Thursday, July 25, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಹಾಲಿನ ದರ, ಪ್ರೋತ್ಸಾಹ ಧನ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ

ಬಾಕಿ ಉಳಿಸಿಕೊಂಡಿರುವ ಹಾಲಿನ ಪ್ರೋತ್ಸಾಹ ಧನ ಬಿಡುಗಡೆ ಮಾಡಿ,ಪ್ರೋತ್ಸಾಹ ಧನ 5 ರೂ.ನಿಂದ 10 ರೂ.ಗೆ ಏರಿಕೆಗೆ ಹೆಚ್ಚಿಸಬೇಕು ಹಾಗೂ ಲೀಟರ್ ಹಾಲಿಗೆ 50 ರೂ. ನಿಗದಿ ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಹಾಲು ಉತ್ಪಾದಕರ ರೈತರ ಕ್ಷೇಮಾಭಿವೃದ್ದಿ ಸಂಘ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಬುಧವಾರ ಮಂಡ್ಯದಲ್ಲಿ ಪ್ರತಿಭಟನೆ ನಡೆಯಿತು.

ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು,  ಕರ್ನಾಟಕ ರಾಜ್ಯದ ಕೃಷಿ ರಂಗದಲ್ಲಿ ಹೈನುಗಾರಿಕೆ ಕ್ಷೇತ್ರ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ. ಹೈನುಗಾರಿಕ ಬಹುತೇಕ ರೈತಾಪಿ ಕೃಷಿ ಕೂಲಿಕಾರರ ಕುಟುಂಬಗಳ ಆರ್ಥಿಕ ಮೂಲವೂ ಆಗಿದೆ. ಮಹಿಳೆಯರ ಶ್ರಮವೇ ಪ್ರಧಾನವಾಗಿರುವ ಈ ಹೈನುಗಾರಿಕೆಯು ಅನೇಕ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ರಾಜ್ಯದ KMF ನ ಅಡಿಯಲ್ಲಿ 15 ಹಾಲಿನ ಒಕ್ಕೂಟಗಳಿದ್ದು 14900 ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಮೂಲಕ 22.5 ಲಕ್ಷ ಸದಸ್ಯರಿಂದ ಪ್ರತಿದಿನ ಒಂದು ಕೋಟಿ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಆದರೆ ದಿನೇ ದಿನೇ ಹೆಚ್ಚುತ್ತಿರುವ ಪಶು ಆಹಾರದ ಬೆಲೆ. ಪಶುಗಳ ಖರೀದಿ ದರ, ನಿರ್ವಹಣೆ ಹಾಗೂ ಇನ್ನಿತರೆ ಕಾರಣಗಳಿಂದ ಲೀಟರ್ ಹಾಲಿನ ಉತ್ಪಾದನ ವೆಚ್ಚವು ಸರಿ ಸುಮಾರು 45 ರೂ. ನಷ್ಟು ಬರುತ್ತದೆ ಎಂದು ದೂರಿದರು.

ರಾಜ್ಯದ KMF ನ ಜಿಲ್ಲಾ ಒಕ್ಕೂಟಗಳು ಮತ್ತು ರಾಜ್ಯ ಸರ್ಕಾರ ನೀಡುತ್ತಿರುವ ಪ್ರೋತ್ಸಾಹ ಧನ ಸೇರಿ 37 ರೂ. ಉತ್ಪಾದಕರಿಗೆ ಪಾವತಿಸಲಾಗುತ್ತಿದ್ದು ಈ ಹಣದಲ್ಲಿಯು ಪ್ರತಿ ಲೀಟರ್ ಮೇಲೆ 6 ರಿಂದ 7ರೂ. ನಷ್ಟವಾಗುತ್ತಿರುವ ಈ ಸಂದರ್ಭದಲ್ಲೇ ರಾಜ್ಯ ಸರ್ಕಾರ ಪ್ರೋತ್ಸಾಹ ಧನವನ್ನು 7-8 ತಿಂಗಳಿಂದ ನಿಲ್ಲಿಸಿ ತಡೆ ಹಿಡಿದಿರುವುದು ಹಾಲು ಉತ್ಪಾದಕರಿಗೆ ಸಮಸ್ಯೆ ಆಗಿದೆ. ಕಳೆದ 1 ವರ್ಷದಿಂದ ಭಾದಿಸುತ್ತಿರುವ ತೀವ್ರ ಬರಗಾಲ ಗಾಯದ ಮೇಲೆ ಮತ್ತೊಂದು ಬರೆ ಎಳೆದಂತಾಗಿದೆ. ಇದರಿಂದ ಈಗಾಗಲೇ ಸರ್ಕಾರಗಳ ರೈತ ವಿರೋಧಿ ಧೋರಣೆಗಳಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಹಾಲು ಉತ್ಪಾದಕರು ಹೈನುಗಾರಿಕೆಯಿಂದಲೂ ದೂರ ಉಳಿಯುವ ಸಾಧ್ಯತೆಗಳು ಹೆಚ್ಚಾಗುತ್ತಿವೆ ಎಂದರು.

