ಜಾಮಿಯಾ ಮಸೀದಿಯಿಂದ ಮದರಸ ಖಾಲಿ ಮಾಡಿಸಿ, ಮಸೀದಿಯ ಒಳಗಿರುವ ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಾಲಯದಲ್ಲಿ ಹಿಂದೂಗಳಿಗೆ ಪೂಜೆ ಮಾಡಲು ಅವಕಾಶ ಕಲ್ಪಿಸುವಂತೆ ಹಿಂದೂ ಪರ ಸಂಘಟನೆಗಳು ಕರೆ ನೀಡಿದ್ದ ಶ್ರೀರಂಗಪಟ್ಟಣ ಚಲೋ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ 144 ಸೆಕ್ಷನ್ ಜಾರಿಗೊಳಿಸುವ ಮೂಲಕ ತಡೆಯೊಡ್ಡಿದರೂ ವಿಶ್ವ ಹಿಂದು ಪರಿಷತ್, ಭಜರಂಗದಳ ಸೇರಿದಂತೆ ಹಿಂದೂಪರ ಕಾರ್ಯಕರ್ತರುಗಳು ಮುತ್ತಿಗೆ ಹಾಕಿದರು.
ಇಂದು ಬೆಳಿಗ್ಗೆ ಸುಮಾರು 11 ಗಂಟೆಗೆ ತಂಡೋಪತಂಡವಾಗಿ ಜಮಾವಣೆಗೊಂಡ ಕಾರ್ಯಕರ್ತರನ್ನು ಜಿಲ್ಲಾಡಳಿತ ಶ್ರೀರಂಗಪಟ್ಟಣ ಪ್ರವೇಶಿಸದಂತೆ ನಾಕಾಬಂದಿ ನಿರ್ಮಿಸಿ, ಬಾರಿ ಬಿಗಿ ಬಂದೋಬಸ್ತ್ ಮೂಲಕ ಹೊರವಲಯದ ಕಿರಂಗೂರಿನ ಬನ್ನಿ ಮಂಟಪದ ಬಳಿ ತಡೆದರು.
ಸಾರ್ವಜನಿಕರ ಪರದಾಟ
ಹಿಂದೂಪರ ಸಂಘಟನಾ ಕಾರ್ಯಕರ್ತರನ್ನು ಪಟ್ಟಣ ಪ್ರವೇಶಿಸದಂತೆ ತಡೆಯಲು ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಾಲ್ಕು ದಿಕ್ಕುಗಳಲ್ಲೂ ಪೊಲೀಸರು ಬ್ಯಾರಿಕೇಡ್ ನಿರ್ಮಿಸಿ ಬಾರಿ ಬಿಗಿಬಂದೋಬಸ್ತ್ ಮಾಡಿದ್ದರಿಂದ ಸ್ಥಳೀಯ ನಿವಾಸಿಗಳು ತಮ್ಮ ಕೆಲಸ ಕಾರ್ಯಗಳಿಗೆ ತೆರಳಲು ಪರದಾಡುವಂತಾಯಿತು.
ಪೊಲೀಸರ ನಡುವೆ ಚಕಮಕಿ
ಶ್ರೀರಂಗಪಟ್ಟಣ ಮೂಡಲ ಬಾಗಿಲು ಆಂಜನೇಯಸ್ವಾಮಿ ಮೂಲ ಮಂದಿರದಲ್ಲಿ ಮದರಸಾ ಶಿಕ್ಷಣ ಮುಂದುವರೆದಿದ್ದು, ಅಲ್ಲಿ ವಿಧ್ಯಾರ್ಥಿಗಳಿಗೆ ಇಸ್ಲಾಂ ಧಾರ್ಮಿಕ ಪಾಠ ಬೋದಿಸುತ್ತಿದ್ದಾರೆ. ಹಿಂದೂ ದೇವರುಗಳ ಹಲವಾರು ಕುರುಹುಗಳನ್ನ ನಾಶಪಡಿಸುತ್ತಿದ್ದಾರೆ ಇದನ್ನು ನಿಲ್ಲಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಯತೀಶ್ ಸೇರಿದಂತೆ ಪೊಲೀಸರನ್ನ ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ವೇಳೆ ನಿಷೇಧಾಜ್ಞೆ ಉಲ್ಲಂಘಿಸಿದರೆ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್ಚರಿಕೆ ನೀಡಿದರು. ಈ ವೇಳೆ ಹಿಂದೂ ಸಂಘಟನೆಗಳ ಕಾರ್ಯಕರ್ತರ ನಡುವೆ ಕೆಲ ಕಾಲ ಮಾತಿನ ಚಕಮಕಿ ನಡೆಯಿತು. ನಮ್ಮ ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸ ಮಾಡಿದ್ದೀರಿ. ಮುಂದೆ ಬೃಹತ್ ಹೋರಾಟ ನಡೆಯಲಿದೆ, ನಮಗೆ ಸಾಯುವ ಭಯ ಇಲ್ಲ, ಮಸೀದಿಗೆ ನುಗ್ಗುವ ತಾಕತ್ತು ನಮಲ್ಲೂ ಇದೆ ಎಂದು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು.
