Friday, June 21, 2024

ಪ್ರಾಯೋಗಿಕ ಆವೃತ್ತಿ

ಅಂಬೇಡ್ಕರ್ ಕುರಿತು BJP- RSS ಹರಡುತ್ತಿರುವ 10 ಸುಳ್ಳುಗಳು V\s ವಾಸ್ತವ ಸತ್ಯಗಳು…

“ಒಬ್ಬ ದಲಿತ ಹುಡುಗ ಒಂದು ಕರಪತ್ರ ಕೊಟ್ಟು ಬಿಜೆಪಿಗೆ ಓಟು ಹಾಕಿ ಅಂದ. ನನಗೆ ಶಾಕ್ ಆಯಿತು. ದಲಿತ ವಿರೋಧಿ, ಮೀಸಲಾತಿ ವಿರೋಧಿ, ಸಂವಿಧಾನ ವಿರೋಧಿ, ಸಮಾನತೆಯ ವಿರೋಧಿ ಬಿಜೆಪಿಗೆ ದಲಿತರು ಮತ ಹಾಕುವುದೇ? ಅವನಿಗೆ ಉತ್ತರ ಕೊಡುವುದು ಹೇಗೆ” ಎಂದು ಗೆಳೆಯರೊಬ್ಬರು ನನಗೆ ವಾಟ್ಸಾಪ್ ಮೆಸೇಜ್ ಕಳಿಸಿದರು. ನಾನು ಸಾವಧಾನವಾಗಿ ಆ ಕರಪತ್ರ ಪೂರ್ತಿ ಓದಿದ ನಂತರ, “ಇದರಲ್ಲಿ ಬರೆದಿರುವುದು ಮುಕ್ಕಾಲು ಪಾಲು ಸುಳ್ಳಿದೆ. ಆ ಹುಡುಗನಿಗೆ ಇಷ್ಟನ್ನು ತಿಳಿಸಿ. ಆತ ಖಂಡಿತವಾಗಿಯೂ ಬಿಜೆಪಿಯವರನ್ನು ಪ್ರಶ್ನಿಸಿ, ಸುಳ್ಳು ಹೇಳುವುದು ಬಿಡಿ ಎಂದು ದಬಾಯಿಸುತ್ತೇನೆ” ಎಂದು ಈ ಕೆಳಗಿನ ವಾಸ್ತವಗಳನ್ನು ಬರೆದು ಗೆಳೆಯನಿಗೆ ಕಳಿಸಿದೆ. ಆ ಬಿಜೆಪಿ ಸುಳ್ಳಿನ ವಾಟ್ಸಾಪ್ ಸಂದೇಶ ನಿಮಗೂ ಬಂದಿದ್ದರೆ, ನೀವು ಅವರಿಗೆ ಇದನ್ನು ಕಳಿಸಬಹುದು ಮತ್ತು ಸತ್ಯ ತಿಳಿಸಬಹುದು.

ಅಂಬೇಡ್ಕರ್‌ರವರ ಪ್ರತಿಭೆ, ಬೌದ್ದಿಕ ಜ್ಞಾನವನ್ನು ತಡವಾಗಿಯಾದರೂ ಅರಿತುಕೊಂಡ ಕಾಂಗ್ರೆಸ್ ಅವರನ್ನು ಸಂವಿಧಾನ ರಚನಾ ಸಭೆಯ ಕರಡು ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿ ಈ ದೇಶಕ್ಕೆ ಬೇಕಾದ ಸಮರ್ಪಕ ಸಂವಿಧಾನವನ್ನು ಬರೆಸಿತು.

ಆಗ ಸಂವಿಧಾನದವನ್ನು ವಿರೋಧಿಸಿ ಮನುಸ್ಮೃತಿಯು ಸಂವಿಧಾನಕ್ಕಿಂತ ಹೇಗೆ ಶ್ರೇಷ್ಠ ಎಂಬ ಬಗ್ಗೆ ಸಾವರ್ಕರ್ ಮತ್ತು ಗೋಲ್ವಾಲ್ಕರ್ ಹೀಗೆ ಬರೆದಿದ್ದರು. “ಭಾರತದ ಸಂವಿಧಾನದ ಬಗ್ಗೆ ಅತ್ಯಂತ ಹೀನಾಯವಾದದ್ದು ಏನೆಂದರೆ ಅದರಲ್ಲಿ ಭಾರತೀಯವಾದದ್ದು ಏನೂ ಇಲ್ಲ. ವಾಸ್ತವವಾಗಿ ನಮ್ಮ ಮನುಸ್ಮೃತಿ ಅತ್ಯಂತ ಪ್ರಾಚೀನವಾಗಿದ್ದು ಜಗತ್ತಿನ ಜನರೆಲ್ಲಾ ಸ್ವಪ್ರೇರಿತರಾಗಿ ಅದರ ಬಗ್ಗೆ ಅಪಾರ ಆದರವನ್ನು ವ್ಯಕ್ತಪಡಿಸುತ್ತಾರೆ. ಆದರೆ ನಮ್ಮ ಸಂವಿಧಾನ ಪಂಡಿತರಿಗೆ ಅದು ಏನೂ ಅಲ್ಲ”

– Organisser, ಆರೆಸ್ಸೆಸ್ಸಿನ ಮುಖ ಪತ್ರಿಕೆ , ನವಂಬರ್ 30, 1949
ಅಂದರೆ ಅಂಬೇಡ್ಕರ್ ಬರೆದ ಸಂವಿಧಾನವನ್ನು ಆರ್‌ಎಸ್‌ಎಸ್‌ನವರೇ ಒಪ್ಪಿಕೊಳ್ಳಲೇ ಇಲ್ಲ.

ಕಾಂಗ್ರೆಸ್ ಅಂಬೇಡ್ಕರ್ ಅವರನ್ನು ಕಾನೂನು ಸಚಿವರನ್ನಾಗಿ ಮಾಡಿತು. ಹಾಗಾಗಿ ಅಂಬೇಡ್ಕರ್‌ರವರು ಕಾರ್ಮಿಕರಿಗೆ ಉಪಯೋಗವಾಗುವಂತೆ ಹತ್ತಾರು ಕಾಯ್ದೆಗಳನ್ನು ಜಾರಿಗೆ ತಂದರು.

ಆದರೆ ಹಿಂದೂ ಕೋಡ್ ಬಿಲ್ ಮಂಡಿಸಲು ಕಾಂಗ್ರೆಸ್‌ ಮತ್ತು ಜನಸಂಘದ (ಹೀಗಿನ ಬಿಜೆಪಿ) ಫ್ಯೂಡಲ್ ಸಂಸದರು ಅವಕಾಶ ನೀಡದಿದ್ದಾಗ ಅಂಬೇಡ್ಕರ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬಂದರು ಎಂಬುದು ವಾಸ್ತವ. ಅದರಲ್ಲಿ ಕಾಂಗ್ರೆಸ್‌ನಷ್ಟೆ ತಪ್ಪು ಬಿಜೆಪಿಯದು ಇದೆ.

