Thursday, September 19, 2024

ಪ್ರಾಯೋಗಿಕ ಆವೃತ್ತಿ

‘ನಾ ನಾಯಕಿ’ ಕಾರ್ಯಕ್ರಮಕ್ಕೆ ಪ್ರಿಯಾಂಕಗಾಂಧಿ : ಗಮನ ಸೆಳೆದ ಬೃಹತ್ ಕಟೌಟ್ ಗಳು

ಕೆಪಿಸಿಸಿ ಮಹಿಳಾ ಘಟಕವು ಮಹಿಳೆಯರಿಗಾಗಿಯೇ ಆಯೋಜಿಸಿರುವ ನಾ ನಾಯಕಿ ಕಾರ್ಯಕ್ರಮ ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದ್ದು, ಸುಮಾರು 1 ಲಕ್ಷ ಮಹಿಳೆಯರು ಭಾಗವಹಿಸುವ ನಿರೀಕ್ಷೆ ಇದೆ. ಅಲ್ಲದೇ ಎಐಸಿಸಿ ನಾಯಕಿ ಪ್ರಿಯಾಂಕ ಗಾಂಧಿ ಅವರ ಸ್ವಾಗತಕ್ಕೆ ಅಳವಡಿಸಲಾಗಿರುವ ಬೃಹತ್ ಗಾತ್ರದ ಪ್ಲೇಕ್ಸ್ ಗಳು ಜನರ ಗಮನ ಸೆಳೆದಿವೆ.

ಬೆಂಗಳೂರಿನ ರಸ್ತೆಗಳಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಬೃಹತ್ ಕಟೌಟ್​ಗಳು ರಾರಾಜಿಸುತ್ತಿವೆ. ಅವರು ಇಂದು ನಾಯಕಿ ಮಹಿಳಾ ಸಮಾವೇಶವನ್ನು  ಉದ್ಘಾಟಿಸುವರು. ಕರ್ನಾಟಕದಲ್ಲಿ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾ ಪ್ರಚಾರಕ್ಕೆ ಪ್ರಿಯಾಂಕಗಾಂಧಿ ಚಾಲನೆ ನೀಡಲಿದ್ಧಾರೆ.

ಈಗಾಗಲೇ ಕಾಂಗ್ರೆಸ್ 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡುವುದಾಗಿ ಕಾಂಗ್ರೆಸ್ ಮೊದಲ ಭರವಸೆ ನೀಡಿದೆ. ಇದೀಗ ಮಹಿಳೆಯರಿಗಾಗಿ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡುವ ಸಲುವಾಗಿ ಪ್ರಿಯಾಂಕಾ ಗಾಂಧಿ ಅವರನ್ನು ಬೆಂಗಳೂರಿಗೆ ಕರೆಸಲಾಗುತ್ತಿದೆ. ನಾ ನಾಯಕಿ ಸಮಾವೇಶದಲ್ಲಿ ಕರ್ನಾಟಕದಲ್ಲಿ ಹೆಚ್ಚಿನ ಮಹಿಳಾ ಮತದಾರರನ್ನು ಸೆಳೆಯುವ ಉದ್ದೇಶದಿಂದ ಮಹಿಳಾ ಕಲ್ಯಾಣಕ್ಕಾಗಿ ಪ್ರತ್ಯೇಕ ಪ್ರಣಾಳಿಕೆಯನ್ನು ಕಾಂಗ್ರೆಸ್ ಬಿಡುಗಡೆ ಮಾಡಲು ನಿರ್ಧರಿಸಿದೆ ಎನ್ನಲಾಗಿದೆ.

