ಮೈಸೂರು ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ತಮ್ಮ ಅವಧಿಯಲ್ಲಿ ಅನೇಕ ಜನೋಪಯೋಗಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಅಭಿವೃದ್ಧಿಯ ಹರಿಕಾರ ಎಂದು ಹೆಸರು ಪಡೆದಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ಎಸ್.ಅಶ್ವಥಿ ಹೇಳಿದರು.
ಶ್ರೀರಂಗಪಟ್ಟಣ ತಾಲೂಕಿನ ವಿಶ್ವ ವಿಖ್ಯಾತ ಕೃಷ್ಣರಾಜಸಾಗರದಲ್ಲಿ ಕಾವೇರಿ ನೀರಾವರಿ ನಿಗಮದ ವತಿಯಿಂದ ಆಯೋಜಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ 138 ನೇ ಜಯಂತಿ ಕಾರ್ಯಕ್ರಮದಲ್ಲಿ ನಾಲ್ವಡಿ ರವರ ಪ್ರತಿಮೆಗೆ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು.
ಹಲವು ಕೈಗಾರಿಕೆಗಳನ್ನು ಪ್ರಾರಂಭಿಸಿದ ಅವರು ಸಾಹಿತ್ಯ, ಸಂಗೀತ, ವಾಸ್ತು ಶಿಲ್ಪಗಳ ಅಭಿವೃದ್ಧಿಗೆ ಪ್ರಾಮುಖ್ಯತೆಯನ್ನು ಕೊಟ್ಟು 1915ರಲ್ಲಿ ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಪ್ರಾರಂಭಿಸಿದರು.
ಮಂಡ್ಯ, ಮೈಸೂರು, ಬೆಂಗಳೂರು ಜಿಲ್ಲೆಗಳ ಅಭಿವೃದ್ದಿಗಾಗಿ ತಮ್ಮ ಒಡವೆಗಳನ್ನು ಅಡವಿಟ್ಟು ಕನ್ನಂಬಾಡಿ ಅಣೆಕಟ್ಟು ನಿರ್ಮಿಸುವುದರ ಜೊತೆಗೆ ಏಷ್ಯಾ ಖಂಡದಲ್ಲೇ ಮೊದಲು ಜಲ ವಿದ್ಯುತ್ ಯೋಜನೆಯನ್ನು ಪ್ರಾರಂಭಿಸಿದ ಕೀರ್ತಿ ನಾಲ್ವಡಿಯವರಿಗೆ ಸಲ್ಲುತ್ತದೆ. ಇವರ ಯೋಜನೆಗಳು ಇಂದಿಗೂ ಅವಿಸ್ಮರಣೀಯ ಎಂದರು.
ಕಾ.ನೀ.ನಿಗಮ ಮಂಡ್ಯ ವೃತ್ತದ ಅಧೀಕ್ಷಕ ಅಭಿಯಂತರ ಮಹೇಶ್ ಮಾತನಾಡಿ, ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಮೈಸೂರಿನಲ್ಲಿ ವಿಶ್ವ ವಿದ್ಯಾನಿಲಯವನ್ನು ತೆರೆದ ಇವರು, ಇಂದಿನ ಯುವ ಜನತೆ ಅವರನ್ನು ಎಂದಿಗೂ ಮರೆಯುವಂತಿಲ್ಲ ಎಂದು ಹೇಳಿದರು. ನಂತರ ಕಾವೇರಿ ನೀರಾವರಿ ನಿಗಮದ ವತಿಯಿಂದ ಸಿಹಿ ವಿತರಣೆ ಮಾಡಲಾಯಿತು.
ಕಾ.ನೀ.ನಿಗಮ ಮಂಡ್ಯ ವೃತ್ತದ ಅಧೀಕ್ಷಕ ಅಭಿಯಂತರ ಮಹೇಶ್, ಪಾಂಡವಪುರ ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ, ಕಾ.ನೀ.ನಿಗಮದ ಕಾರ್ಯಪಾಲಕ ಅಭಿಯಂತರ ರಾಮಮೂರ್ತಿ, ಸಹಾಯಕ ಕಾರ್ಯಪಾಲಕ ಅಭಿಯಂತರ ಫಾರೂಕ್ ಅಭು, ರಶ್ಮಿ, ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ ಇನ್ಸ್ ಪೆಕ್ಟರ್ ಜಗದೀಶ್, ಕೆಆರ್‌ಎಸ್ ಗ್ರಾ.ಪಂ ಅಧ್ಯಕ್ಷ ನರಸಿಂಹ, ಲೆಕ್ಕ ಅಧೀಕ್ಷಕ ಮಹೇಶ್, ಬೆಳಗೊಳ ವೃತ್ತದ ಉಪತಹಶೀಲ್ದಾರ್ ಸಾಕಮ್ಮ, ಕೆಆರ್‌ಎಸ್ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಪ್ಪ, ಖಚಾಂಚಿ ನಾಗೇಶ್ ಸೇರಿದಂತೆ ಇತರರಿದ್ದರು.