ಹಿಂದೂ ಕೋಡ್ ಬಿಲ್ ವಿರುದ್ಧ ಪ್ರತಿಭಟಿಸಿದ ಆರ್ ಎಸ್ ಎಸ್ ಅಂಬೇಡ್ಕರ್ ಮತ್ತು ನೆಹರು ಪೋಟೋಗಳನ್ನು ಸುಟ್ಟು ಕೇಕೆ ಹಾಕಿತ್ತು…

ಅಂಬೇಡ್ಕರ್ ಅವರು ಹಿಂದೂ ಕೋಡ್ ಬಿಲ್ ಅನ್ನು ಸಂಸತ್ತಿನಲ್ಲಿ ಮಂಡಿಸಿದಾಗ ಅದನ್ನು ಖಂಡತುಂಡವಾಗಿ ವಿರೋಧಿಸಿದವರಲ್ಲಿ ಶಾಮ ಪ್ರಸಾದ ಮುಖರ್ಜಿ ಮುಖ್ಯರು. ಯಾವ ಕಾರಣಕ್ಕೂ ಸಂಪ್ರದಾಯ ಹಿಂದುಗಳ ಮೇಲೆ ಹಿಂದೂ ಕೋಡ್ ಬಿಲ್ ಅನ್ನು ಹೇರಲು ಒಪ್ಪುವುದಿಲ್ಲ ಎಂದು ಅಂಬೇಡ್ಕರ್ ಅವರನ್ನು ಮುಖರ್ಜಿ ವಿರೋಧಿಸಿದ್ದರು. ಸಂಸತ್ತಿನಲ್ಲಿ ಬಿಲ್ ಬಗ್ಗೆ 28 ಜನ ಮಾತಾಡಿದ್ದಾರೆ ಅದರಲ್ಲಿ 23 ಜನ ವಿರೋಧಿಸಿ ಭಾಷಣ ಮಾಡಿದ್ದರು. ಅದರಲ್ಲಿ ಶಾಮ ಪ್ರಸಾದ ಮುಖರ್ಜಿ ಮತ್ತು ವಲ್ಲಭಭಾಯಿ ಪಟೇಲ್ ಮುಖ್ಯರು .

ಅವರ ಭಾಷಣದ ಪೂರ್ಣ ಪಾಠ ಸಂಸತ್ತಿನ ಅಧಿಕೃತ ದಾಖಲೆಗಳ ಸಂಗ್ರಹಾಗಾರ ವಾಗಿರುವ ಈ ವಿಳಾಸದಲ್ಲಿ ಸಿಗುತ್ತದೆ :

https://eparlib.nic.in/bitstream/123456789/58670/1/Eminent_Parliamentarians_Series_Syama_Prasad_Mookerjee.pdf

ಅಂಬೇಡ್ಕರ್ ಅವರ ಮೇಲೆ ಮತ್ತು ಅಸ್ಪೃಷ್ಯರ ಮೇಲೆ ಹಣವನ್ನು ಖರ್ಚು ಮಾಡುವುದೆಂದರೆ ಹಾವಿಗೆ ಹಾಲೆರದಂತೆ. ನಾವು ಅಸ್ಪೃಷ್ಯರಿಗೆ ಯಾವುದೇ ಸಹಾಯವನ್ನು ಮಾಡದೆ ಅವರ ಕಷ್ಟಗಳನ್ನು ಅವರೇ ಅನುಭವಿಸಲು ಬಿಟ್ಟುಬಿಡಬೇಕು ಎಂದು ಬರೆದವರು ಆರ್‌ಎಸ್‌ಎಸ್‌ ನ ಮೂಂಜಿ. ಸಂದೇಹ ಬಂದರೆ (Moonje Diary, Nehru Memorial Museum and Library, ಕೀತ್  ಮೇದೋಕ್ರಾಫ್ಟ್  ಅವರ À “the Moonje–Ambedkar Pact”  ಎಂಬ ಪುಸ್ತಕ ತೆಗೆದು ಓದಿ.

ಸುಳ್ಳು 1: ಎರಡು ಬಾರಿ ಅಂಬೇಡ್ಕರ್ ಸೋಲಿಸಿದ್ದು ಕಾಂಗ್ರೆಸ್, ಬೆಂಬಲಿಸಿದ್ದು ಜನಸಂಘ

ಸುಳ್ಳನ್ನು ನೀವು ಒಂದು ವಾಕ್ಯದಲ್ಲಿ ಹೇಳಿಬಿಡಬಹುದು. ಏಕೆಂದರೆ ಅದಕ್ಕೆ ದಾಖಲೆ, ಆಧಾರ ಏನೂ ಬೇಕಿರುವುದಿಲ್ಲ. ಆದರೆ ಸತ್ಯಕ್ಕೆ ದಾಖಲೆಗಳು, ವಾಸ್ತವ ಮಾಹಿತಿಗಳು ಬೇಕು. ಹಾಗಾಗಿ ತುಸು ಉದ್ದವಿದೆ. ಆದರೆ ತಪ್ಪದೇ ಓದಿ.

1952ರ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಅಂಬೇಡ್ಕರರವರು ಬಾಂಬೆ ನಾರ್ತ್ ಸೆಂಟ್ರಲ್ ಕ್ಷೇತ್ರದಿಂದ ಸ್ವರ್ಧಿಸಿದ್ದರು. ಆಗ ಅಂಬೇಡ್ಕರ್‌ರವರ ವಿರುದ್ಧ ಕಾಂಗ್ರೆಸ್‌ನಿಂದ ಸ್ಪರ್ಧಿಸಿದವರು ನಾರಾಯಣ ಸದೊಬ ಕಾಜ್ರೋಲ್ಕರ್. ಇವರು ಈ ಹಿಂದೆ ಅಂಬೇಡ್ಕರರಿಗೆ ಸಹಾಯಕರಾಗಿ ಕಾರ್ಯ ನಿರ್ವಹಿಸಿದ್ದಾರೆಯೇ ಹೊರತು ನೆಹರುರವರಿಗೆ ಅಲ್ಲ. ಅಂದು ಅಂಬೇಡ್ಕರ್ ಜೊತೆಗೆ ಮೈತ್ರಿ ಮಾಡಿಕೊಂಡ ಏಕೈಕ ಪಕ್ಷ ಅಶೋಕ್ ಮೆಹ್ತಾರವರ ನೇತೃತ್ವದ ಸೋಷಿಯಲಿಸ್ಟ್ ಪಾರ್ಟಿ. ಇನ್ನು ಅಂಬೇಡ್ಕರ್ ವಿರುದ್ಧ ಹಿಂದೂ ಮಹಾಸಭಾ ಮತ್ತು ಕಮ್ಯುನಿಸ್ಟ್ ಪಾರ್ಟಿ ಸಹ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಹಾಗಾಗಿ ಅಂಬೇಡ್ಕರ್ ಸೋಲಿಗೆ ಕಾಂಗ್ರೆಸ್, ಹಿಂದೂ ಮಹಾ ಸಭಾ (ಹಿಂದಿನ ಬಿಜೆಪಿ) ಮತ್ತು ಕಮ್ಯೂನಿಸ್ಟ್ ಪಾರ್ಟಿಗಳು ಮೂವರು ಕಾರಣರಾಗಿದ್ದಾರೆ ಹೊರತು ಕೇವಲ ಕಾಂಗ್ರೆಸ್ ಅಲ್ಲ.

