Thursday, September 19, 2024

ಪ್ರಾಯೋಗಿಕ ಆವೃತ್ತಿ

”ಪುಷ್ಪ” ಚಿತ್ರದ ನಿರ್ಮಾಪಕರ ಮನೆ ಮೇಲೆ ಐಟಿ ದಾಳಿ

ತೆಲುಗಿನ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್‌ ಮುಖ್ಯಸ್ಥರ ಮನೆ ಮತ್ತು ಕಚೇರಿಗಳ ಮೇಲೆ ಐಟಿ (ಆದಾಯ ತೆರಿಗೆ ಇಲಾಖೆ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಸಂಸ್ಥೆ ಚಿತ್ರ ನಿರ್ಮಾಣಕ್ಕೆ ಹೂಡಿಕೆ ಮಾಡುತ್ತಿರುವ ಬಹುಕೋಟಿ ಬಂಡವಾಳ ವಿದೇಶದಿಂದ ಹರಿದು ಬರುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.  

ವರ್ಷಕ್ಕೆ ಸಾವಿರ ಕೋಟಿ ರೂ.ಗಳಿಗೂ ಅಧಿಕ ವಹಿವಾಟು ನಡೆಸುತ್ತಿರುವ ಈ ಸಂಸ್ಥೆ ಜಿಎಸ್‌ಟಿ ಪಾವತಿಸುವಲ್ಲಿ ವಂಚನೆ ಎಸಗಿದೆ ಎಂದು ವರದಿಯಾಗಿದೆ. ಸಂಸ್ಥೆಗೆ ವಿದೇಶದಿಂದಲೂ ಭಾರೀ ಮೊತ್ತದ ಹಣ ಹೂಡಿಕೆ ಆಗುತ್ತಿದೆ ಎಂಬ ಮಾಹಿತಿ ಆಧರಿಸಿ ಐಟಿ ಅಧಿಕಾರಿಗಳು ಸೋಮವಾರ ಮೈತ್ರಿ ಮೂವಿ ಮೇಕರ್ಸ್‌ ಮುಖ್ಯಸ್ಥರಾದ ನವೀನ್‌ ಯೆರ್ನೆನಿ, ವೈ ರವಿ ಶಂಕರ್‌ ಮತ್ತು ಮೋಹನ್‌ ಚೆರುಕುರಿ ಅವರ ನಿವಾಸ, ಹೈದರಾಬಾದ್‌, ಬೆಂಗಳೂರು ಸೇರಿ 15 ಕಡೆಗಳಲ್ಲಿನ ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಮಂಗಳವಾರ ಕೂಡ ಪರಿಶೀಲನೆ ಮುಂದುವರೆದಿದೆ.

 

ಕಳೆದ ವರ್ಷ ಅಲ್ಲು ಅರ್ಜುನ್‌ ಮುಖ್ಯಭೂಮಿಕೆಯಲ್ಲಿ ತೆರೆಕಂಡಿದ್ದ ಪುಷ್ಪ ಸಿನಿಮಾ ಭರ್ಜರಿ ಯಶಸ್ಸು ಗಳಿಸಿತ್ತು. ಪುಷ್ಪ ಚಿತ್ರವನ್ನು ಇದೇ ಮೈತ್ರಿ ಮೂವಿ ಮೇಕರ್ಸ್‌ ಸಂಸ್ಥೆ ನಿರ್ಮಿಸಿತ್ತು. ಅಂದಾಜು 150 ಕೋಟಿ ರೂಪಾಯಿ ಬಂಡವಾಳದಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲಿ 370 ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ಕಲೆ ಹಾಕಿತ್ತು. ಇದಾದ ಬೆನ್ನಲ್ಲೇ ಪುಷ್ಪ-2 ಸಿನಿಮಾ ಮಾಡುವುದಾಗಿ ಸಂಸ್ಥೆ ಘೋಷಣೆ ಮಾಡಿತ್ತು.

ರಂಗಸ್ಥಳಂ, ಜನತಾ ಗ್ಯಾರೇಜ್‌, ಶ್ರೀಮಂತುಡು, ಉಪ್ಪೇನ, ಪುಷ್ಪ ಸೇರಿದಂತೆ ಹಲವು ಯಶಸ್ವಿ ಚಿತ್ರಗಳನ್ನು ನಿರ್ಮಿಸಿರುವ ಮೈತ್ರಿ ಮೂವಿ ಮೇಕರ್ಸ್‌, ಸದ್ಯ ಪುಷ್ಪ-2, ನಂದಮುರಿ ಬಾಲಕೃಷ್ಣ ನಟನೆಯ ವೀರ ಸಿಂಹ ರೆಡ್ಡಿ, ವಾಲ್ಟರ್‌ ವೀರಯ್ಯ, ವಿಜಯ್‌ ದೇವರಕೊಂಡ ನಟನೆಯ ಖುಷಿ, ಪವನ್‌ ಕಲ್ಯಾಣ್‌ ನಟನೆಯ ಉಸ್ತಾದ್‌ ಭಗತ್‌ ಸಿಂಗ್‌, ಜೂನಿಯರ್‌ ಎನ್‌ಟಿಆರ್‌ ನಟನೆಯ 31ನೇ ಸಿನಿಮಾ ಮತ್ತು ಇತ್ತೀಚೆಗೆ ಘೋಷಣೆಯಾಗಿರುವ ರಾಮ್‌ ಚರಣ್‌ ಅವರ 16ನೇ ಸಿನಿಮಾ ಈ ಎಲ್ಲದಕ್ಕೂ ಮೈತ್ರಿ ಮೂವಿ ಮೇಕರ್ಸ್‌ ಬಂಡವಾಳ ಹೂಡಿದೆ.

ಈ ಎಲ್ಲ ಚಿತ್ರಗಳ ಮೇಲಿನ ಒಟ್ಟಾರೆ ಹೂಡಿಕೆಯನ್ನು 700 ಕೋಟಿ ರೂಪಾಯಿಗೂ ಅಧಿಕ ಎಂದು ಅಂದಾಜಿಸಲಾಗಿದೆ. ಈ ಐಟಿ ದಾಳಿಯಿಂದಾಗಿ ಸದ್ಯ ಚಾಲ್ತಿಯಲ್ಲಿರುವ ಸಿನಿಮಾಗಳ ಚಿತ್ರೀಕರಣದ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗುತ್ತಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!