ಪರಿಹಾರವಾಗಿ ನೀಡುವಂತೆ ಆದೇಶಿಸಿದೆ.

ನವೀನ್‌ ಎಂಬ ನೈಜ ಆರೋಪಿಯ ಬದಲಾಗಿ, ಸಂತ್ರಸ್ತ ನವೀನ್‌ ಸಿಕ್ವೇರ ಎಂಬಾತನನ್ನು ಮಂಗಳೂರು ಮಹಿಳಾ ಪೊಲೀಸ್‌ ಠಾಣೆಯ ಪೊಲೀಸ್‌ ನಿರೀಕ್ಷಕಿ(ಎಸ್‌ಐ) ರೇವತಿ ಮತ್ತು ಉಪನಿರೀಕ್ಷಕಿ ರೋಸಮ್ಮ ಪಿ.ಪಿ ಅಮಾಯಕನನ್ನು ಬಂಧಿಸಿದ್ದರು. ಅಲ್ಲದೆ, ಆತನನ್ನು ಒಂದು ವರ್ಷ ನ್ಯಾಯಾಂಗ ಬಂಧನಕ್ಕೆ ಗುರಿ ಮಾಡಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು, ಬಂಧಿತ ನವೀನ್‌ ನಿರಪರಾಧಿ ಎಂಬುದನ್ನು ಗಮನಿಸಿದೆ. ಆತನಿಗೆ ಐದು ಲಕ್ಷ ಪರಿಹಾರ ನೀಡುವಂತೆ ಇಬ್ಬರು ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಿದೆ. ಅಲ್ಲದೆ, ಅವರಿಬ್ಬರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಆದೇಶಿಸಿದೆ ಎಂದು ತಿಳಿದುಬಂದಿದೆ.

ಪ್ರಕರಣದ ಹಿನ್ನೆಲೆ

ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಬಾಲಕಿಯೊಬ್ಬಳು ತಮಗೆ ಕಿರುಕುಳ ನೀಡಿದ ನೈಜ ಆರೋಪಿ ನವೀನ್ ಎಂಬಾತನ ವಿರುದ್ಧ ದೂರು ನೀಡಿದ್ದಳು. ಬಾಲಕಿ ನೀಡಿದ ಹೇಳಿಕೆಯನ್ನು ಆಧರಿಸಿ ಠಾಣೆಯ ಉಪನಿರೀಕ್ಷಕಿ ರೋಸಮ್ಮ ‘ನವೀನ್‌’ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿದ್ದರು. ಪ್ರಕರಣದ ತನಿಖೆಗಾಗಿ ಪೊಲೀಸ್‌ ನಿರೀಕ್ಷಿಕಿ ರೇವತಿಯವರಿಗೆ ಹಸ್ತಾಂತರಿಸಿದ್ದರು. ತನಿಖೆ ನಡೆಸಿದ ರೇವತಿ, ‘ನವೀನ್‌ ಸಿಕ್ವೇರ’ ಅವರನ್ನು ಬಂಧಿಸಿದ್ದರು.

ಬಾಲಕಿ ತನ್ನ ದೂರಿನಲ್ಲಿ ಹಾಗೂ ನ್ಯಾಯಾಧೀಶರ ಮುಂದೆ ನೀಡಿದ ಹೇಳಿಕೆಯಲ್ಲಿ ಆರೋಪಿಯ ಹೆಸರನ್ನು ನವೀನ್‌ ಎಂದು ಉಲ್ಲೇಖಿಸಿದ್ದಳು. ಆದರೆ ನ್ಯಾಯಾಲಯಕ್ಕೆ ಸಲ್ಲಿಸಿದ್ದ ದೋಷಾರೋಪಣೆ ಪಟ್ಟಿಯಲ್ಲಿ ನವೀನ್‌ ಸಿಕ್ವೇರ್‍‌ ಅವರನ್ನು ಆರೋಪಿ ಎಂದು ನಮೂದಿಸಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಕೆ.ಯು ರಾಧಾಕೃಷ್ಣ, ನವೀನ್‌ ಸಿಕ್ವೇರ್‍‌ ಅವರನ್ನು ನಿರಪರಾಧಿ ಎಂದು ಪರಿಗಣಿಸಿ ಪ್ರಕರಣವನ್ನು ಖುಲಾಸೆಗೊಳಿಸಿದ್ದಾರೆ. ಆರೋಪಿಯ ಬದಲು ಅಮಾಯಕನನ್ನು ಬಂಧಿಸಿ ನ್ಯಾಯಾಂಗಕ್ಕೆ ಹಾಜರುಪಡಿಸಿದ್ದಕ್ಕೆ ಮಹಿಳಾ ಪೊಲೀಸರಿಬ್ಬರಿಗೆ ಐದು ಲಕ್ಷ ದಂಡ ಪಾವತಿಸುವಂತೆ ಆದೇಶಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!