1954ರ ಭಂಡಾರ ಉಪಚುನಾವಣೆಯಲ್ಲಿ ಭಾರತೀಯ ಜನಸಂಘ ಅಂಬೇಡ್ಕರವರನ್ನು ಬೆಂಬಲಿಸಿತ್ತು ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ. ಮೊದಲು ಈ ಸುಳ್ಳನ್ನು ಪ್ರಚಾರ ಮಾಡಿದವರು ರಾಜಿವ್ ತುಲಿ ಎಂಬ RSS ಕಾರ್ಯಕರ್ತ. ಅವರು 23 ಏಪ್ರಿಲ್ 2020ರಲ್ಲಿ ದಿ ಪ್ರಿಂಟ್‌ ವೆಬ್‌ಸೈಟ್‌ನಲ್ಲಿ ಬರೆದ ಲೇಖನದಲ್ಲಿ 1954ರ ಉಪಚುನಾವಣೆಯಲ್ಲಿ ಅಂಬೇಡರ್‌ರವರ ಶೆಡ್ಯೂಲ್ ಕಾಸ್ಟ್‌ ಫೆಡರೇಷನ್ ಪಕ್ಷವು ಭಾರತೀಯ ಜನಸಂಘದೊಟ್ಟಿಗೆ ಮೈತ್ರಿ ಮಾಡಿಕೊಂಡಿತ್ತು. ಮತ್ತು ಬಂಢಾರ ಕ್ಷೇತ್ರದ ಚುನಾವಣಾ ಬೂತ್ ಒಂದರ ಎಲೆಕ್ಷನ್ ಏಜೆಂಟ್ ಆಗಿ ಅಂಬೇಡ್ಕರರು ಆರ್‌ಎಸ್‌ಎಸ್‌ನ ಕಾರ್ಯಕರ್ತ ದತ್ತೋಪಂತ ಠೇಂಗಡಿಯವರನ್ನು ನೇಮಿಸಿಕೊಂಡಿದ್ದರು ಎಂದಿದ್ದಾರೆ.

ಈ ಕುರಿತು ವೇಲಿವಾಡ ಎಂಬ ಅಂಬೇಡ್ಕರ್‌ವಾದಿ ಮಾಧ್ಯಮವೊಂದರಲ್ಲಿ ರಾಜೀವ್ ತುಲಿಯವರು ತಮ್ಮ ಲೇಖನದಲ್ಲಿ ಉಲ್ಲೇಖಿಸಿರುವ ಅಂಬೇಡ್ಕರ್ ಅನುಯಾಯಿ ಮತ್ತು ಅಂಬೇಡ್ಕರ್ ಅವರ ಶೆಡ್ಯೂಲ್ಡ್ ಕ್ಯಾಸ್ಟ್ ಫೆಡರೇಶನ್‌ನ ಕಾರ್ಯಕರ್ತ ರಾಜಭಾವು ಖೋಬ್ರಗಡೆಯವರ ಮುಮ್ಮಗ ದೀಪಾಂಕರ್ ಕಾಂಬ್ಳೆಯವರು ಫ್ಯಾಕ್ಟ್ ಚೆಕ್ ಲೇಖನ ಪ್ರಕಟಿಸಿದ್ದಾರೆ.

ಆ ಲೇಖನದಲ್ಲಿ ಅವರು, ‘ನನ್ನ ತಾಯಿಯ ಅಜ್ಜ ರಾಜಭಾವು ಖೋಬ್ರಗಡೆಯವರ ಜೀವನ ಚರಿತ್ರೆಯನ್ನು ಪ್ರೊಫೆಸರ್ ಝಂಜಲ್ ಅವರು ಬರದಿದ್ದಾರೆ. ಅದರಲ್ಲಿ ಡಾ.ಅಂಬೇಡ್ಕರ್ ಅವರು ರಾಜಾಭಾವು ಅವರನ್ನು ಭಂಡಾರ ವಲಯದ ಉಸ್ತುವಾರಿಯನ್ನಾಗಿ ಮಾಡಿದ್ದಾರೆ ಎಂದು ಪ್ರತಿಪಾದಿಸಿದ್ದಾರೆ. ಏಕೆಂದರೆ ರಾಜಾಭಾವು ಆಗ ವಿದರ್ಭ ಪ್ರದೇಶದಲ್ಲಿ ಶೆಡ್ಯೂಲ್ಡ್ ಕ್ಯಾಸ್ಟ್  ಫೆಡರೇಶನ್‌ನ ಪದಾಧಿಕಾರಿಯಾಗಿದ್ದರು’ ಎಂದು ಪ್ರತಿಪಾದಿಸಿದ್ದಾರೆ.