ಏಪ್ರಿಲ್-ಮೇ ವೇಳೆಗೆ ನಡೆಯಲಿರುವ ಚುನಾವಣೆಗೆ ಮುಂಚಿತವಾಗಿ ಕಾಂಗ್ರೆಸ್ ಮಹಿಳೆಯರಿಗಾಗಿ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡಲಿದೆ. ಗ್ರಾಮ ಪಂಚಾಯಿತಿ, ಸಹಕಾರ ಸಂಘಗಳಲ್ಲಿ ಸ್ಪರ್ಧಿಸಿದ ಮಹಿಳಾ ನಾಯಕಿಯರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಸುಮಾರು 1 ಲಕ್ಷ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಕಾಂಗ್ರೆಸ್‌ನ ರಾಜ್ಯ ಮಹಿಳಾ ಘಟಕವು ಈ ಸಮಾವೇಶವನ್ನು ಆಯೋಜಿಸಿದ್ದು, ವಿವಿಧ ಪಂಚಾಯತ್‌ಗಳು ಮತ್ತು ಸಹಕಾರಿ ಸಂಘಗಳಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ ಮಹಿಳೆಯರೊಂದಿಗೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರು ಕೂಡ ಭಾಗವಹಿಸಲಿದ್ದಾರೆ. ಪ್ರತಿ ಬೂತ್ ಅಥವಾ ಪಂಚಾಯಿತಿಯಿಂದ 3ರಿಂದ 10 ಮಹಿಳೆಯರಿಗೆ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಲಾಗಿದೆ.

ಕರ್ನಾಟಕ ಮತ್ತು ದೇಶದ ಜನಸಂಖ್ಯೆಯಲ್ಲಿ ಶೇ.50ರಷ್ಟು ಮಹಿಳೆಯರೇ ಇದ್ದಾರೆ. ಹಾಗಾಗಿ, ಮಹಿಳೆಯರಿಗಾಗಿ ಪ್ರತ್ಯೇಕ ಪ್ರಣಾಳಿಕೆ ಮಾಡಲು ಕಾಂಗ್ರೆಸ್ ನಿರ್ಧರಿಸಿದೆ. ಅವರ ಜೀವನಕ್ಕೆ ಕಾಂಗ್ರೆಸ್ ಪಕ್ಷ ಕೊಡುಗೆ ನೀಡಬೇಕು ಮತ್ತು ಅವರ ಸಮಸ್ಯೆಗಳನ್ನು ಪರಿಹರಿಸಬೇಕು. ಹೀಗಾಗಿ, ಕಾಂಗ್ರೆಸ್ ಪಕ್ಷವು ಮಹಿಳೆಯರಿಗೆ ನಾಯಕತ್ವ ಮತ್ತು ಶಕ್ತಿಯನ್ನು ನೀಡುತ್ತಿದೆ. ಈ ಹಿಂದೆಯೂ ಕಾಂಗ್ರೆಸ್ ಅಂಗನವಾಡಿ ಕಾರ್ಯಕ್ರಮಗಳು, ಆಶಾ ಕಾರ್ಯಕರ್ತೆಯರು ಮತ್ತು ಸ್ವಸಹಾಯ ಸಂಘಗಳ ಸಮಾವೇಶಗಳನ್ನು ನಡೆಸಿದೆ.

ಅರಮನೆ ಮೈದಾನದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. 1 ಲಕ್ಷ ಮಹಿಳಾ ಕಾರ್ಯಕರ್ತರನ್ನು ಕಾರ್ಯಕ್ರಮದಲ್ಲಿ ಸೇರಿಸುವ ಯೋಜನೆಯನ್ನು ಕಾಂಗ್ರೆಸ್ ಹಾಕಿಕೊಂಡಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಸೇರಿದಂತೆ ಹಲವು ನಾಯಕರು ಭಾಗವಹಿಸಲಿದ್ದಾರೆ. ಬೃಹತ್ ಕಟೌಟ್​​ಗಳನ್ನು ನಿಲ್ಲಿಸಿ ಎಲ್ಲೆಡೆ ಪ್ರಿಯಾಂಕಾ ಗಾಂಧಿಗೆ ಸ್ವಾಗತ ಕೋರಲಾಗುತ್ತಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!