ನಾವು ಜಿಲ್ಲಾಡಳಿತಕ್ಕೆ ಕೊಟ್ಟಿರುವ ಮನವಿ ಬಗ್ಗೆ ಜಿಲ್ಲಾಡಳಿತ ಯಾವ ಕ್ರಮ ಕೈಗೊಂಡಿದೆ ಎಂಬುದನ್ನು ಈಗಲೇ ತಿಳಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಇಲಾಖೆಯನ್ನು ಪ್ರತಿಭಟನಾಕಾರರು ಒತ್ತಾಯಿಸಿದರು.
ಹಿಂದೂಪರ ಸಂಘಟನೆಗಳ ಒತ್ತಾಯಕ್ಕೆ ಮಣಿದು ಸ್ಥಳಕ್ಕೆ ಆಗಮಿಸಿದ ಪಾಂಡವಪುರ ಉಪವಿಭಾಗಾಧಿಕಾರಿ ಬಿ.ಸಿ ಶಿವಾನಂದ ಮೂರ್ತಿ, ತಹಶಿಲ್ದಾರ್ ಶ್ವೇತ ಎನ್. ರವೀಂದ್ರ ಮನವಿ ಆಲಿಸಿದರು.ಹಿಂದೂಪರ ಸಂಘಟನೆಗಳ ಮುಖಂಡ ಬಾಲು, ವಿಶ್ವ ಹಿಂದೂಪರಿಷತ್ ತಾಲೂಕು ಕಾರ್ಯದರ್ಶಿ ಬೆಳಗೊಳ ಸುನೀಲ್, ವಕೀಲ ರವೀಶ್ ಸೇರಿದಂತೆ ಸಹಸ್ರಾರು ಹಿಂದೂ ಕಾರ್ಯಕರ್ತರು ಇದ್ದರು.
ಪ್ರಗತಿಪರರ ಆಕ್ರೋಶ
ಜಿಲ್ಲೆಯಲ್ಲಿ ಹಲವು ಜ್ವಲಂತ ಸಮಸ್ಯೆಗಳಿದ್ದರೂ ಅದರ ಬಗ್ಗೆ ಧ್ವನಿ ಎತ್ತದ ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳ ದೇವರ ಹೆಸರಿನಲ್ಲಿ ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಪ್ರಗತಿಪರರು ಆಕ್ರೋಶ ವ್ಯಕ್ತಪಡಿಸಿದರು.
ಮೈಷುಗರ್ ಕಾರ್ಖಾನೆ ಇನ್ನೂ ಪ್ರಾರಂಭವಾಗಿಲ್ಲ, ರೈತರ ಬೆಳೆಗೆ ಬೆಲೆ ಸಿಗುತ್ತಿಲ್ಲ ಅಗತ್ಯವಸ್ತುಗಳ ಬೆಲೆ ಏರಿಕೆಯಾಗಿ ಜೀವನ ನಡೆಸುವುದೇ ಕಷ್ಟವಾಗಿರುವ ಸಂದರ್ಭದಲ್ಲಿ ಇವುಗಳ ಬಗ್ಗೆ ಪ್ರಶ್ನೆ ಮಾಡದೆ ಎಂದೋ ಇತಿಹಾಸದ ಗರ್ಭದಲ್ಲಿ ಹುದುಗಿಹೋಗಿರುವ ಮಂದಿರ -ಮಸೀದಿಯ ಬಗ್ಗೆ ಮಾತನಾಡುತ್ತ ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.