ಇನ್ನೂ ಬಾಂಬೆ ಮಿರರ್ ಸಹ “ಅಂಬೇಡ್ಕರ್ ರಂತಹ ಮೇಧಾವಿ ಮತ್ತು ಜನನಾಯಕ ಚುನಾವಣೆಗಳನ್ನು ಏಕೆ ಸೋಲಬೇಕಾಯ್ತು ?” ಇದು ಹೇಗೆ ಪ್ರಜಾಪ್ರಭುತ್ವ ಭಾರತದ ಸೋಲಾಗಿದೆ ಎಂದು ಅಂಬೇಡ್ಕರ್‌ರವರ ರಾಜಕೀಯ ಮತ್ತು ಚುನಾವಣಾ ಹೋರಾಟದ ಕುರಿತು ಲೇಖನ ಪ್ರಕಟಿಸಿದೆ. ಇವುಗಳಲ್ಲಿ ಎಲ್ಲಿಯೂ RSS ಆಗಲಿ, ಭಾರತೀಯ ಜನ ಸಂಘವೇ ಆಗಲಿ ಅಂಬೇಡ್ಕರ್‌ ಅವರಿಗೆ ಬೆಂಬಲ ಸೂಚಿಸಿದ ಉಲ್ಲೇಖವಿಲ್ಲ. ರಾಜೀವ್ ತುಲಿಯವರು, ಆರ್‌ಎಸ್‌ಎಸ್‌ನ ಅಗ್ರನಾಯಕರಾಗಿದ್ದ ದತ್ತೋಪಂತ್ ಥೆಂಗಾಡಿ ಅವರು ಬರೆದ “ಡಾ.ಅಂಬೇಡ್ಕರ್ ಔರ್ ಸಮಾಜಿಕ ಕ್ರಾಂತಿ ಕಿ ಯಾತ್ರಾ” ಪುಸ್ತಕದ ಆಧಾರದಲ್ಲಿ  ಮೇಲೆ ತಮ್ಮ ವಾದಗಳನ್ನು ಮಂಡಿಸಿದ್ದಾರೆ. ಆದರೆ ಈ ಬಲಪಂಥೀಯ ಏಕೈಕ ಕೃತಿಯು ಅಂಬೇಡ್ಕರರು RSS ಶಾಖೆಗೆ ಭೇಟಿ ನೀಡಿದ್ದರು, ತಮ್ಮ ಚುನಾವಣಾ ಏಜೆಂಟ್ ಆಗಿ RSSನ ಕಾರ್ಯಕರ್ತ ದತ್ತೋಪಂತ ಠೇಂಗಡಿಯವರನ್ನು ನೇಮಿಸಿದ್ದರು ಎಂದು ಆಧಾರರಹಿತವಾಗಿ ಬರೆಯಲ್ಪಟ್ಟಿದೆ ಹೊರತು ಯಾವುದೇ ಅಧಿಕೃತ  ದಾಖಲೆಗಳನ್ನು ಒಳಗೊಂಡಿಲ್ಲ.

ಅಂಬೇಡ್ಕರ್‌ರವರು ಬದುಕಿದ ಸಂದರ್ಭದಲ್ಲೇ ಅವರಿಂದ ಮಾಹಿತಿ ಪಡೆದು ಜೀವನ ಚರಿತ್ರೆ ರಚಿಸಿದ ಧನಂಜಯ್ ಕೀರ್‌ರವರ ಪುಸ್ತಕ “ಡಾ. ಬಾಬಾಸಾಹೇಬ್ ಅಂಬೇಡ್ಕರ್‌” ಪುಸ್ತಕದಲ್ಲಿ ಎಲ್ಲಿಯೂ ಇದರ ಉಲ್ಲೇಖವಿಲ್ಲ. ಇನ್ನು ಅಂಬೇಡ್ಕರ್‌ವರ ಆಪ್ತ ಸಹಾಯಕ ನಾನಕ್ ಚಂದ್ ರತ್ತು ರವರು ಬರೆದಿರುವ “Reminiscences and remembrances of Dr. B.R. Ambedkar” ಪುಸ್ತಕದಲ್ಲಿಯೂ ಸಹ ಅಂಬೇಡ್ಕರ ಚುನಾವಣಾ ಏಜೆಂಟ್ ಬಗ್ಗೆ ಉಲ್ಲೇಖವಿಲ್ಲ.

ಸುಳ್ಳು 2: ಅಂಬೇಡ್ಕರ್ RSS ಶಾಖೆಗೆ ಖುಷಿಯಿಂದ ಭೇಟಿ ನೀಡಿದ್ದರು

ಸತ್ಯ: ಅಂಬೇಡ್ಕರರ ಬಗ್ಗೆ ಇದುವರೆಗೆ ಇರುವ ಅಧಿಕೃತ ಮಾಹಿತಿ ಎಂದರೆ ಅಂಬೇಡ್ಕರರ ಪರಿನಿಬ್ಬಾಣದ ನಂತರ ಅವರ ಕುಟುಂಬ 1991 ರಲ್ಲಿ ನೀಡಿದ್ದ ಬರೆಹಗಳು ಮತ್ತು ಭಾಷಣಗಳಾಗಿವೆ ಹಾಗೂ ಅಂಬೇಡ್ಕರ್ ಅವರು ಸ್ಥಾಪಿಸಿದ ಪತ್ರಿಕೆಗಳಾಗಿವೆ. ಈಗವೆಲ್ಲವೂ ಡಾ. ಬಾಬಾಸಾಹೇಬ್  ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು ಎಂಬ ಶೀರ್ಷಿಕೆಯಲ್ಲಿ 22 ಸಂಪುಟ ಗಳಲ್ಲಿ ಲಭ್ಯವಿದೆ. ಕರ್ನಾಟಕ ಸರ್ಕಾರವೂ ಸಹ ಆ ಎಲ್ಲಾ ಸಂಪುಟಗಳನ್ನು ಕನ್ನಡೀಕರಿಸಿದೆ. ಈ 22 ಸಂಪುಟಗಳಲ್ಲಿಯೂ ಸಹ ನಮಗೆ ಅಂಬೇಡ್ಕರ್ ಅವರು ಆರ್ ಎಸ್ ಎಸ್ ಶಾಖೆಗೆ ಬೇಟಿ ನೀಡಿದ್ದರ ಬಗ್ಗೆ ಕಿಂಚಿತ್ತು ಸುಳಿವೂ ಸಹ ಸಿಗುವುದಿಲ್ಲ. ಆದರೆ ಹಿಂದೂ ಮಹಾಸಭಾ, ಆರ್ ಎಸ್ ಎಸ್, ಹಿಂದೂರಾಷ್ಟ್ರವಾದಿಗಳನ್ನು ಸರಿಯಾಗಿ ತರಾಟೆಗೆ ತೆಗೆದುಕೊಂಡಿರುವುದು ಕಂಡುಬರುತ್ತದೆ ಹಾಗಾಗಿ ಅಂಬೇಡ್ಕರ್ ಅವರು ಆರ್ ಎಸ್ ಎಸ್ ಕ್ಯಾಂಪಿಗೆ ಭೇಟಿ  ನೀಡಿದ್ದರು ಎಂಬ ವಾದವು ಯಾವುದೇ ಸಾಕ್ಷಿ ಪುರಾವೆಗಳಿಲ್ಲದ ಆರ್.ಎಸ್.ಎಸ್ ನ ಕಪೋಲಕಲ್ಪಿತ ಕಟ್ಟುಕತೆಯಾಗಿದೆ.

