Thursday, September 19, 2024

ಪ್ರಾಯೋಗಿಕ ಆವೃತ್ತಿ

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಪ್ರಚಾರ ಕಾರ್ಯ ಮಹತ್ವದ್ದು- ದರ್ಶನ್ ಪುಟ್ಟಣ್ಣಯ್ಯ

ಮುಂಬರುವ ಡಿಸೆಂಬರ್ ೨೦,೨೧ ಮತ್ತು ೨೨ರಂದು ಮಂಡ್ಯದಲ್ಲಿ ನಡೆಯಲಿರುವ ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹೆಚ್ಚು ಜನರನ್ನು ಸೇರಿಸಿ ಸಮ್ಮೇಳನ ಯಶಸ್ವಿಗೊಳಿಸಲು ಪ್ರಚಾರ ಕಾರ್ಯ ಮಹತ್ವದ್ದು ಎಂದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಚಾರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹಾವೇರಿಯಲ್ಲಿ ಲಕ್ಷ ಜನ ಸೇರಿದ್ದರು ಎಂಬ ಮಾಹಿತಿ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಅದಕ್ಕಿಂತ ಹೆಚ್ಚು ಜನರನ್ನು ಸೇರಿಸುವ ದೃಷ್ಟಿಯಿಂದ ಪ್ರಚಾರವನ್ನು ವಿವಿಧ ಆಯಾಮಗಳಲ್ಲಿ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಸಮಿತಿಯ ಜವಾಬ್ದಾರಿ ಅತ್ಯಂತ ಹೆಚ್ಚಾಗಿರುತ್ತದೆ. ಉಪಸಮಿತಿಗಳನ್ನು ರಚಿಸಿ ಸದಸ್ಯರಿಗೆ ಕಾರ್ಯಹಂಚಿಕೆ ಮಾಡಲಾಗುವುದು ಎಂದರು.

ವೈವಿಧ್ಯಮಯ ರೀತಿಯಲ್ಲಿ ಪ್ರಚಾರ: ಮುದ್ರಣ ಮಾಧ್ಯಮ, ದೃಶ್ಯ ಮಾಧ್ಯಮ, ಗ್ರಾಫಿಕ್ ಡಿಸೈನ್, ಸಮಾಜಿಕ‌ ಜಾಲತಾಣ ಮತ್ತು ಆ್ಯಪ್ ತಂತ್ರಜ್ಞಾನಗಳ ಮೂಲಕ ಪ್ರಚಾರ ನಡೆಸಲು ಅನುಕೂಲವಾಗುವಂತೆ ಪರಿಣತ ಕಂಪನಿಗಳಿಗೆ ತಮ್ಮ ಯೋಜನೆ ಮಂಡಿಸಲು ಅವಕಾಶ ನೀಡಿ,ಆಯಾ ಕ್ಷೇತ್ರದ ತಜ್ಞರು ವೀಕ್ಷಿಸಿದ ನಂತರ ಆಯ್ಕೆ ಮಾಡಿ ಕೆಲಸ ಮಾಡಲು ಅವಕಾಶ ನೀಡಲಾಗುವುದು ಎಂದರು.

ವಿದ್ಯಾರ್ಥಿಗಳಿಗೆ ಚಟುವಟಿಕೆ ನೀಡಿ ಪ್ರಚಾರ

ನಾಗಮಂಗಲ ತಾಲೂಕು ಕಸಾಪ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಸಮ್ಮೇಳನದ ಬಗ್ಗೆ ಜಾಗೃತಿ ಮೂಡಿಸಲು ವಿದ್ಯಾರ್ಥಿಗಳಿಗೆ ರಸಪ್ರಶ್ನೆ,ಪ್ರಬಂಧ ಮುಂತಾದ ಸಾಹಿತ್ಯಿಕ ಚಟುವಟಿಕೆ ನಡೆಸಿ ಅವರಲ್ಲಿ ಜಾಗೃತಿ ಮೂಡಿಸಿ ಅವರ ಮೂಲಕ ಹಳ್ಳಿಗಳಿಗೆ ಸಮ್ಮೇಳನದ ವಿಷಯ ಮುಟ್ಟಿಸುವ ಕಾರ್ಯ ಮಾಡಬೇಕು ಎಂದರು.

ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ.ಕೃಷ್ಣೇಗೌಡ ಹುಸ್ಕೂರು ಮಾತನಾಡಿ, ಗ್ರಾಮ ಮಟ್ಟದಲ್ಲಿ ಸೈಕಲ್ ಮತ್ತು ಬೈಕ್ ಜಾಥಾಗಳನ್ನು ಹಮ್ಮಿಕೊಳ್ಳಬೇಕು. ಡಿಸೆಂಬರ್ ಮಾಹೆಯಲ್ಲಿ ಮನೆಯ ಮುಂದೆ‌ ಕನ್ನಡ ಸಾಹಿತ್ಯ ಕುರಿತು ರಂಗೋಲಿಗಳು ಹಾಗೂ ಸಂಜೆ ಕನ್ನಡ ದೀಪ ಹಚ್ಚುವ ರೀತಿ ಕಾರ್ಯಕ್ರಮಗಳನ್ನು ಸಂಘಟಿಸಬೇಕು ಎಂದರು.

ಮಂಡ್ಯ ಜಿಲ್ಲೆ ಮಾತ್ರವಲ್ಲ, ಬೇರೆ ಜಿಲ್ಲೆಗಳಲ್ಲಿ ಪ್ರಚಾರ ಕಾರ್ಯಕ್ರಮವನ್ನು ‌ಆಯೋಜಿಸಿ ಹೆಚ್ಚು ಜನರನ್ನು ಸಮ್ಮೇಳನದಲ್ಲಿ ಭಾಗವಹಿಸುವಂತೆ‌ ಮಾಡಬೇಕು ಮೈಸೂರು ದಸರಾ ಕಾರ್ಯಕ್ರಮದಲ್ಲಿ ಸಮ್ಮೇಳನದ ವಿಶೇಷತೆ ಇತುವ ಸ್ಥಬ್ದಚಿತ್ರವನ್ನು ಸಿದ್ಧಪಡಿಸಿ ಭಾಗವಹಿಸಲು ಕಳುಹಿಸಬೇಕು. ದಸರಾ ಕಾರ್ಯಕ್ರಮ ನಡೆಯುವ ಎಲ್ಲಾ ಜಿಲ್ಲೆಗಳಲ್ಲಿ ಸಮ್ಮೇಳನದ ಪ್ರಚಾರ ನೀಡಬೇಕು ಎಂದು ಸಮಿತಿಯ ಸದಸ್ಯ ಹಾಗೂ ಮಾಧ್ಯಮ ಪ್ರತಿನಿಧಿ ರೋಹಿತ್ ತಿಳಿಸಿದರು.

ಪತ್ರಕರ್ತ ಕೆ.ಶಂಭು ಕಬ್ಬನಹಳ್ಳಿ ಮಾತನಾಡಿ, ಹೊರ ರಾಜ್ಯ ಹಾಗೂ ವಿದೇಶಗಳಲ್ಲಿ ಕನ್ನಡ ಬಗ್ಗೆ ಆಸಕ್ತಿ ಹೊಂದಿರುವ ಆನೇಕ ಜನರು ಇದ್ದರೆ. ಸಮ್ಮೇಳನದಲ್ಲಿ ದೇಶ-ವಿದೇಶದಲ್ಲಿ ನೆಲೆಸಿರುವ ಕನ್ನಡಿಗರು ಪಾಲ್ಗೊಳ್ಳಲು ಪ್ರಚೋದಿಸಬೇಕು ಎಂದರು.

ಪ್ರಚಾರ ಸಮಿತಿ ಸಭೆಯಲ್ಲಿ ಕಸಾಪ ಸಮ್ಮೇಳನ ಸಂಚಾಲಕಿ ಮೀರಾ ಶಿವಲಿಂಗಯ್ಯ, ರಾಘವೇಂದ್ರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ಎಸ್.ಹೆಚ್.ನಿರ್ಮಲಾ, ಜಿಲ್ಲಾ ಕಸಾಪ ಕಾರ್ಯದರ್ಶಿ ಹರ್ಷ ವಿ ಪಣ್ಣೆ ದೊಡ್ಡಿ, ಕೋಶಾಧ್ಯಕ್ಷ ಬಿ.ಎಂ.ಅಪ್ಪಾಜಪ್ಪ ಪದಾಧಿಕಾರಿಗಳಾದ ಧನಂಜಯ, ಚಂದ್ರಲಿಂಗು,ಗುರುಪ್ರಸಾದ್, ಶಿವಪ್ರಸಾದ್.ಕೆ.ಎಂ, ಬಲ್ಲೇನಹಳ್ಳಿ ಮಂಜುನಾಥ್, ಹೊಳಲು ಶ್ರೀಧರ್ ಮುಂತಾದವರು ಭಾಗವಹಿಸಿದ್ದರು.

