Thursday, September 19, 2024

ಪ್ರಾಯೋಗಿಕ ಆವೃತ್ತಿ

ಪ್ರಜ್ವಲ್ ರೇವಣ್ಣ ಪ್ರಕರಣ: ಜೋಷಿ ಕತ್ತೆ ಮೇಯಿಸುತ್ತಿದ್ದಾರೆಯೇ – ಸಿ. ಆರ್. ರಮೇಶ್

ಸಂಸದ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ಹಗರಣಕ್ಕೆ ಸಂಬಂಧಿಸಿದಂತೆ ಪಾಸ್ ಪೋರ್ಟ್ ರದ್ದತಿ ವಿಷಯದಲ್ಲಿ ರಾಜ್ಯ ಸರ್ಕಾರ ಕತ್ತೆ ಮೇಯಿಸುತ್ತಾ ಇದೆಯಾ ಎಂದಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಕತ್ತೆ ಕಾಯುತ್ತಾ ಇದ್ದರೇನು ಎಂದು ಕಿಸಾನ್ ಕಾಂಗ್ರೆಸ್ ಮೇಲುಕೋಟೆ ಘಟಕದ ಅಧ್ಯಕ್ಷ ಸಿ.ಆರ್.ರಮೇಶ್ ತಿರುಗೇಟು ನೀಡಿದರು.

ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವದಲ್ಲಿದೆ. ಜತೆಗೆ ಪ್ರಹ್ಲಾದ್ ಜೋಶಿ ಹೆಬ್ಬೆಟ್ಟು ಸಂಸದರೇ, ತಲೆ ಒಳಗೆ ಸ್ಪಲ್ಪ ಕೂಡಾ ಬುದ್ದಿ ಇಲ್ಲವೇ, ಬುದ್ದಿ ಇದ್ದರೆ ಅವರ ವಿದೇಶಾಂಗ ಸಚಿವ ಜೈಶಂಕರ್ ಇದ್ದಾರೆ. ಮೊದಲು ಪಾಸ್ ಪೋರ್ಟ್ ರದ್ದು ಮಾಡಲಿ ಎಂದು ಸುದ್ದಿಗೋಷ್ಠಿಯಲ್ಲಿ ಸವಾಲೆಸೆದರು.

ಕೇಂದ್ರ ಸಚಿವಾಲಯ ಇರುವುದು ದೆಹಲಿಯಲ್ಲಿ, ಬೆಂಗಳೂರಿನಲ್ಲಿ ಅಲ್ಲ. ಜನರನ್ನೇಕೆ ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡುತ್ತಿರಾ. ಮೊದಲು ಪಾಸ್ ಪೋರ್ಟ್ ರದ್ದುಗೊಳಿಸಿ ಪ್ರಜ್ವಲ್ ರೇವಣ್ಣನ ಶರಣಾಗತಿಗೆ ಅವಕಾಶ ಮಾಡಿಕೊಡಿ. ಅದನ್ನು ಬಿಟ್ಟು ರಾಜ್ಯ ಸರ್ಕಾರದ ವಿರುದ್ಧ ಬೊಟ್ಟು ಮಾಡಿ ತೋರಿಸದಿರಿ ಎಂದರು.

‘ಏನಪ್ಪ ದೇವರಾಜು ಅಂದಿದ್ದು ಮಹಾ ಅಪರಾಧವೇ?, ವಕೀಲ ದೇವರಾಜು ಆರೋಪಕ್ಕೆ ಯಾವುದೇ ಆಧಾರ ಇಲ್ಲ. ಯಾವುದಾದರೂ ಸಾಕ್ಷಿ ಪುರಾವೆ ಇದ್ದಲ್ಲಿ ಒದಗಿಸಿ ಎಂದರು.

ಪ್ರಸ್ತುತ ಕೆಲವು ದಿನಗಳಿಂದಲೂ ಸಾರ್ವಜನಿಕ ಜೀವನದಲ್ಲಿರುವವರನ್ನು ಜನರು ಅನುಮಾನಸ್ಪದವಾಗಿ ನೋಡುವ ಪ್ರಕ್ರಿಯೆ ಗೋಚರಿಸುತ್ತಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬ ಯಾವ ರೀತಿ ಹೇಳಿಕೆ ಕೊಡುತ್ತಿದೆ ಎಂಬುದು ನೋಡಿದರೆ ಜಿಲ್ಲೆ ಹಾಗೂ ರಾಜ್ಯದ ಜನರು ಏನಪ್ಪಾ ಈ ಮಟ್ಟಿಗೆ ರಾಜಕೀಯ ಮಾಡುತ್ತಿದ್ದಾರೆ ಅಂತಿದ್ದಾರೆ. ಒಂದೆಡೆ ಜೆಡಿಎಸ್ ರಾಜ್ಯಾಧ್ಯಕ್ಷರು ಪ್ರಜ್ವಲ್ ಎಲ್ಲಿದ್ದೀಯ ಬಾ ಅಂತಲೂ, ಇನ್ನೊಂದೆಡೆ ರಾಷ್ಟ್ರಾಧ್ಯಕ್ಷರು ಪತ್ರ ಬರೆಯುವುದು. ಇಂತಹ ಕಪಟ ನಾಟಕ ರದ್ದು ಮಾಡಿ ಮೊದಲು ಪಾಸ್ ಪೋರ್ಟ್ ರದ್ದತಿಗೆ ಪ್ರಧಾನಿ ಅವರನ್ನ ಒತ್ತಾಯಿಸುವ ಮೂಲಕ 24ಗಂಟೆಯೊಳಗೆ ಪ್ರಜ್ವಲ್ ರೇವಣ್ಣ ಶರಣಾಗತಿ ಮಾಡಿಸಲಿ ಎಂದು ಒತ್ತಾಯಿಸಿದರು.

ಇಲ್ಲಿ ಯಾರೂ ಕೂಡಾ ಕಿವಿಗೆ ಹೂವು ಮುಡಿದುಕೊಂಡಿಲ್ಲ. ಜತೆಗೆ ಯಾರೂ ದಡ್ಡರಲ್ಲ. ಹೆಣ್ಣು ಮಕ್ಕಳ ಶಾಪ ತಟ್ಟದೇ ಬಿಡಲಾರದು. ರಾಜಕೀಯ ರಂಗದಲ್ಲಿ ಯಾರೂ ಮಾಡದ ತಪ್ಪು ಮಾಡಿದ್ದೀರಿ. ಮಾಡಿದ ತಪ್ಪಿಗೆ ಸ್ವಲ್ಪವಾದರೂ ಪಾಪ ಕಡಿಮೆಯಾಗಬೇಕೆಂದರೆ ಮೊದಲು ಪ್ರಜ್ವಲ್ ರೇವಣ್ಣನನ್ನು ಶರಣಾಗತಿ ಮಾಡಿಸಿ ಎಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಿಟ್ಟನಹಳ್ಳಿಕೊಪ್ಪಲು ನಾಗರಾಜು, ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಉದಯ್, ಕಾಂಗ್ರೆಸ್ ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ರಾಮಕೃಷ್ಣ, ಮುಖಂಡರಾದ ಉಮ್ಮಡಹಳ್ಳಿ ನಾಗೇಶ್, ಪ್ರಕಾಶ್ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!