ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ಹಗಲಿರುಳು ದುಡಿದ ಸಮ್ಮೇಳನ ಸಂಚಾಲಕರಾದ ಡಾ.ಮೀರಾಶಿವಲಿಂಗಯ್ಯ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳದೇ, ಸಮ್ಮೇಳನ ಯಶಸ್ಸಿಗಾಗಿ ತಿಂಗಳುಗಳಗಟ್ಟಲೇ ಶಮವಹಿಸಿ ದುಡಿದ ಕಸಾಪ ಪದಾಧಿಕಾರಿಗಳು, ಕನ್ನಡ ಪರಸಂಘಟನೆಗಳು ಹಾಗೂ ಪ್ರಗತಿ ಪರಸಂಘಟನೆಗಳ ಮುಖಂಡರಿಗೆ ಕನಿಷ್ಟ ಕೃತಜ್ಞತೆ ಸಲ್ಲಿಸದಿರುವ ಬಗ್ಗೆ ಕಸಾಪ ಅಧ್ಯಕ್ಷ ಮಹೇಶ್ ಜೋಶಿ ವಿರುದ್ದ ನಾಳೆ ಪ್ರತಿಭಟನೆ ನಡೆಸಿ ಕಪ್ಪು ಬಾವುಟ ಪ್ರದರ್ಶನ ಮಾಡಲು ಮಂಡ್ಯ ಪ್ರಗತಿಪರ ಸಂಘಟನೆಗಳು ಹಾಗೂ ಕಸಾಪ ಸಮಾನ ಮನಸ್ಕರ ಸಂಘಟನೆಗಳು ತಯಾರಿ ನಡೆಸಿವೆ.
ಕಸಾಪ ಅಧ್ಯಕ್ಷ ಡಾ.ಮಹೇಶ್ ಜೋಶಿ ನಾಳೆ ಮಂಡ್ಯಕ್ಕೆ ಆಗಮಿಸುತ್ತಿದ್ದು, ಈ ಸಂದರ್ಭದಲ್ಲಿ ಭಾರೀ ಪ್ರತಿಭಟನೆ ನಡೆಸಲು ಪ್ರಗತಿಪರ ಸಂಘಟನೆಗಳ ಮುಖಂಡರು ತಯಾರಿ ನಡೆಸಿದ್ದು, ಮಹೇಶ್ ಜೋಶಿ ಮಂಡ್ಯದಲ್ಲಿ ಮಾಡಿದ ಅವಾಂತರಗಳ ಬಗ್ಗೆ ಪ್ಲೇಕಾರ್ಡ್ ಪ್ರದರ್ಶನ ಮಾಡಲಿದ್ದೇವೆ, ಇದರೊಂದಿಗೆ ಕಪ್ಪು ಬಾವುಟ ಪ್ರದರ್ಶನ ಮಾಡಲಿದ್ದೇವೆ, ಪ್ರತಿಭಟನೆಯಲ್ಲಿ ಹತ್ತು ಹಲವು ಸಂಘಟನೆಗಳ ಮುಖಂಡರು ಭಾಗವಹಿಸಲಿದ್ದಾರೆಂದು ಕಾರಸವಾಡಿ ಮಹದೇವು ನುಡಿಕರ್ನಾಟಕ.ಕಾಂ ಗೆ ತಿಳಿಸಿದ್ದಾರೆ.
ನಾಳೆ (ಮೇ 9) ಸಂಜೆ 4 ಗಂಟೆಗೆ ಮಂಡ್ಯದಲ್ಲಿ ನಡೆದ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಬಿಡುಗಡೆಯಾಗಲಿರುವ ‘ಬೆಲ್ಲದಾರತಿ’ ಸ್ಮರಣ ಸಂಚಿಕೆಯ ಕುರಿತು ಜಿಲ್ಲಾಧಿಕಾರಿಗಳು, ಸ್ಮರಣ ಸಂಚಿಕೆಯ ಅಧ್ಯಕ್ಷರಾದ ಅಪರ ಜಿಲ್ಲಾಧಿಕಾರಿಗಳು, ಸಂಪಾದಕರು ಹಾಗೂ ಪುಸ್ತಕ ಆಯ್ಕೆ ಸಮಿತಿ ಅಧ್ಯಕ್ಷ ಡಾ. ಎಚ್. ಎಸ್. ಮುದ್ದೇಗೌಡ ಅವರೊಂದಿಗೆ ಮಂಡ್ಯ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಡೆಯುವ ಸಮಾಲೋಚನಾ ಸಭೆಯಲ್ಲಿ ಜೋಶಿ0 ಭಾಗವಹಿಸುವ ನಿರೀಕ್ಷೆ ಇದೆ.
ಕಸಾಪ ಬೈಲಾ ತಿದ್ದುಪಡಿಗೆ ಕೈ ಹಾಕಿರುವ ಮಹೇಶ್ ಜೋಶಿ ನಡೆ ವಿರುದ್ದ ನಾಡಿನಾದ್ಯಂತ ಸಾಹಿತಿಗಳು, ಕವಿಗಳು, ಪ್ರಗತಿಪರರು ಮಹೇಶ್ ಜೋಶಿ ನಡೆ ರಾಜ್ಯದ ಮುಖ್ಯಮಂತ್ರಿಗಳಿಗೆ ದೂರು ಸಲ್ಲಿಸಿದ್ದು, ಅವರನ್ನು ಕಸಾಪ ಅಧ್ಯಕ್ಷ ಸ್ಥಾನದಿಂದ ವಜಾ ಮಾಡುವಂತೆ ಒತ್ತಡ ಹೇರಿದ್ದಾರೆ.