ಸತ್ಯಾಂಶವೇನೆಂದರೆ ಅಂಬೇಡ್ಕರ್ ಆರ್.ಎಸ್.ಎಸ್ ವಿಚಾರಕ್ಕೆ ವಿರುದ್ಧವಾಗಿದ್ದರು. ಅವರು ತಮ್ಮ Scheduled Castes Federation ಪಕ್ಷದ ಪ್ರಣಾಳಿಕೆ ಯಲ್ಲಿ ಹಿಂದೂ ಮಹಾಸಭಾ ಅಥವಾ ಆರ್ ಎಸ್ ಎಸ್ ನಂತಹ ಪ್ರತಿಗಾಮಿ ಗುಂಪುಗಳೊಂದಿಗೆ ಯಾವುದೇ ಹೊಂದಾಣಿಕೆಗಳನ್ನು ಮಾಡಿಕೊಳ್ಳುವಂತಿಲ್ಲ ಎಂದು ಸೂಚಿಸಿದ್ದರು. (ಸಂಪುಟ 17, ಪುಟ 359) ಅಲ್ಲದೇ ಆರ್ ಎಸ್ ಎಸ್ ಒಂದು ಅಪಾಯಕಾರಿ ಸಂಘಟನೆ ಎಂದಿದ್ದರು (ಇಂಗ್ಲಿಷ್ ಸಂಪುಟ 15, ಪುಟ 560).  ಇಷ್ಟು ನಿರ್ದಿಷ್ಟವಾಗಿದ್ದ ಅಂಬೇಡ್ಕರರು ಆರ್.ಎಸ್.ಎಸ್ ಶಾಖೆಗೆ ಹೋಗುವುದೆಂದರೇನು? ಅವರ ಜೊತೆ ಮೈತ್ರಿ ಮಾಡಿಕೊಳ್ಳುವುದೇ? ಸಾಧ್ಯವೇ ಇಲ್ಲ. ಇದಕ್ಕೆಲ್ಲಿಯೂ ಸಾಕ್ಷಿಗಳಿಲ್ಲ.

ಸುಳ್ಳು 3: ಸಂವಿಧಾನವನ್ನು ಅತಿ ಹೆಚ್ಚು ಬಾರಿ ತಿದ್ದುಪಡಿ ಮಾಡಿದ್ದು ಕಾಂಗ್ರೆಸ್ ಪಕ್ಷ

ದೇಶದಲ್ಲಿ ಮೀಸಲಾತಿಯನ್ನು ಜಾರಿಗೊಳಿಸಲು ಕಾಂಗ್ರೆಸ್ ಸಂವಿಧಾನ ತಿದ್ದುಪಡಿ ಮಾಡಿತು. ಏಕೆಂದರೆ ಆರ್ಟಿಕಲ್ 14 ಸಮಾನತೆಯನ್ನು ಹೇಳುತ್ತದೆ. ಹಾಗಾದಾಗ ತುಳಿತಕ್ಕೊಳಗಾದವರಿಗೆ ಮಿಸಲಾತಿ ಕೊಡಲು ಬರುವುದಿಲ್ಲ ಎಂಬುದನ್ನು ಅರಿತು ಸಂವಿಧಾನ ತಿದ್ದುಪಡಿ ಮಾಡಿ ದಲಿತರಿಗೆ ಮೀಸಲಾತಿ ಜಾರಿಗೊಳಿಸಿದ್ದು ಕಾಂಗ್ರೆಸ್. ಇದನ್ನು ಅಂಬೇಡ್ಕರ್ ಸಹ ಬೆಂಬಲಿಸಿದರು.

ಇನ್ನು ಬಡ್ತಿ ಮೀಸಲಾತಿ ನೀಡಲು, ದಲಿತರಿಗೆ ಮಾತ್ರವಲ್ಲದೇ ಹಿಂದುಳಿದ ವರ್ಗಕ್ಕೂ ಮೀಸಲಾತಿ  ನೀಡಲು ಕಾಂಗ್ರೆಸ್ ಸಂವಿಧಾನ ತಿದ್ದುಪಡಿ ಮಾಡಿದೆ. ಅಂದರೆ ಒಳ್ಳೇಯ ಉದ್ದೇಶಕ್ಕೆ ಮಾಡಿದೆ.

ಮೀಸಲಾತಿಯೆಂಬುದು ಬಡತನ ನೀರ್ಮೂಲನೆ ಕಾರ್ಯಕ್ರಮವಲ್ಲ. ಅದು ವಂಚಿತರಿಗೆ ಪ್ರಾತಿನಿಧ್ಯ ಒದಗಿಸುವ ಕ್ರಿಯೆ. ಆದರೆ ಈಗಾಗಲೇ ಅಗತ್ಯಕ್ಕಿಂತ ಹೆಚ್ಚು ಪ್ರಾತಿನಿಧ್ಯ ಪಡೆದಿರುವ ಬ್ರಾಹ್ಮಣ, ಕ್ಷತ್ರಿಯ, ಜೈನ, ಮೊದಲಿಯಾರ್ ನಂತಹ ಬಲಾಢ್ಯ ಸಮುದಾಯಗಳಿಗೆ ಬಿಜೆಪಿ ಸರ್ಕಾರ EWS ಹೆಸರಿನಲ್ಲಿ ಏಕಾಏಕಿ 10% ಮೀಸಲಾತಿ ಜಾರಿಗೊಳಿಸಿತು. ಅದಕ್ಕಾಗಿ ಸಂವಿಧಾನ ತಿದ್ದುಪಡಿ ಮಾಡಿತು. ಇದು ಮೀಸಲಾತಿಯ ಮೂಲ ಆಶಯಕ್ಕೆ ವಿರುದ್ಧವಾದುದು ಎಂಬುದನ್ನು ಮರೆಯಬಾರದು.

ಸುಳ್ಳು 4: ಇಡೀ ದೇಶದ ಮೇಲೆ ಎಮರ್ಜೆನ್ಸಿ ಹೇರಿ ಜನರ ಸಾಂವಿಧಾನಿಕ ಹಕ್ಕುಗಳನ್ನು ಕಿತ್ತುಕೊಂಡಿದ್ದು ಕಾಂಗ್ರೆಸ್  (From 25 June 1975 and ended on 21 March 1977)

ಸತ್ಯ: ಹೌದು ಕಾಂಗ್ರೆಸ್‌ನ ಇಂದಿರಾಗಾಂಧಿ 2 ವರ್ಷ ತುರ್ತು ಪರಿಸ್ಥಿತಿ ಹೇರಿ ತಪ್ಪು ಮಾಡಿತು. ಅದಕ್ಕಾಗಿ ಜನ ಅವರನ್ನು ಹೀನಾಯವಾಗಿ ಸೋಲಿಸಿದರು. 1971ರ ಚುನಾವಣೆಯಲ್ಲಿ 352 ಸೀಟು ಗೆದ್ದಿದ್ದ ಇಂದಿರಾ ಗಾಂಧಿಯವರು ತುರ್ತು ಪರಿಸ್ಥಿತಿ ಹೇರಿದ ತಪ್ಪಿಗೆ 1977ರಲ್ಲಿ ಕೇವಲ 154 ಸೀಟುಗಳಿಗೆ ಕುಸಿದರು. ಈ ತುರ್ತುಪರಿಸ್ಥಿತಿಯನ್ನು ಆರ್‌ಎಸ್‌ಎಸ್‌ ಬೆಂಬಲಿಸಿತ್ತು ಎಂಬುದನ್ನು ಮರೆಯದಿರಿ.

