-
ಪುನೀತ್ ರಾಜಕುಮಾರ್ ಅವರ ಸಾಮಾಜಿಕ ಕಾರ್ಯ ಪರಿಗಣಿಸಿ ಹೆಸರಿಡಲು ಮನವಿ
- ಬಡವರಿಗೆ, ಅನಾಥರಿಗೆ, ವೃದ್ಧರಿಗೆ ಆಶ್ರಯ ನೀಡಿದ್ದ ನಟರಿಗೆ ಗೌರವ ಸಲ್ಲಿಸಲು ಕೋರಿಕೆ
ಮಂಡ್ಯ ನಗರದ ಯಾವುದಾದರೂ ಒಂದು ಪ್ರಮುಖ ರಸ್ತೆಗೆ ಅಥವಾ ಒಂದು ವೃತ್ತಕ್ಕೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹೆಸರನ್ನು ನಾಮಕರಣ ಮಾಡಲು ಕ್ರಮ ವಹಿಸುವಂತೆ ಕೋರಿ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಅಜಯ್ ನಾಗಭೂಷಣ್ ಅವರನ್ನು ಭೇಟಿ ಮಾಡಿದ ಸ್ಥಳೀಯ ಸಂಸ್ಥೆಗಳ ಮಂಡ್ಯ ಕ್ಷೇತ್ರದ ಶಾಸಕ ದಿನೇಶ್ ಗೂಳಿಗೌಡ ಹಾಗೂ ದಕ್ಷಿಣ ಪದವೀಧರ ಕ್ಷೇತ್ರದ ಶಾಸಕ ಮಧು ಜಿ. ಮಾದೇಗೌಡ ಅವರು ಮನವಿ ಮಾಡಿದ್ದಾರೆ. ಅಲ್ಲದೆ, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಅವರಿಗೂ ಪತ್ರ ಮೂಲಕರ ಮನವಿ ಸಲ್ಲಿಸಿದ್ದಾರೆ.
ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಸಾಮಾಜಿಕ ಕಾರ್ಯ ಶ್ಲಾಘನೀಯ. ಅವರು ಎಲ್ಲರನ್ನೂ ಅಗಲಿ ವರ್ಷಗತಿಸಿದರೂ ಜನಮಾನಸದಿಂದ ದೂರವಾಗಿಲ್ಲ. ಅವರು ಮಾಡಿದ ಕಾರ್ಯಗಳು ಇಂದಿಗೂ ಜೀವಂತವಾಗಿದೆ. ನಟನೆಯಲ್ಲಿಯೂ ಉತ್ತಮ ಸಂದೇಶವನ್ನು ಜನರಿಗೆ ನೀಡುತ್ತಾ ಬಂದಿದ್ದರು. ಅಲ್ಲದೆ, ಬಡವರಿಗೆ, ಅನಾಥರಿಗೆ, ವೃದ್ಧರಿಗೆ ಆಶ್ರಯ ನೀಡಿದ್ದರು. ಮಂಡ್ಯದಲ್ಲಿಯೂ ಇವರ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹೆಸರನ್ನು ಮಂಡ್ಯ ನಗರದ ಯಾವುದಾದರೂ ಒಂದು ಪ್ರಮುಖ ರಸ್ತೆಗೆ ಅಥವಾ ಒಂದು ವೃತ್ತಕ್ಕೆ ನಾಮಕರಣ ಮಾಡುವಂತೆ ಕೋರಿದ್ದಾರೆ.
ಮನವಿ ಪತ್ರದಲ್ಲೇನಿದೆ?
ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಕನ್ನಡಿಗರ ಹೃದಯ ಸಾಮ್ರಾಜ್ಯದಲ್ಲಿ ಅಚ್ಚಳಿಯದ ನೆನಪನ್ನು ಉಳಿಸಿ ಹೋಗಿದ್ದಾರೆ. ಪುನೀತ್ ರಾಜಕುಮಾರ್ ಅವರು ನಿಧನದ ನಂತರವೂ ಕೂಡಾ ಬದುಕಿದ್ದಾರೆ ಅಂದರೆ ತಮ್ಮ ಜೀವಿತಾವಧಿಯಲ್ಲಿ ಅವರು ಕೈಗೊಂಡ ಅನೇಕ ಜನಪರ, ಸಾಮಾಜಿಕ ಕಾರ್ಯಗಳಾದ, ಅನಾಥಾಶ್ರಮ, ವೃದ್ಧಾಶ್ರಮ, ಬಡ ಮಕ್ಕಳಿಗೆ ಶಿಕ್ಷಣ ಸೇರಿದಂತೆ ಸಾವಿರಾರು ಜನರಿಗೆ ಎಲೆಮರೆ ಕಾಯಿಯಂತೆ ಸೇವೆ ಮಾಡಿರುವುದೆ ಸಾಕ್ಷಿಯಾಗಿದೆ.
ಇವರ ಕಲೆ ಮತ್ತು ಅಭಿನಯ ಅಷ್ಟೇ ಅಲ್ಲದೆ ಸರಳ ಜೀವನ, ಸಾಮಾಜಿಕ ಸೇವೆಗಳನ್ನು ನೋಡಿದಾಗ ಸಾವಿನಲ್ಲೂ ಸಾರ್ಥಕತೆಯನ್ನು ಕಂಡಿದ್ದಾರೆ. ಇಷ್ಟೆಲ್ಲ ಕಾರ್ಯಕ್ರಮಗಳು ಅವರ ನಿಧನ ನಂತರವೆ ಸಮಾಜಕ್ಕೆ ಗೊತ್ತಾಯಿತು. ಅವರ ತಂದೆ ಡಾ. ರಾಜ್ ಕುಮಾರ್ ಹೇಗೆ ಸರಳವಾಗಿ, ಮಾದರಿಯಾಗಿ ಬದುಕನ್ನು ನಡೆಸಿದರೋ ಅದೇ ರೀತಿಯಲ್ಲಿ ಪುನೀತ್ ರಾಜಕುಮಾರ್ ಅವರು ತಮ್ಮ ಜೀವನದಲ್ಲಿ ಉತ್ತಮ ಗುಣಗಳನ್ನು ಅಳವಡಿಸಿಕೊಂಡು ತಮ್ಮ ಚಿಕ್ಕ ವಯಸ್ಸಿಗೆ ಅಪಾರ ಯಶಸ್ಸನ್ನು ಕಂಡು ಸಮಾಜಮುಖಿ ಚಿತ್ರಗಳ ಮುಖಾಂತರ ಸಮಾಜಕ್ಕೆ, ಯುವಜನರಿಗೆ ಉತ್ತಮ ಸಂದೇಶವನ್ನು ನೀಡಿದ್ದಾರೆ.
ಹಾಗಾಗಿ, ಯುವಜನರಿಗೆ ಇವರ ಆದರ್, ಸೇವಾಗುಣಗಳು ಮುಂದಿನ ಪೀಳಿಗೆಗೂ ತಲುಪುವಂತೆ ಇವರ ಹೆಸರನ್ನು ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡಲು ಮಂಡ್ಯ ನಗರದ ಯಾವುದಾದರೂ ಪ್ರಮುಖ ರಸ್ತೆಗೆ ಅಥವಾ ವೃತ್ತಕ್ಕೆ “ಕರ್ನಾಟಕ ರತ್ನ”ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹೆಸರನ್ನು ನಾಮಕರಣ ಮಾಡಬೇಕೆಂದು ಶಾಸಕರಾದ ದಿನೇಶ್ ಗೂಳಿಗೌಡ ಹಾಗೂ ಮಧು ಜಿ. ಮಾದೇಗೌಡ ಅವರು ಮನವಿ ಮಾಡಿದ್ದಾರೆ.




