Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯದಲ್ಲಿ ಬೆಂಕಿ ಹತ್ತಿಸಿ, ಬಿಜೆಪಿ ರಾಜಕೀಯದ ಚಳಿ ಕಾಯಿಸಿಕೊಳ್ಳುತ್ತಿದೆ : ಪ್ರಿಯಾಂಕ್ ಖರ್ಗೆ

ಮಂಡ್ಯ ಕೆರಗೋಡು ಹನುಮಧ್ವಜ ವಿವಾದವನ್ನೇ ಅಸ್ತ್ರ ಮಾಡಿಕೊಂಡ ಬಿಜೆಪಿಯ ವಿರುದ್ಧ ಕೆಂಡಕಾರಿರುವ ಸಚಿವ ಪ್ರಿಯಾಂಕ್ ಖರ್ಗೆ, “ಸಮಾಜ ಶಾಂತಿಯುತವಾಗಿದ್ದರೆ ಬಿಜೆಪಿಗೆ ತಿಂದ ಅನ್ನ ಜೀರ್ಣವಾಗುವುದಿಲ್ಲ” ಎಂದು ಕಿಡಿಕಾರಿದ್ದಾರೆ.

ಬಿಜೆಪಿಯ ವಿರುದ್ಧ ಸುದೀರ್ಘ ಟ್ವೀಟ್ ಮಾಡಿರುವ ಸಚಿವ ಖರ್ಗೆ, “ಇಷ್ಟು ದಿನ ಕರಾವಳಿಯನ್ನು ಕೋಮು ರಾಜಕಾರಣದ ಪ್ರಯೋಗಶಾಲೆಯನ್ನಾಗಿ ಮಾಡಿಕೊಂಡಿದ್ದ ಬಿಜೆಪಿ ಹಾಗೂ ಸಂಘ ಪರಿವಾರ, ಈಗ ಮಂಡ್ಯದಲ್ಲಿ ತಮ್ಮ ಪ್ರಯೋಗ ಆರಂಭಿಸಿದೆ.

ಸಮಾಜ ಶಾಂತಿಯುತವಾಗಿದ್ದರೆ ಬಿಜೆಪಿಗೆ ತಿಂದ ಅನ್ನ ಜೀರ್ಣವಾಗುವುದಿಲ್ಲ ಎನಿಸುತ್ತದೆ. ಮಂಡ್ಯದಲ್ಲಿ ಬೆಂಕಿ ಹತ್ತಿಸಿ ಆ ಬೆಂಕಿಯಲ್ಲಿ ರಾಜಕೀಯದ ಚಳಿ ಕಾಯಿಸಿಕೊಳ್ಳುತ್ತಿರುವ ಬಿಜೆಪಿ ನಾಯಕರು ಅತ್ಯಂತ ಕೀಳು ಮಟ್ಟಕ್ಕೆ ಇಳಿದಿದ್ದಾರೆ” ಎಂದು ತಿಳಿಸಿದ್ದಾರೆ.

“ವಿರೋಧ ಪಕ್ಷದ ನಾಯಕನೆಂದರೆ ಘನತೆಯುಕ್ತ ಸ್ಥಾನ. ಆ ಸ್ಥಾನದ ಗೌರವವನ್ನು ಆರ್ ಅಶೋಕ್ ಅವರು ಮಣ್ಣುಪಾಲು ಮಾಡುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಅವರೇ, ನಿಮ್ಮ ಗಮನಕ್ಕೆ ಕೆಲವು ವಿಚಾರಗಳು ತರಲು ಬಯಸುತ್ತೇನೆ” ಎನ್ನುವ ಮೂಲಕ ಹನುಮಧ್ವಜ ವಿವಾದಕ್ಕೆ ಸಂಬಂಧಿಸಿ ನಡೆದ ಬೆಳವಣಿಗೆಗಳ ಬಗ್ಗೆ ಇರುವ ದಾಖಲೆಗಳನ್ನು ಸಚಿವ ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿದ್ದಾರೆ.

1. 29/12/2023 ರಂದು ಮಂಡ್ಯ ಜಿಲ್ಲೆಯ ಕೆರೆಗೋಡು ಗ್ರಾಮದಲ್ಲಿ ರಾಷ್ಟ್ರ ಧ್ವಜ ಹಾಗೂ ನಾಡ ಧ್ವಜವನ್ನು ಮಾತ್ರ ಹಾರಿಸುತ್ತೇವೆ ಎಂದು ಶ್ರೀ ಗೌರಿಶಂಕರ ಸೇವಾ ಟ್ರಸ್ಟ್ ನವರು ಧ್ವಜ ಸ್ಥಂಭಕ್ಕೆ ಅನುಮತಿ ಕೇಳಿದ್ದಾರೆ.

2.17/01/2024ರಂದು ಧ್ವಜ ಸ್ಥಂಭದಲ್ಲಿ ರಾಷ್ಟ್ರ ಧ್ವಜ ಹಾಗೂ ನಾಡ ಧ್ವಜವನ್ನು ಬಿಟ್ಟು ಇನ್ನಿತರ ಯಾವುದೇ ರಾಜಕೀಯ, ಧಾರ್ಮಿಕ ಧ್ವಜವವನ್ನು ಹಾರಿಸುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಟ್ಟು ಸಹಿ ಮಾಡಿದ್ದಾರೆ.