ಅದೇ ರೀತಿ ನರೇಂದ್ರ ಮೋದಿಯವರು ಸಹ ದೇಶದಲ್ಲಿ ಕಳೆದ 10 ವರ್ಷಗಳಿಂದ ಅಘೋಷಿತ ತುರ್ತು ಪರಿಸ್ಥಿತಿ ಹೇರಿದ್ದಾರೆ. ಐಟಿ, ಇಡಿ, ಸಿಬಿಐ ನಂತ ಸ್ವಾಯುತ್ತ ಸಂಸ್ಥೆಗಳನ್ನು ತಮ್ಮ ಕೈಗೊಂಬೆ ಮಾಡಿಕೊಂಡು ತಮ್ಮನ್ನು ವಿರೋಧಿಸುವವರನ್ನು ಜೈಲಿಗೆ ಹಾಕುತ್ತಿದ್ದಾರೆ. ಅಸಾಂವಿಧಾನಿಕ ಎಲೆಕ್ಟೋರಲ್ ಬಾಂಡ್ ಮೂಲಕ 12,000 ಕೋಟಿ ರೂ ಲೂಟಿ ಹೊಡೆದಿದ್ದಾರೆ. ಪತ್ರಕರ್ತರು, ವಿಪಕ್ಷ ನಾಯಕರು ಜೈಲಿನಲ್ಲಿದ್ದಾರೆ. ಹಾಗಾಗಿ ಜನ ಈ ಆಘೋಷಿತ ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಡಿ ಈ ಸಲ ಮೋದಿಯವನ್ನು ಸೋಲಿಸುತ್ತಾರೆ ನೋಡಿ.

ಸುಳ್ಳು 5: ಪಾಕಿಸ್ತಾನದ ಹಿಂದೂಗಳು ಭಾರತಕ್ಕೆ ಬರಬೇಕು, ಇಲ್ಲಿನ ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಬೇಕು
ಸತ್ಯ:  ಸ್ವತಃ ಬಾಬಾಸಾಹೇಬ್ ಅಂಬೇಡ್ಕರ್ ಅವರೇ ಭಾರತದ ವಿಭಜನೆ ಅಥವಾ ಪಾಕಿಸ್ತಾನ ಕೃತಿಯಲ್ಲಿ ಪಾಕಿಸ್ತಾನವಾದರೆ ಜನತೆಯ ವರ್ಗಾವಣೆ ಹೇಗಿರಬೇಕೆಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜನತೆಯ ವರ್ಗಾವಣೆ ಕಡ್ಡಾಯವಾಗಿರಬೇಕೆ ಅಥವಾ ಇಚ್ಛಾಪೂರ್ವಕವಾಗಿರಬೇಕೆ?

ಈ ಪ್ರಶ್ನೆಗೆ ಸಂಬಂಧಿಸಿದಂತೆ ಎರಡೂ ಸಾಧ್ಯ: ಎರಡೂ ಅನುಷ್ಠಾನಗೊಂಡ ದೃಷ್ಟಾಂತಗಳಿಗೆ ಗ್ರೀಸ್ ಮತ್ತು ಬಲ್ಗೇರಿಯಾ ದೇಶಗಳ ಮಧ್ಯೆ ಜನತೆಯ ವರ್ಗಾವಣೆ ಸ್ವಪ್ರೇರಣೆಯ ಆಧಾರದ ಮೇಲೆ ನಡೆಯಿತು. ಗ್ರೀಸ್ ಮತ್ತು ಟರ್ಕಿಗಳ ನಡುವೆ ಕಡ್ಡಾಯದ ಆಧಾರದ ಮೇಲೆ ನಡೆಯಿತು. ಕಡ್ಡಾಯ ವರ್ಗಾವಣೆ ಮೇಲುನೋಟಕ್ಕೆ ತಪ್ಪು ಎಂದು ಯಾರಿಗಾದರೂ ಅನ್ನಿಸುತ್ತದೆ. ಒಬ್ಬನಿಗೆ ಇಷ್ಟವಿಲ್ಲದಿದ್ದಾಗ ಅವನ ಅನುವಂಶೀಯ ನೆಲೆಯನ್ನು ಬದಲಾಯಿಸು ಎಂದು ಬಲಾತ್ಕರಿಸುವುದು ಸರಿಯಾದದ್ದಲ್ಲ. ಅಲ್ಲಿನ ಅವನ ವಾಸದ ಮುಂದುವರಿಕೆಯಿಂದಾಗಿ ದೇಶದ ಶಾಂತಿಸುಸ್ಥಿತಿಗಳ ವಿಪತ್ತಿಗೊಳಗಾಗುವ ಸಂಭವ ಇದ್ದ ಹೊರತು ಅಥವಾ ಅವನ ಹಿತದ ದೃಷ್ಟಿಯಿಂದಲೇ ವರ್ಗಾವಣೆ ಅಗತ್ಯ ಎನ್ನಿಸಿದ ಹೊರತು, ವರ್ಗಾವಣೆ ಮಾಡುವವರು ಅದನ್ನು ಅಡಚಣೆ ಮತ್ತು ನಷ್ಟಗಳು ಉಂಟಾಗದ ಹಾಗೆ ಮಾಡಬೇಕಾಗಿದೆ. ಆದ್ದರಿಂದ ವರ್ಗಾವಣೆಯನ್ನು ಬಲಾತ್ಕರಿಸಬಾರದು ಎಂಬುದು ನನ್ನ ಅಭಿಪ್ರಾಯ. ವರ್ಗಾವಣೆಗೆ ಇಚ್ಛೆ ವ್ಯಕ್ತಪಡಿಸಿದವರಿಗೂ ಅದು ಮುಕ್ತವಾಗಿರಬೇಕು.