ಸಹಕಾರಿ ತತ್ವದಲ್ಲಿ ಬಲಗೊಂಡಿರುವ ನಂದಿನಿ ಸಂಸ್ಥೆಯ ಮಾರುಕಟ್ಟೆಯನ್ನು ವಿಸ್ತರಿಸಿ ಹಾಲು ಉತ್ಪಾದಕರನ್ನು ಸಂರಕ್ಷಿಸಿ, ಹೈನುಗಾರಿಕೆಯನ್ನು ಉಳಿಸಬೇಕಾಗಿದ್ದ ಸರ್ಕಾರವೇ ಈ ಕ್ಷೇತ್ರದಲ್ಲಿ ಬಹುರಾಷ್ಟ್ರೀಯ ಕಂಪನಿಗಳಿಗೆ ಮತ್ತು ಖಾಸಗಿ ಕಂಪನಿಗಳಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಹಾಗಾಗಿ ಕೂಡಲೇ ಬಾಕಿ ಉಳಿಸಿಕೊಂಡಿರುವ ಪ್ರೋತ್ಸಾಹ ಧನ ಬಿಡುಗಡೆ ಮಾಡಿ ಈ ಕೆಳಕಂಡ ಬೇಡಿಕೆಗಳನ್ನು ಈಡೇರಿಸುವ ಮೂಲಕ ರಾಜ್ಯದ ಸಹಕಾರಿ ತತ್ವದ ಹೈನುಗಾರಿಕೆ ಸಂರಕ್ಷಿಸಿ ಉತ್ಪಾದಕರನ್ನು ಉಳಿಸಲು ಸರ್ಕಾರ ಮುಂದಾಗಬೇಕೆಂದು ಆಗ್ರಹಿಸಿದರು.

ಬೇಡಿಕೆಗಳೇನು ?

  • ಹಾಲು ಉತ್ಪಾದಕರಿಗೆ ಬಾಕಿ ಇರುವ ಪ್ರೋತ್ಸಾಹ ಧನವನ್ನು ರಾಜ್ಯ ಸರ್ಕಾರ ಕೂಡಲೆ ಬಿಡುಗಡೆ ಮಾಡಬೇಕು,
    ಪ್ರೋತ್ಸಾಹ ಧನ 5ರೂ.ಗಳ ಬದಲಿಗೆ 10ರೂ.ಗಳಿಗೆ ಏರಿಕೆ ಮಾಡಬೇಕು.
  • ಹಸುಗಳ ಬೆಲೆ ಏರಿಕೆ ಸೇರಿದಂತೆ ಉತ್ಪಾದನ ವೆಚ್ಚ ವಿಪರೀತ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಡಾ ಎಂ.ಎಸ್. ಸ್ವಾಮಿನಾಥನ್ ಆಯೋಗದ ಶಿಫಾರಸ್ಸಿನಂ: ಲೀಟರ್ ಹಾಲಿಗೆ 50ರೂಪಾಯಿ ಬೆಲೆ ನಿಗಧಿ ಮಾಡಬೇಕು.
  • ಕೆ.ಎಂ.ಎಫ್. ನಿಂದ ಹಾಲು ಉತ್ಪಾದಕರ ಮಕ್ಕಳಿಗೆ ಪ್ರತಿ ಜಿಲ್ಲೆಗೊಂದು ವಿದ್ಯಾರ್ಥಿಗಳ ವಸತಿ ನಿಲಯ ಪ್ರಾರಂಭಿಸಬೇಕು.
  • ಪಶು ಆಹಾರಗಳ ಗುಣಮಟ್ಟ ಕಾಯ್ದುಕೊಳ್ಳಬೇಕು. ಪಶು ಆಹಾರಗಳ ಬೆಲೆ ಇಳಿಸಿ ಹಾಗೂ ಬೆಲೆ ಏರಿಕೆ ನಿಯಂತ್ರಣ ಮಾಡಲು ಕೆ.ಎಂ.ಎಫ್.ನಿಂದ ಸಬ್ಸಿಡಿಯನ್ನು ನೀಡಬೇಕು.
  • ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ಕೇಂದ್ರಗಳನ್ನು ವ್ಯಾಪಕವಾಗಿ ಹೆಚ್ಚಿಸಬೇಕು. ಹಾಲಿನ ಉತ್ಪನ್ನಗಳು ಮತ್ತು ಯಂತ್ರೋಪಕರಣಗಳ ಮೇಲಿನ ಜಿ.ಎಸ್.ಟಿ. ತೆರಿಗೆಯನ್ನು ಕೇಂದ್ರ ಸರ್ಕಾರ ರದ್ದು ಮಾಡಬೇಕು.
  • ಹೈನುಗಾರಿಕೆ ನಡೆಸಲು ರಾಜ್ಯ ಸರ್ಕಾರ ಸಬ್ಸಿಡಿ ಸಹಿತ ಸಾಲ ನೀಡಬೇಕು.
  • ಪ್ರಾಥಮಿಕ ಸಹಕಾರ ಸಂಘಗಳಲ್ಲಿ ದುಡಿಯುವ ನೌಕರರಿಗೆ ಕೆಲಸದ ಭದ್ರತೆ ಇತ್ಯಾದಿ ಸೌಲಭ್ಯಗಳನ್ನು ಖಾತ್ರಿ ಮಾಡಬೇಕು.
  • ಹಾಲು ಉತ್ಪಾದಕರ ಸಹಕಾರಿ ಸಂಘಗಳ ಒಕ್ಕೂಟಗಳಲ್ಲಿ ನೇಮಕಾತಿ. ಟೆಂಡರ್‌ಗಳ ಹೆಸರಿನಲ್ಲಿ ಹಾಗೂ ಇತರೆ ವಿಚಾರಗಳಲ್ಲಿ ಭ್ರಷ್ಟಾಚಾರ ತಡೆಗಟ್ಟಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಪ್ರಾಂತ ರೈತಸಂಘದ ಎಲ್.ಎನ್.ಭರತ್ ರಾಜ್, ಮುಖಂಡರಾದ ಲಿಂಗರಾಜ ಮೂರ್ತಿ, ಎಸ್.ವಿಶ್ವನಾಥ್, ಟಿ.ಆರ್.ಸಿದ್ದೇಗೌಡ, ಮಹದೇವು, ಸತೀಶ್, ರಾಜಣ್ಣ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!