Friday, September 20, 2024

ಪ್ರಾಯೋಗಿಕ ಆವೃತ್ತಿ

ಪುನೀತ್ ರಾಜ್‍ಕುಮಾರ್ ಸೇವಾ ಕಾರ್ಯ ಅನನ್ಯ : ಪಿ.ಎಂ.ನರೇಂದ್ರಸ್ವಾಮಿ

ಕನ್ನಡ ಚಿತ್ರರಂಗದ ಮೇರುನಟರಾದ ಡಾ.ರಾಜ್‌ಕುಮಾರ್‌ರವರ ಆದರ್ಶಗಳನ್ನು ಮೈಗೂಡಿಸಿಕೊಂಡ ಪುನೀತ್ ರಾಜ್‍ಕುಮಾರ್ ಅವರ ಸೇವಾ ಕಾರ್ಯಗಳು ಅನನ್ಯವಾದುದು ಎಂದು ಕೆಪಿಸಿಸಿ ಉಪಾಧ್ಯಕ್ಷ ಪಿ.ಎಂ. ನರೇಂದ್ರಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.

ಮಂಡ್ಯ ನಗರದ ಗುತ್ತಲು ರಸ್ತೆಯಲ್ಲಿರುವ ಕುವೆಂಪು ಮಾದರಿ ಶಾಲಾ ಆವರಣದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಡಾ. ಎಚ್.ಕೃಷ್ಣ ಅವರ ಅಭಿಮಾನಿಗಳು ಆಯೋಜಿಸಿದ್ದ ‘ಪುನೀತೋತ್ಸವ ಹಾಗೂ ನವೀನ್ ಸಜ್ಜು ಮ್ಯೂಜಿಕಲ್ ನೈಟ್’ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ವಿವಿಧ ಸ್ಪರ್ಧಾಳುಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

ಮೇರು ವ್ಯಕ್ತಿಯನ್ನು ನೆನಪಿಸಿಕೊಳ್ಳುವ ಕಾರ್ಯ ಮಾದರಿ

ಪುನೀತ್ ರಾಜ್ ಕುಮಾರ್ ಅವರು ತಮ್ಮ ಜೀವಿತಾವಧಿಯಲ್ಲಿ ಮಾಡಿದ ದಾನ, ಧರ್ಮ ಹಾಗೂ ಸಾಮಾಜಿಕ ಸೇವೆಯ ಬಗ್ಗೆ ಯಾರಿಗೂ ಸುಳಿವು ಬಿಟ್ಟಿರಲಿಲ್ಲ. ಅವರ ಮರಣದ ನಂತರ ಅವರ ಸಾಮಾಜಿಕ ಸೇವಾ ಕಾರ್ಯಗಳನ್ನು ಜನರೇ ತೆರೆದಿಟ್ಟರು. ಇಂತಹ ಮೇರು ವ್ಯಕ್ತಿಯನ್ನು ನೆನಪಿಸಿಕೊಳ್ಳುವ ಕಾರ್ಯ ಮಾದರಿಯಾದುದು. ಅಭಿಮಾನಿಗಳ ಪ್ರೀತಿಗೆ ಪಾತ್ರರಾದ ಪುನೀತ್‌ರಾಜ್‌ಕುಮಾರ್‌ರವರ ನೆನಪಿನಲ್ಲಿ ಪುನೀತೋತ್ಸವ ಆಚರಣೆ ಶ್ಲಾಘನೀಯ ಎಂದರು.

nudikarnataka.com

ನಟ ಪುನೀತ್ ಚಿಕ್ಕ ವಯಸ್ಸಿನಲ್ಲೇ ನಮ್ಮನ್ನು ಅಗಲಿರುವುದು ತೀವ್ರ ವಿಷಾದದ ಸಂಗತಿಯಾಗಿದ್ದು, ಭಗವಂತ ಇನ್ನಷ್ಟು ಕಾಲ ಪುನೀತ್ ನಮ್ಮೊಡನಿರಲು ಅವಕಾಶ ಕಲ್ಪಿಸಬೇಕಿತ್ತು. ಆದರೆ ಅವರನ್ನು ನಮ್ಮಿಂದ ಸೆಳೆದೊಯ್ಯಿತು ಎಂದು ವಿಷಾದಿಸಿದರು.

