Friday, May 17, 2024

ಪ್ರಾಯೋಗಿಕ ಆವೃತ್ತಿ

ಏಕರೂಪ ನಾಗರಿಕ ಸಂಹಿತೆ| ಕರಡು ಸಮಿತಿ ನಿರ್ಧಾರಕ್ಕೆ ಅನುಮೋದನೆ ನೀಡಿದ ಉತ್ತರಾಖಂಡ !

ಉತ್ತರಾಖಂಡ ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಕುರಿತು ಈ ಮೊದಲು ಸುದ್ದಿಯಾಗಿತ್ತು. ಇದೀಗ ವಿವಾದಾತ್ಮಕ ಏಕರೂಪ ನಾಗರಿಕ ಸಂಹಿತೆ ಕುರಿತು ತಜ್ಞರ ಕರಡು ಸಮಿತಿಯು ಈವರೆಗೆ ತೆಗೆದುಕೊಂಡ ನಿರ್ಧಾರಗಳನ್ನು ಉತ್ತರಾಖಂಡ ಸರ್ಕಾರವು ಅನುಮೋದಿಸಿದೆ.

ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಕರಡು ಸಮಿತಿಯ ನಿರ್ಧಾರಗಳಿಗೆ ಸಂಪುಟ ಅನುಮೋದನೆ ನೀಡಿದೆ ಎಂದು ಮುಖ್ಯ ಕಾರ್ಯದರ್ಶಿ ಎಸ್‌ಎಸ್ ಸಂಧು ಸುದ್ದಿಗಾರರಿಗೆ ತಿಳಿಸಿದ್ದಾರೆ. ಈ ಕುರಿತು ಸಮಿತಿಯನ್ನು ಮೇ.2022ರಲ್ಲಿ ರಚಿಸಲಾಗಿತ್ತು. ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ನೇತೃತ್ವದ ಸಮಿತಿಯು ಜನವರಿಯಲ್ಲಿ ಕರಡನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸುವ ಸಾಧ್ಯತೆಯಿದೆ. ನಂತರ ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವ ಪ್ರಕ್ರಿಯೆಯು ಪ್ರಾರಂಭವಾಗಲಿದೆ ಎಂದು ಹೇಳಲಾಗಿದೆ.

ಜೂನ್‌ನಲ್ಲಿ ಏಕರೂಪ ನಾಗರಿಕ ಸಂಹಿತೆಯ ಕರಡು ಸಮಿತಿಯ ಸದಸ್ಯರಾದ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ಅವರು ಉತ್ತರಾಖಂಡಕ್ಕೆ ಏಕರೂಪ ನಾಗರಿಕ ಸಂಹಿತೆಯ ಕರಡು ರಚನೆ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ರಾಜ್ಯ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲಾಗುವುದು ಎಂದು ಹೇಳಿದ್ದರು. ಉತ್ತರಖಂಡದ ಉದ್ದೇಶಿತ ಏಕರೂಪ ನಾಗರಿಕ ಸಂಹಿತೆಯ ಕರಡು ಈಗ ಪೂರ್ಣಗೊಂಡಿದೆ ಎಂದು ನಿಮಗೆ ತಿಳಿಸಲು ನನಗೆ ಅಪಾರ ಸಂತೋಷವಾಗಿದೆ. ತಜ್ಞರ ಸಮಿತಿಯ ವರದಿಯನ್ನು ಕರಡು ಪ್ರತಿಯೊಂದಿಗೆ ಮುದ್ರಿಸಿ ಉತ್ತರಾಖಂಡ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ನ್ಯಾಯಮೂರ್ತಿ ದೇಸಾಯಿ ಹೇಳಿದ್ದರು.

ಸಮಿತಿಯ ನೇತೃತ್ವವನ್ನು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ಅವರು ವಹಿಸಿದ್ದು, ದೆಹಲಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಪ್ರಮೋದ್ ಕೊಹ್ಲಿ, ಸಾಮಾಜಿಕ ಕಾರ್ಯಕರ್ತ ಮನು ಗೌರ್, ಮಾಜಿ ಮುಖ್ಯ ಕಾರ್ಯದರ್ಶಿ ಮತ್ತು ಐಎಎಸ್ ಅಧಿಕಾರಿ ಶತ್ರುಘ್ನ ಸಿಂಗ್ ಮತ್ತು ಡೂನ್ ವಿಶ್ವವಿದ್ಯಾಲಯದ ಉಪಕುಲಪತಿ ಸುರೇಖಾ ದಂಗ್ವಾಲ್ ಸೇರಿದ್ದಾರೆ.

ಏನಿದು ಏಕರೂಪ ನಾಗರಿಕ ಸಂಹಿತೆ?