ಮಾಹಿತಿ ಮೂಲ: ಡಾ.ಬಾಬಾಸಾಹೇಬ್ ಅಂಬೇಡ್ಕರ್ ಸಮಗ್ರ ಬರೆಹಗಳು ಮತ್ತು‌ ಭಾಷಣಗಳು.‌ಸಂಪುಟ-6. ಪುಟ ಸಂಖ್ಯೆ: 748

ಸುಳ್ಳು 6: ಸಂವಿಧಾನ ಪುಸ್ತಕದಲ್ಲಿ ಭಗವಾನ್ ಶ್ರೀ ರಾಮನ ಚಿತ್ರವನ್ನು ಬರೆಸಿದ್ದು ಡಾ. ಅಂಬೇಡ್ಕರ್.  (ಪಾರ್ಟ್ 3, ಮೂಲಭೂತ ಹಕ್ಕುಗಳ ವಿಭಾಗ)

ಸತ್ಯ: ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಸಂವಿಧಾನದ ಎರಡು ಪ್ರತಿಗಳು ಕೈಬರಹ ಮತ್ತು ವರ್ಣಚಿತ್ರಗಳನ್ನು ಹೊಂದಿವೆ. ಸಂವಿಧಾನವನ್ನು ಕ್ಯಾಲಿಗ್ರಾಫರ್ ಪ್ರೇಮ್ ಬಿಹಾರಿ ನಾರೈನ್ ರೈಜಾದಾ ಕೈಬರಹದಲ್ಲಿ ಬರೆದಿದ್ದರೆ, ವರ್ಣಚಿತ್ರಗಳನ್ನು ಕಲಾವಿದ ಮತ್ತು ಶಿಕ್ಷಕ ನಂದಲಾಲ್ ಬೋಸ್ ಮತ್ತು ಅವರ ತಂಡವು ಬಿಡಿಸಿದೆ. ಈ ವರ್ಣಚಿತ್ರಗಳ ನಿರೂಪಣೆಯು ಸಿಂಧೂ ಕಣಿವೆ ನಾಗರಿಕತೆಯಿಂದ ಸ್ವಾತಂತ್ರ್ಯ ಹೋರಾಟದವರೆಗೆ ಭಾರತೀಯ ಇತಿಹಾಸದ ವಿವಿಧ ಕಾಲಘಟ್ಟಗಳನ್ನು ಪ್ರತಿನಿಧಿಸುತ್ತದೆ. ರಾಮ-ಸೀತೆ ಜೊತೆಗೆ ಟಿಪ್ಪು ಸುಲ್ತಾನ್, ಅಕ್ಬರ್ ವರ್ಣ ಚಿತ್ರಗಳು ಸಹ ಸಂವಿಧಾನದಲ್ಲಿವೆ. ಇವುಗಳನ್ನು ಅಂಬೇಡ್ಕರ್ ಬರೆಸಿದ್ದಲ್ಲ.

ಸುಳ್ಳು 7: ಆರ್ಟಿಕಲ್ 370 ಬಾಬಾ ಸಾಹೇಬರ ಇಚ್ಚೆಗೆ ವಿರುದ್ದವಾಗಿತ್ತು.

ಸತ್ಯ: ಆರ್ಟಿಕಲ್ 370 ಸೇರಿಸುವ ಒಪ್ಪಿತ ಕರಡನ್ನು ಶ್ರಿ. ಗೋಪಾಲ್‌ಸ್ವಾಮಿ ಅಯ್ಯಂಗಾರ್ ಅವರು 1949ರ ಅಕ್ಟೋಬರ್ 17ರಂದು ಸಂವಿಧಾನ ರಚನಾ ಸಭೆಯಲ್ಲಿ ಮಂಡಿಸಿದರು. ಅಂಬೇಡ್ಕರ್ ಅವರು ಆ ಕರಡಿನ ಬಗ್ಗೆ ಯಾವುದೇ ಆಕ್ಷೇಪಣೆಯನ್ನು ಮಾಡಲಿಲ್ಲ. ಅಷ್ಟು ಮಾತ್ರವಲ್ಲ ಅಂದು  ಸಭೆಯಲ್ಲಿದ್ದ ಶ್ಯಾಂ ಪ್ರಸಾದ್ ಮುಖರ್ಜಿಯ, ವಲ್ಲಭಬಾಯಿ ಪಟೇಲರಾದಿಯಾಗಿ  ಯಾರೂ ಅರ್ಧ ಸಾಲಿನ ತಿದ್ದುಪಡಿಯನ್ನೂ ಹೇಳಲಿಲ್ಲ. ಅಂದು ಭಾರತದ ಸಂವಿಧಾನದ ಪೀಠಿಕೆಯ ಬಗ್ಗೆ ಚರ್ಚೆ ಮಾಡಬೇಕಿದ್ದರಿಂದ ಈ ಆರ್ಟಿಕಲ್  ಸೇರ್ಪಡೆಯ ಮಾಡಲು ನಮ್ಮ ಸಂವಿಧಾನ ಸಭೆಯು ತೆಗೆದುಕೊಂಡ ಸಮಯ ಅರ್ಧ ದಿನಕ್ಕಿಂತಲೂ ಕಡಿಮೆ!

(ಇವೆಲ್ಲವೂ ಸಂವಿಧಾನ ಸಭೆಯ ನಡಾವಳಿಯಲ್ಲಿ ದಾಖಲುಗೊಂಡಿದ್ದು  ಆಸಕ್ತರು ಈ ವೆಬ್ ವಿಳಾಸದಲ್ಲಿ ಇದನ್ನು ಪರಿಶೀಲಿಸಬಹುದು:http://164.100.47.194/loksabha/writereaddata/cadebatefiles/C17101949.html)

ಸುಳ್ಳು 8: ಕಾಂಗ್ರೆಸ್‌ನ ಹರ್ಷತ್ ಮೊಹಾನಿಯವರು ಸಂವಿಧಾನವನ್ನು ಟೀಕಿಸಿದ್ದರು

ಸತ್ಯ: ಹರ್ಷತ್ ಮೊಹಾನಿಯವರು ಕಮ್ಯನಿಷ್ಟ್ ಪಕ್ಷದವರು. ಅವರು ಸಂವಿಧಾನವನ್ನು ಟೀಕಿಸಿಲ್ಲ. ಬದಲಿಗೆ ಆರ್‌ಎಸ್‌ಎಸ್‌ನ ಗೋಳ್ವಾಲ್ಕರ್ ಮತ್ತು ಸಾವರ್ಕರ್ ಸಂವಿಧಾನ ವಿರೋಧಿಸಿದ್ದರು.