ಡಾ. ಕೃಷ್ಣ ಕುಟುಂಬದವರು ವೈದ್ಯಕೀಯ ಕ್ಷೇತ್ರದಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು, ಮುಂದಿನ ದಿನಗಳಲ್ಲಿ ಸಮಾಜದ ಎಲ್ಲಾ ಸ್ಥರದ ಜನರಿಗೆ ಈ ಕುಟುಂಬದ ಸೇವೆ ಲಭ್ಯವಾಗಲಿ ಎಂದು ಹಾರೈಸಿದರು.

ಜೀವಂತ ಸಾಕ್ಷಿಗಳನ್ನು ಬಿಟ್ಟು ಹೋಗಿದ್ದಾರೆ

ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳೀಗೌಡ ಮಾತನಾಡಿ, ಅಪಾರ ಜನಮನ್ನಣೆ ಗಳಿಸಿದ್ದ ಪುನೀತ್ ರಾಜ್‌ಕುಮಾರ್ ನಮ್ಮೆಲ್ಲರಿಗೂ ಆದರ್ಶರಾಗಿದ್ದಾರೆ. ವಿದ್ಯಾದಾನ, ವೃದ್ದಾಶ್ರಮ ಹಾಗೂ ಅನಾಥಾಶ್ರಮಗಳನ್ನು ತೆರೆದು ನಾಡಿಗೆ ಜೀವಂತ ಸಾಕ್ಷಿಗಳನ್ನು ಬಿಟ್ಟು ಹೋಗಿದ್ದಾರೆ. ಇಂತಹ ಸಾರ್ಥಕ ಜೀವಿಯನ್ನು ಸ್ಮರಿಸುವ ಪುನಿತೋತ್ಸವ ಅರ್ಥಪೂರ್ಣವಾಗಿದೆ ಎಂದರು.

nudikarnataka.com

ತೆಲುಗು ಸಿನಿರಂಗದಲ್ಲಿ ಪ್ರಸಿದ್ಧರಾಗಿದ್ದರು

ಎಐಸಿಸಿ ವೀಕ್ಷಕ ಕುಸುಮ್‌ಕುಮಾರ್ ಚೌಧರಿ ಮಾತನಾಡಿ, ಖ್ಯಾತ ನಟರಾದ ರಾಜ್‌ಕುಮಾರ್‌ರವರ ಚಿತ್ರಗಳನ್ನು ಬಾಲ್ಯದಿಂದಲೇ ನೋಡಿದ್ದೇನೆ. ದಿ. ಪುನೀತ್‌ರವರು ಕನ್ನಡ ಚಿತ್ರರಂಗದಂತೆ ತೆಲುಗು ಸಿನಿರಂಗದಲ್ಲಿ ಪ್ರಸಿದ್ಧ ರಾಗಿದ್ದರು ಎಂದು ಬಣ್ಣಿಸಿದರು.

ಡಾ. ಕೃಷ್ಣ ಚಾರಿಟಬಲ್ ಟ್ರಸ್ಟ್‌ ವತಿಯಿಂದ ವಿವಿಧ ಸ್ಪರ್ಧೆಗಳ ಆಯೋಜನೆ ಹಾಗೂ ಸಂಗೀತ ಸಂಜೆ ಕಾರ‌್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮಕ್ರಮದಲ್ಲಿ ನವೀನ್ ಸಜ್ಜು ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು. ಕಿರುತೆರೆ ನಟಿಯರಾದ ಹರ್ಷಿಕಾ ಪೂಣಚ್ಚ, ಮೇಘಶೆಟ್ಟಿ, ಸಂಜನಾ ಆನಂದ್, ರಂಜಿನಿ ರಾಘವನ್ ಸೇರಿದಂತೆ ಇತರೆ ಕಲಾವಿದರು ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು. ಪುನೀತೋತ್ಸವದ ಅಂಗವಾಗಿ ರಂಗೋಲಿ, ವೇಷಭೂಷಣ, ಚಿತ್ರಕಲೆ, ಸಮೂಹ ನೃತ್ಯ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಮಾಜಿ ಸಚಿವ ಎನ್. ಚಲುವರಾಯಸ್ವಾಮಿ, ತಾ.ಪಂ. ಮಾಜಿ ಅಧ್ಯಕ್ಷ ತ್ಯಾಗರಾಜು, ಡಾ. ಎಚ್.ಕೃಷ್ಣ, ಡಾ. ಪಾವನ ಕೃಷ್ಣ, ಸೋಮು, ಸೊಸೈಟಿ ಚಂದ್ರು, ಶಶಿಕುಮಾರ್ ಮತ್ತಿತರರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!