ಏಕರೂಪ ನಾಗರಿಕ ಸಂಹಿತೆ ಎಂದರೆ ಇಡೀ ದೇಶದಲ್ಲಿ ಪ್ರತಿಯೊಂದು ಧರ್ಮ, ಜಾತಿ, ಪಂಗಡ, ವರ್ಗಕ್ಕೆ ಒಂದೇ ನಿಯಮ ಜಾರಿಗೆ ತರುವುದು. ಪ್ರಸ್ತುತ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಮತ್ತು ಪಾರ್ಸಿ ಸಮುದಾಯಗಳು ವಿಭಿನ್ನ ಧಾರ್ಮಿಕ ಕಾನೂನುಗಳನ್ನು ಹೊಂದಿವೆ. ಏಕರೂಪ ನಾಗರಿಕ ಸಂಹಿತೆ ಅನುಷ್ಠಾನವಾದರೆ ಬೇರೆಲ್ಲಾ ಧರ್ಮಗಳ ವೈಯಕ್ತಿಕ ಕಾನೂನುಗಳು ಅಂತ್ಯಗೊಳ್ಳುತ್ತವೆ.

ಏಕರೂಪ ಎನ್ನುವುದು ಭಾರತದ ಬಹುತ್ವ ಮತ್ತು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದುದು. ಏಕರೂಪ ನಾಗರಿಕ ಸಂಹಿತೆಯು ಪ್ರಜಾಸತ್ತಾತ್ಮಕ ಜಾತ್ಯತೀತ ಮತ್ತು ಸಮಾಜವಾದಿ ತತ್ವಗಳ ಆಧಾರದ ಮೇಲೆ ಭಾರತೀಯ ಗಣರಾಜ್ಯವನ್ನು ಬಲಪಡಿಸುವ ಸಾಂವಿಧಾನಿಕ ಬದ್ಧತೆಯನ್ನು ಸೋಲಿಸುತ್ತದೆ.

2019ರ ಚುನಾವಣೆ ವೇಳೆ ಬಿಜೆಪಿ ಪ್ರಣಾಳಿಕೆಯಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿ ಮಾಡುವ ಆಶ್ವಾಸನೆ ನೀಡಿತ್ತು. ದೇಶದ ಎಲ್ಲರಿಗೂ ಒಂದೇ ಕಾನೂನು ಇರಬೇಕು ಎಂದು ಬಿಜೆಪಿ ಹೇಳಿತ್ತು. ಒಂದು ವೇಳೆ ಈ ಕಾಯ್ದೆ ಜಾರಿಗೆ ಬಂದರೆ, ಹಿಂದೂ, ಮುಸ್ಲಿಂ, ಕ್ರೈಸ್ತ ಸೇರಿದಂತೆ ಯಾವುದೇ ಧರ್ಮಾಧಾರಿತ ಕಾನೂನುಗಳಿಗೆ ಬೆಲೆ ಇರೋದಿಲ್ಲ. ವೈಯಕ್ತಿಕ ಕಾನೂನು, ಸಿವಿಲ್ ಕಾನೂನುಗಳು ರದ್ದುಗೊಳ್ಳುತ್ತದೆ.  ಹಿಂದೂ ವಿವಾಹ ಕಾಯ್ದೆ, ಮುಸ್ಲಿಂ ವಿವಾಹ ಕಾನೂನು ಹೀಗೆ ಆಯಾ ಧರ್ಮಕ್ಕೆ ಅವರದ್ದೇ ಆದ ಕಾನೂನು ಇದೆ. ವಿವಾಹ, ವಿಚ್ಛೇದನ, ಆಸ್ತಿ ಹಂಚಿಕೆ ಸೇರಿದಂತೆ ಹಲವು ಕಾನೂನುಗಳು ಹಿಂದೂಗಳಿಗೆ ಒಂದು ರೀತಿ ಇದ್ದರೆ, ಮುಸ್ಲಿಮರಿಗೆ ಮತ್ತೊಂದು ರೀತಿ ಇದೆ. ಏಕರೂಪ ನಾಗರಿಕ ನೀತಿ ಸಂಹಿತೆ ಜಾರಿಗೆ ಬಂದರೆ ಇದು ಬದಲಾಗುತ್ತದೆ.

ಸಂವಿಧಾನದ ಆರ್ಟಿಕಲ್ 25 ಹಾಗೂ 28ರ ಅಡಿ ದೇಶದ ಯಾವುದೇ ಪ್ರಜೆ ತನ್ನ ಧಾರ್ಮಿಕ ಆಚರಣೆಗಳನ್ನು ಪಾಲಿಸಲು ಸಂವಿಧಾನ ಅವಕಾಶ ನೀಡುತ್ತೆ. ಒಂದು ವೇಳೆ ಎಲ್ಲ ಧರ್ಮದವರಿಗೂ ಒಂದೇ ಕಾನೂನು ಜಾರಿ ಮಾಡಿದರೆ, ವೈವಿಧ್ಯತೆಗೆ ಧಕ್ಕೆ ಬರಲಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!