3. 18/01/2024ರಂದು ಕೆರೆಗೋಡು ಗ್ರಾಮ ಪಂಚಾಯ್ತಿಯ ಅಧಿಕಾರಿಗಳು ರಾಷ್ಟ್ರ ಧ್ವಜ ಹಾಗೂ ನಾಡ ಧ್ವಜಾರೋಹಣಕ್ಕೆ ಮಾತ್ರ ಶರತ್ತುಗಳೊಂದಿಗೆ ಅನುಮತಿ ಪತ್ರ ನೀಡಿದ್ದಾರೆ.

4. ಧ್ವಜಾರೋಹಣಕ್ಕೆ ಸಂಬಂಧಿಸಿದಂತೆ ಸರ್ಕಾರ ಮಾಡುವ ಮಾರ್ಪಾಡುಗಳಿಗೆ ಬದ್ಧರಾಗಿರಬೇಕೆಂದು ತಿಳಿಸಲಾಗಿದೆ.

5. ಯಾವುದೇ ಗಲಭೆಗಳಿಗೆ ಅವಕಾಶ ಮಾಡಿಕೊಡದಂತೆ ಷರತ್ತು ವಿಧಿಸಲಾಗಿದೆ.

“>

6. ಧ್ವಜಾರೋಹಣ ಮಾಡುವ 6,7 ದಿನ ಮುಂಚಿತವಾಗಿ ಗ್ರಾಮ ಪಂಚಾಯ್ತಿ ಹಾಗೂ ಪೊಲೀಸರಿಗೆ ತಿಳಿಸುವಂತೆ ಸೂಚಿಸಲಾಗಿದೆ.

ಬಿಜೆಪಿಯವರು ನಮ್ಮ ಈ ಪ್ರಶ್ನೆಗಳಿಗೆ ಉತ್ತರಿಸಲೇಬೇಕು ಎಂದು ಸಚಿವ ಖರ್ಗೆ ಪಟ್ಟು ಹಿಡಿದಿದ್ದು, ಕೆಲವೊಂದು ಪ್ರಶ್ನೆಗಳನ್ನು ಕೂಡ ಕೇಳಿದ್ದಾರೆ.

1.ರಾಷ್ಟ್ರ ಧ್ವಜದ ಬದಲು ಏಕಾಏಕಿ ಭಗವಾಧ್ವಜ ಹಾರಿಸುವ ಷಡ್ಯಂತ್ರ ರೂಪಿಸಿದ್ದು ಯಾರು?
2.ಅನುಮತಿ ಪತ್ರದ ಷರತ್ತುಗಳನ್ನು ಉಲ್ಲಂಘಿಸಲು ಪ್ರೇರೇಪಿಸಿದ್ದು ಯಾರು?
3.ಬಿಜೆಪಿ ಅದೆಷ್ಟು ದಿನಗಳಿಂದ ಶಾಂತಿ ಕೆಡಿಸುವ ಸಂಚು ರೂಪಿಸಿತ್ತು?
4.ಕಾನೂನು, ನೀತಿ ನಿಯಮಗಳೇನು ಬಿಜೆಪಿ ಕಾಲ ಕೆಳಗಿನ ಕಸದಂತೆ ನೋಡುವುದೇಕೆ?
5. ತ್ರಿವರ್ಣ ಧ್ವಜವನ್ನು ವಿರೋಧಿಸಿದ್ದ ಆರ್‌ಎಸ್‌ಎಸ್‌ ಹೇಳಿಕೊಟ್ಟ ಪಾಠದಂತೆ ಬಿಜೆಪಿಯೂ ತಿರಂಗಾ ಕಂಡರೆ ಉರಿದು ಬೀಳುತ್ತಿದೆ. ರಾಷ್ಟ್ರ ಧ್ವಜಕ್ಕೆ ಕೈ ಮುಗಿಯುವ ಬದಲು ಕೆಂಡ ಕಾರುತ್ತಿದೆ.
6. ಸರ್ಕಾರ ರಾಷ್ಟ್ರ ಧ್ವಜವನ್ನು ಹಾರಿಸುವ ಮೂಲಕ ಆ ಧ್ವಜ ಸ್ಥಂಭದ ಉದ್ದೇಶವನ್ನು ಈಡೇರಿಸಿದೆ. ಹೀಗಿದ್ದೂ ನಿಮಗೆ ಇಷ್ಟೊಂದು ಉರಿ, ತಾಪವೇಕೆ? ಎಂದು ಖರ್ಗೆ ಸರಣಿ ಪ್ರಶ್ನೆಗಳನ್ನು ಕೇಳಿದ್ದಾರೆ.

“ರಾಷ್ಟ್ರ ಧ್ವಜವನ್ನು ದ್ವೇಷಿಸುವ ಮೂಲಕ ಬಿಜೆಪಿಗರು ತಮಗೆ ತಾವೇ ದೇಶದ್ರೋಹಿಗಳು ಎಂದು ಸರ್ಟಿಫಿಕೇಟ್ ಕೊಟ್ಟುಕೊಂಡಿದ್ದಾರೆ. ಬಿಜೆಪಿಗರಿಗೆ ದೇಶದ ಧ್ವಜ, ದೇಶದ ಸಂವಿಧಾನ, ದೇಶದ ಐಕ್ಯತೆ ಇಷ್ಟವಿಲ್ಲವೆಂದರೆ ಅವರ ಪ್ರೀತಿಪಾತ್ರವಾದ ಪಾಕಿಸ್ತಾನಕ್ಕೆ ಹೋಗಲಿ. ಬಿಜೆಪಿಯ ಯಾವುದೇ ತಂತ್ರ, ಕುತಂತ್ರಗಳಿಗೆ ನಾವು ಬಗ್ಗುವುದಿಲ್ಲ, ಬಗ್ಗುಬಡಿಯುತ್ತೇವೆ” ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿಯವರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!