ಸುಳ್ಳು 9: ನೀವು ರಚಿಸಿದ ಸಂವಿಧಾನವನ್ನು ಬಳಸಿಕೊಂಡೇ ನಿಮ್ಮನ್ನು ಜೈಲಿಗೆ ಕಳಿಸುತ್ತೇವೆ ಎಂದಿದ್ದು ಕಾಂಗ್ರೆಸ್. (ಮಹಾವೀರ್ ತ್ಯಾಗಿ)

ಸತ್ಯ: ವಿಚಾರಣೆಯಿಲ್ಲದೆ ಬಂಧಿಸುವ ಕಾನೂನಿನ ವಿರುದ್ಧ ಮಹಾವೀರ್ ತ್ಯಾಗಿ ಸಂವಿಧಾನ ರಚನಾ ಸಭೆಯಲ್ಲಿ ಮಾತನಾಡಿದ್ದಾರೆ ಹೊರತು ಅಂಬೇಡ್ಕರ್ ರನ್ನು ಜೈಲಿಗೆ ಹಾಕುತ್ತೇವೆ ಎಂದು  ಹೇಳಿಲ್ಲ.

ಸುಳ್ಳು 10: ಸಿಎಎ ಅಂಬೇಡ್ಕರ್‌ರವರ ಆಶಯವಾಗಿತ್ತು

ಸುಳ್ಳು: ಅಂಬೇಡ್ಕರ್ ಸಮಾನತಾವಾದಿಗಳಾಗಿದ್ದರು. ಅವರು ತಾರತಮ್ಯವನ್ನು ಒಪ್ಪುತ್ತಿರಲಿಲ್ಲ. ಆದರೆ ಸಿಎಎ ಮುಸ್ಲಿಂಮೇತರರಿಗೆ ಮಾತ್ರ ಪೌರತ್ವ ನೀಡುವ ಮೂಲಕ ತಾರತಮ್ಯ ಎಸಗುತ್ತಿದೆ. ಹಾಗಾಗಿ ಸಿಎಎ ಅಂಬೇಡ್ಕರ್‌ರವರ ಕನಸಲ್ಲ.

ಬಿಜೆಪಿ ಪ್ರತಿಪಾದಿಸುವ  ಹಿಂದುತ್ವಕ್ಕೆ ವಿರುದ್ಧವಿದ್ದರು ಡಾ.ಅಂಬೇಡ್ಕರ್. ಹಿಂದೂವಾಗಿ ಹುಟ್ಟಿದ್ದೇನೆ, ಹಿಂದೂವಾಗಿ ಸಾಯಲಾರೆ ಎಂದು 1956ರಲ್ಲಿ ಅಂಬೇಡ್ಕರ್ ಬೌದ್ಧ ಧರ್ಮಕ್ಕೆ ಮತಾಂತರವಾದರು. ಆದರೆ ಬಿಜೆಪಿ ಮತಾಂತರ ನಿಷೇಧ ಕಾಯ್ದೆ ತಂದು ದಲಿತರು ಅಸ್ಪೃಶ್ಯರಾಗಿಯೇ ಉಳಿಯಬೇಕೆಂದು ಬಯಸುತ್ತಿದೆ.

ಮತ್ತಷ್ಟು ಮಾಹಿತಿಗಳು

ಕಾಂಗ್ರೆಸ್ ಪಕ್ಷ ಮೀಸಲಾತಿ ಜಾರಿಗೊಳಿಸಿದೆ. ಬಿಜೆಪಿ ಮೀಸಲಾತಿ ಕಿತ್ತು ಹಾಕಲು ಯತ್ನಿಸುತ್ತಿದೆ.

ಹಿಂದುಳಿದವರಿಗೆ ಮೀಸಲಾತಿ ನೀಡುವ ಮಂಡಲ್ ವರದಿಗೆ ವಿರೋಧಿಸಿ ಬೃಹತ್ ಪ್ರತಿಭಟನೆ ನಡೆಸಿದ್ದು ಬಿಜೆಪಿ

ಸಂವಿಧಾನದ ಜಾಗದಲ್ಲಿ ಮನುಸ್ಮೃತಿಯನ್ನು ಹೇರಲು ಬಿಜೆಪಿ ಬಯಸುತ್ತಿದೆ.

ಒಳಮೀಸಲಾತಿ ಜಾರಿಗೆ ಬಿಜೆಪಿ ಅಡ್ಡಗಾಲಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಪತ್ರ ಬರೆದರೂ ಮೋದಿ ಉತ್ತರಿಸಿಲ್ಲ.

ದಲಿತರ ಮೇಲೆ ಹೆಚ್ಚು ದೌರ್ಜನ್ಯ ನಡೆಸಿದ್ದು ಇದೇ ಮನುವಾದಿಗಳಾಗಿದ್ದಾರೆ.

ಆರ್‌ಎಸ್‌ಎಸ್‌ ಕಚೇರಿಗೆ ದಲಿತ ಎನ್ನುವ ಕಾರಣಕ್ಕೆ ಸೇರಿಸಿಕೊಳ್ಳಲಿಲ್ಲ ಎಂದು ಮಾಜಿ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಆರೋಪಿಸಿದ್ದಾರೆ.

ಸಂವಿಧಾನ ಬದಲಿಸುತ್ತೇವೆ ಎಂದು ಅನಂತ್ ಕುಮಾರ್ ಹೆಗಡೆ, ಯತ್ನಾಳ್ ಸೇರಿದಂತೆ ಹತ್ತಾರು ಬಿಜೆಪಿ ನಾಯಕರು ಹೇಳಿಕೆ ನೀಡಿದ್ದಾರೆ.

ಅಂಬೇಡ್ಕರ್ ಬರೆಹ‌ ಮತ್ತು ಭಾಷಣಗಳನ್ನು ಪ್ರಕಟಿಸಿದ್ದು ಕಾಂಗ್ರೆಸ್

ಸಮಾಜ ಕಲ್ಯಾಣ ಇಲಾಖೆ ಸ್ಥಾಪಿಸಿದ್ದು ಕಾಂಗ್ರೆಸ್

SCSP/TSP ಆರಂಭಿಸಿದ್ದು ಕಾಂಗ್ರೆಸ್

ದಲಿತ ಗುತ್ತಿಗೆದಾರರಿಗೆ ಮೀಸಲಾತಿ ಕೊಟ್ಟಿದ್ದು ಕಾಂಗ್ರೆಸ್

ಇನ್ನೂ ನೂರಾರಿವೆ.. ಸದ್ಯಕ್ಕೆ ಇಷ್ಟು ಸಾಕು.. ಸುಳ್ಳು ಬೇಗ ಹರಡಬಹುದು. ಆದರೆ ಅದಕ್ಕೆ ಆಯಸ್ಸು ಕಡಿಮೆ. ಸತ್ಯ ಅಮರವಾದುದ್ದು ಮತ್ತು ನಿರಂತರವಾದುದ್ದು. ಈ ಸತ್ಯವನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ

ಧನ್ಯವಾದಗಳು…

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!