ಸನ್ನಡತೆಯ ಹೆಸರಿನಲ್ಲಿ ಅತ್ಯಾಚಾರ, ಕೊಲೆ ಮಾಡಿರುವ ಆರೋಪಿಗಳ ಬಿಡುಗಡೆ ಖಂಡಿಸಿ, ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಮುರುಘಾಶ್ರೀ ವಿರುದ್ಧ ನಿಪ್ಷಕ್ಷಪಾತ ತನಿಖೆಗೆ ಒತ್ತಾಯಿಸಿ ರೈತ, ದಲಿತ, ಮಹಿಳಾ, ವಿದ್ಯಾರ್ಥಿ, ಯುವಜನ, ಕಾರ್ಮಿಕ, ಕೂಲಿಕಾರ ಮತ್ತು ಪ್ರಗತಿಪರ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಮಂಡ್ಯ ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿದ ಸಂಘಟನೆಗಳ ಪದಾಧಿಕಾರಿಗಳು, ಘೋಷಣೆಗಳನ್ನು ಕೂಗುತ್ತಾ ಬೆಂಗಳೂರು-ಮೈಸೂರು ಹೆದ್ದಾರಿ ಮೂಲಕ ಡಿಸಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಡಿಸಿ ಕಚೇರಿವರೆಗೆ ಬಂದ ಪ್ರತಿಭಟನಾಕಾರರನ್ನು ಬರದಂತೆ ಪೋಲಿಸರು ಬ್ಯಾರಿಕೇಡ್ಗಳನ್ನು ಅಳವಡಿಸಲಾಗಿತ್ತು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಬ್ಯಾರಿಕೇಡ್ ಗಳನ್ನು ತಳ್ಳುವ ವೇಳೆ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಯಿತು. ಆದರೂ ಪಟ್ಟು ಬಿಡದೇ ಬ್ಯಾರಿಕೇಡ್ಗಳನ್ನು ಬೇದಿಸಿ ಡಿಸಿ ಕಚೇರಿ ಆವರಣದಲ್ಲಿ ಪ್ರತಿಭಟನಾಕಾರರು ಧರಣಿ ನಡೆಸಿದರು.
ಗುಜರಾತ್ನಲ್ಲಿ 2002ರಲ್ಲಿ ನಡೆದಿದ್ದ ನರಮೇಧ ಮತ್ತು ಸಾಮೂಹಿಕ ಅತ್ಯಾಚಾರದಂತಹ ಹೀನ ಕೃತ್ಯ ಎಸಗಿ, ಅಪರಾಧ ಸಾಬೀತಾಗಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ 11 ಜನರನ್ನು ಸನ್ನಡತೆಯ ಆಧಾರದಲ್ಲಿ ಬಿಡುಗಡೆ ಮಾಡುವ ಮೂಲಕ ಬಿಲ್ಕಿಸ್ ಬಾನು ಎಂಬಾಕೆ ನಡೆಸಿದ ಹೋರಾಟವನ್ನು ಮಣ್ಣು ಪಾಲು ಮಾಡಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿದ್ದವರನ್ನು ಬಿಡುಗಡೆ ಮಾಡುವ ಮೂಲಕ ಅತ್ಯಾಚಾರಿಗಳ ರಕ್ಷಣೆ ಮಾಡಿರುವುದನ್ನು ಖಂಡಿಸಿದರು.
ರೈತನಾಯಕಿ ಸುನಂದಾ ಜಯರಾಮ್ ಮಾತನಾಡಿ, ಸ್ವಾತಂತ್ರ್ಯ ಅಮೃತ ಮಹೋತ್ಸವದ ಆಚರಣೆಯ ದಿನದಂದು ಮಹಿಳೆಯ ಮೇಲೆ ಅತ್ಯಾಚಾರ ನಡೆಸಿ ಆರು ಮಂದಿಯನ್ನು ಕೊಂದು ಹಾಕಿ ಅಪರಾಧಿಗಳಾಗಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ 11 ಜನರನ್ನು ಅವಧಿಪೂರ್ವದಲ್ಲಿ ಕ್ಷಮಾಧಾನ ಮಾಡಿ ಬಿಡುಗಡೆಗೊಳಿಸುವ ಮೂಲಕ ಗುಜರಾತ್ ಸರ್ಕಾರ ಸ್ವಾತಂತ್ರೃ ಮಹೋತ್ಸವಕ್ಕೆ ಕಪ್ಪು ಮಸಿ ಬಳಿದಿದೆ ಎಂದು ಕಿಡಿಕಾರಿದರು.
ದೇಶದ ಮಹಿಳೆಯರನ್ನು ಹೀನವಾಗಿ ಅಪಮಾನಿಸಿದ ಘಟನೆ ಇದಾಗಿದೆ. ಕೈದಿಗಳಿಗೆ ಮಾಫಿ ನೀಡಲು ತನ್ನದೇ ಆದ ನಿಯಮವಿದೆ. ಅಂತೆಯೇ ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ಸನ್ನಡತೆಯ ಆಧಾರದ ಮೇಲೆ ಬಿಡುಗಡೆ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಇದಲ್ಲದೆ ಬಿಡುಗಡೆಯಾದವರನ್ನು ಅದ್ದೂರಿಯಾಗಿ ಸನ್ಮಾನಿಸುವುದು ದುರಂತ. ಆದ್ದರಿಂದ ಬಿಡುಗಡೆ ಮಾಡಲಾಗಿರುವವರನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಯ ಕಾರಾಗೃಹ ವಾಸಕ್ಕೆ ಆದೇಶ ನೀಡಬೇಕು. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಹಾಗೂ ರಾಷ್ಟ್ರಪತಿ ಮಧ್ಯ ಪ್ರವೇಶ ಮಾಡಬೇಕು ಎಂದು ಆಗ್ರಹಿಸಿದರು.
ಮಹಿಲಾ ಮುನ್ನಡೆಯ ಪೂರ್ಣಿಮಾ ಮಾತನಾಡಿ, ರಾಜಸ್ಥಾನದಲ್ಲಿ ಕುಡಿಯುವ ನೀರನ್ನು ಮುಟ್ಟಿದ ಕಾರಣಕ್ಕೆ ದಲಿತ ಬಾಲಕನನ್ನು ಕೊಂದ ಶಿಕ್ಷಕನಿಗೆ ಆಜೀವ ಕಾರಾಗೃಹ ಶಿಕ್ಷೆ ನೀಡಬೇಕು. ಇನ್ನು ಪ್ರಗತಿಪರ,ವೈಚಾರಿಕ ಎಂದು ತೋರಿಸಿಕೊಂಡ ಮುರುಘಾಮಠದ ಶಿವಮೂರ್ತಿ ಸ್ವಾಮೀಜಿ ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೇಳಿಬಂದಿದೆ. ಆದ್ದರಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜನವಾದಿ ಸಂಘಟನೆಯ ದೇವಿ, ಸುಶೀಲಾ, ಲತಾ, ಸುನೀತಾ, ಶೋಭಾ, ಮಂಜುಳಾ,ಶಿಲ್ಪ, ಪ್ರಮೀಳಾ, ಹೂತಗೆರೆ ಜನಾರ್ಧನ್, ಟಿ.ಎಲ್.ಕೃಷ್ಣೇಗೌಡ, ರಾಮಯ್ಯ ಸೇರಿದಂತೆ ನೂರಾರು ಪ್ರತಿಭಟನಾಕಾರರಿದ್ದರು.