ಮೈಸೂರು ವಿಭಾಗಕ್ಕೆ ರಥಯಾತ್ರೆಯಲ್ಲಿ ಆದ್ಯತೆ ಇರಲಿ

ಕನ್ನಡ ಜ್ಯೋತಿ ರಥಯಾತ್ರೆ ಸಮಿತಿ ಸಭೆಯಲ್ಲಿ ಮಾತನಾಡಿದ ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ ಸೆ.೨೨ ರಿಂದ ಉತ್ತರಕನ್ನಡ ಜಿಲ್ಲೆ ಶಿರಸಿಯ ಭುವನಗಿರಿಯಿಂದ ಹೊರಡುವ ಕನ್ನಡ ಜ್ಯೋತಿ ರಥಯಾತ್ರೆ ರಾಜ್ಯಾದ್ಯಂತ ೮೭ ದಿನಗಳ ಕಾಲ ಸಂಚರಿಸುತ್ತದೆ. ಮಂಡ್ಯದಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದರಿಂದ ಮೈಸೂರು ವಿಭಾಗಕ್ಕೆ ಸೇರಿದ ಮಂಡ್ಯ,ಮೈಸೂರು, ಹಾಸನ, ಚಾಮರಾಜನಗರ, ಕೊಡಗು, ರಾಮನಗರ ಮುಂತಾದ ಜಿಲ್ಲೆಗಳಲ್ಲಿ ರಥಯಾತ್ರೆಗೆ ಆದ್ಯತೆ ನೀಡಬೇಕು. ಜಿಲ್ಲೆಯಲ್ಲಿ ಸಂಚರಿಸುವ ರಥಕ್ಕೂ ಚಾಲನೆ ನೀಡಲಾಗುವುದು.ನಿರ್ಮಾಣವಾಗುವ ರಥ ಸುಸಜ್ಜಿತವಾಗಿರಬೇಕು ಎಂದರು.

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಿಂದ ಹೊರಡುವ ರಥಯಾತ್ರೆ ಸಂಚರಿಸುವ ಜಿಲ್ಲೆಯ ತಾಲೂಕಿಗೆ ಅನುಗುಣವಾಗಿ ದಿನಗಳನ್ನು ನಿಗದಿಪಡಿಸಿ ತಹಶೀಲ್ದಾರ್ ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಸಮಿತಿಯ ಸದಸ್ಯರಿಗೆ ವಿವಿಧ ಜಿಲ್ಲೆಗಳ ಜವಾಬ್ದಾರಿ ವಹಿಸಲಾಯಿತು.

ಜವಾಬ್ದಾರಿ ವಹಿಸಿಕೊಂಡಿರುವ ಸದಸ್ಯರು ಮತ್ತು ಅಧಿಕಾರಿಗಳು ಆಯಾ ಜಿಲ್ಲೆಯ ಮುಖ್ಯ ಜಿಲ್ಲಾಧಿಕಾರಿ,ಜಿಪಂ ಸಿಇಒ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರನ್ನು ಸಂಪರ್ಕಿಸಿ ಸಂಚರಿಸುವ ಮಾರ್ಗ,ಪ್ರಯಾಣ ದೂರ,ದಿನ,ತಂಗುವ ಸ್ಥಳಗಳನ್ನು ನಿರ್ಧರಿಸಬೇಕು ಎಂದರು.

ರಥಯಾತ್ರೆ ಸಭೆಯಲ್ಲಿ ಉಪವಿಭಾಗಾಧಿಕಾರಿ ಶಿವಮೂರ್ತಿ ಸೇರಿದಂತೆ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!