Thursday, September 19, 2024

ಪ್ರಾಯೋಗಿಕ ಆವೃತ್ತಿ

ಶ್ರೀರಂಗಪಟ್ಟಣ| ತಮಿಳುನಾಡಿಗೆ ನೀರು: ನದಿಗಿಳಿದು ರೈತರ ಪ್ರತಿಭಟನೆ

ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ನವೆಂಬರ್‌ 1ರಿಂದ 15 ದಿನಗಳ ಕಾಲ ಪ್ರತಿದಿನ 2,600 ಕ್ಯೂಸೆಕ್‌ ನೀರು ಹರಿಸಬೇಕು ಎಂದು ಕಾವೇರಿ ನೀರು ನಿಯಂತ್ರಣ ಸಮಿತಿ ಶಿಫಾರಸು ಮಾಡಿದೆ. ಸಮತಿಯ ನಿರ್ಧಾರವನ್ನು ವಿರೋಧಿಸಿ ಭೂಮಿತಾಯಿ ಹೋರಾಟ ಸಮಿತಿಯ ರೈತರು ಸೋಮವಾರ ಸಂಜೆ ಕಾವೇರಿ ನದಿಗಿಳಿದು ಪ್ರತಿಭಟನೆ ನಡೆಸಿದರು.

ಶ್ರೀರಂಗಪಟ್ಟಣದ ಸೋಪಾನಕಟ್ಟೆ ಬಳಿ ನದಿಯಲ್ಲಿ ನಿಂತು ಅರ್ಧ ತಾಸು ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರ, ಕಾವೇರಿ ನೀರು ನಿಯಂತ್ರಣ ಸಮಿತಿ, ಸಚಿವರು ಮತ್ತು ಸಂಸದರ ವಿರುದ್ಧ ಘೋಷಣೆ ಕೂಗಿದರು. ರಾಜ್ಯ ಸರ್ಕಾರ ನೀರು ಬಿಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಲೇಬೇಕು ಎಂದು ಆಗ್ರಹಿಸಿದರು.

“ರಾಜ್ಯದಲ್ಲಿ ತೀವ್ರ ಸ್ವರೂಪದ ಬರಗಾಲ ಆವರಿಸಿರುವ ಸಂಕಷ್ಟದ ಸಂದರ್ಭದಲ್ಲಿ ರಾಜ್ಯದ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸುವಂತೆ ಶಿಫಾರಸು ಮಾಡಿರುವ ಕಾವೇರಿ ನೀರು ನಿರ್ವಹಣಾ ಸಮಿತಿಯ ಕ್ರಮ ಅವೈಜ್ಞಾನಿಕವಾಗಿದೆ. ಅಲ್ಲಿನ ಜಲಾಶಯಗಳಿಗೆ ಭೇಟಿ ನೀಡಿ ವಾಸ್ತವ ಸ್ಥಿತಿ ತಿಳಿಯದೆ ಶಿಫಾರಸು ಮಾಡುವುದು ಸರಿಯಲ್ಲ. ಅಧಿಕಾರಿಗಳು ರಾಜ್ಯದ ಪರ ಸಮರ್ಪಕ ಮಾಹಿತಿ ಒದಗಿಸುವಲ್ಲಿ ವಿಫಲರಾಗಿದ್ದಾರೆ” ಎಂದು ರೈತ ನಾಯಕ ಕೆ.ಎಸ್‌. ನಂಜುಂಡೇಗೌಡ ಆಕ್ರೋಶ ವ್ಯಕ್ತಪಡಿಸಿದರು.

“ಕೆಆರ್‌ಎಸ್‌ ಅಣೆಕಟ್ಟೆಯಿಂದ ಕಟ್ಟು ಪದ್ದತಿಯಲ್ಲಿ ನೀರು ಕೊಡಲೂ ಹಿಂದೇಟು ಹಾಕುವ ಸರ್ಕಾರ ತಮಿಳುನಾಡು ಸರ್ಕಾರ ಕೇಳಿದಾಗಲೆಲ್ಲ ಧಾರಾಳವಾಗಿ ನೀರು ಹರಿಸುತ್ತಿದೆ. ಇಲ್ಲಿಯ ಕೆಲವೆಡೆ ಬೆಳೆಗಳು ಒಣಗುತ್ತಿವೆ. ಕೆಲವೆಡೆ ಭತ್ತದ ಬೆಳೆ ಕಾಳು ಕಟ್ಟುವ ಹಂತದಲ್ಲಿದೆ. ಇಂತಹ ಭತ್ತದ ಬೆಳೆಗೆ ನೀರು ಕೊಡದೆ ಸರ್ಕಾರ ಸತಾಯಿಸುತ್ತಿದೆ. ಇಂತಹ ರೈತ ವಿರೋಧಿ ಸರ್ಕಾರಕ್ಕೆ ಜನರು ತಕ್ಕ ಬುದ್ಧಿ ಕಲಿಸಬೇಕು” ಎಂದು ಭೂಮಿ ತಾಯಿ ಹೋರಾಟ ಸಮಿತಿ ಅಧ್ಯಕ್ಷ ಬಿ ಸಿ ಕೃಷ್ಣೇಗೌಡ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಪುಟ್ಟಮಾದು, ಕೆಂಪೇಗೌಡ, ಮಹೇಶ್‌, ಡಿ ಎಂ ರವಿ, ಡಿ ಆರ್‌ ಸೋಮೇಶ್‌, ದೊಡ್ಡಪಾಳ್ಯ ಜಗದೀಶ್‌, ಹನಿಯಂಬಾಡಿ ನಾಗರಾಜು, ಕೆ ಶೆಟ್ಟಹಳ್ಳಿ ಮಹಲಿಂಗು, ದರಸಗುಪ್ಪೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರವಿಲಕ್ಷ್ಮಣ, ಕಿರಂಗೂರು ಮಹದೇವು, ದೊಡ್ಡೇಗೌಡನಕೊಪ್ಪಲು ರವಿ, ಚಾಮಪ್ಪ ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!