Thursday, September 19, 2024

ಪ್ರಾಯೋಗಿಕ ಆವೃತ್ತಿ

ಕಾವೇರಿ ಬಗ್ಗೆ ಧ್ವನಿಯೆತ್ತದ ಜನಪ್ರತಿನಿಧಿಗಳಿಗೆ ಘೇರಾವ್ ಹಾಕಿ: ಡಾ.ಚನ್ನಬಸವಾನಂದಸ್ವಾಮೀಜಿ

ನಮ್ಮ ನಾಡಿನ ನೀರನ್ನು ತಮಿಳುನಾಡಿಗೆ ಹರಿಸಿ ನ್ಯಾಯ ಪಂಚಾಯಿತಿ, ಪ್ರಾಧಿಕಾರ, ನ್ಯಾಯಾಲಯ, ತೀರ್ಪು ಎಂಬ ಅವೈಜ್ಞಾನಿಕ ಪದ್ಧತಿಯಿಂದ ರೈತರ ಬದುಕು ನಾಶವಾಗುತ್ತಿದ್ದರೂ ಕಣ್ಣುಮುಚ್ಚಿ ಕುಳಿತಿರುವ ರಾಜ್ಯದ ಎಲ್ಲಾ ಸಂಸದರ ಮನೆಮುಂದೆ ಸಾರ್ವಜನಿಕರು ಧರಣಿ ಮಾಡಬೇಕು ಬೇಜವಾಬ್ದಾರಿ ಜನಪ್ರತಿನಿಧಿಗಳಿಗೆ ಘೇರಾವ್ ಹಾಕಬೇಕೆಂದು ಕೂಡಲಸಂಗಮದ ಡಾ.ಚನ್ನಬಸವಾನಂದಸ್ವಾಮೀಜಿ ಹೇಳಿದರು.

ಮಂಡ್ಯ ಜಿಲ್ಲಾ ರೈತಹಿತರಕ್ಷಣಾ ಸಮಿತಿ ಕಾವೇರಿ ಉಳಿವಿಗಾಗಿ ನಗರದ ಸರ್‌ಎಂವಿ ಪ್ರತಿಮೆ ಬಳಿ ನಡೆಸುತ್ತಿರುವ ಸುದೀರ್ಘ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ ಜಿಲ್ಲೆಯ ವಿವಿಧ ಲಿಂಗಾಯತ ಸಮುದಾಯದ ಒಕ್ಕೂಟಗಳ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಎದುರಾಗಿರುವ ಸಂಕಷ್ಟದ ಸಮಯದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೌನ ಮುರಿಯಬೇಕು ಎಂದು ಆಗ್ರಹಿಸಿದ ಸ್ವಾಮೀಜಿ ದೇಶ ಹೊತ್ತಿ ಉರಿದರೂ ಮೌನ ಮುರಿಯದ ಪ್ರಧಾನಿ ಅನ್ನದಾತರ ಸಂಕಷ್ಟಕ್ಕೆ ಪರಿಹಾರ ರೂಪಿಸಲು ಮೌನ ಮುರಿದು ಮಧ್ಯಸ್ಥಿಕೆ ವಹಿಸಬೇಕೆಂದು ಒತ್ತಾಯಿಸಿದರು.

ಕಾವೇರಿ ನದಿ ನೀರು ವಿಚಾರದಲ್ಲಿ ನಿರ್ಲಕ್ಷ್ಯ ಮಾಡಿರುವ ಬಿಜೆಪಿ 26 ಸಂಸದರಿಗೆ ಕಾವೇರಿ ಹೋರಾಟಗಾರರು ಘೇರಾವ್ ಮಾಡಬೇಕು, ಕರ್ನಾಟಕ ರಾಜ್ಯಕ್ಕೆ ಮತ್ತು ರೈತರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಪ್ರಶ್ನೆ ಮಾಡದಿರುವುದು ಸರಿಯಲ್ಲ, ಕೇಂದ್ರ ಸರ್ಕಾರ ಮತ್ತು ಪ್ರಧಾನಮಂತ್ರಿ ಮೇಲೆ ಒತ್ತಡ ಹಾಕಬೇಕು, ಸಂಕಷ್ಟದ ಸಮಯದಲ್ಲಿ ಪರಿಹಾರ ಸೂತ್ರಕ್ಕೆ ಒತ್ತಡ ಹಾಕಬೇಕು, ಇದೇ ರೀತಿ ಬೇಜವಾಬ್ದಾರಿತನ ತೋರಿದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕನ್ನಡಿಗರು ತಕ್ಕ ಶಾಸ್ತ್ರಿ ಮಾಡಲಿದ್ದಾರೆ ಎಂದು ಎಚ್ಚರಿಸಿದರು.

ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ಕಾವೇರಿ ನೀರು ಪ್ರಾಧಿಕಾರ, ಸುಪ್ರೀಂಕೋರ್ಟ್ ಎಲ್ಲವೂ ಸಹ ತಮಿಳುನಾಡಿನ ಪರ ನಿಂತಿರುತ್ತದೆ ಆದ್ದರಿಂದ ನಾಡಿನ ರೈತರಿಗೆ ಜನತೆಗೆ ಅನ್ಯಾಯ ಆಗಬಾರದು ಎಂಬ ಉದ್ದೇಶದಿಂದ ಪ್ರತಿಭಟನೆ ಹೋರಾಟಗಳು ಅನಿವಾರ್ಯವಾಗಿವೆ. ಕೂಡಲೇ ಕೇಂದ್ರ ಮತ್ತು ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ತಮಿಳುನಾಡಿಗೆ ನಮ್ಮಲ್ಲಿ ಸಾಕಷ್ಟು ನೀರು ಶೇಖರಣೆ ಇಲ್ಲದೆ ಇರುವಾಗ ನೀರನ್ನು ಹರಿಸುವ ವಿಚಾರವನ್ನು ಸಂಪೂರ್ಣ ಕೈ ಬಿಡಬೇಕೆಂದು ಈ ಮೂಲಕ ಸರ್ಕಾರಕ್ಕೆ ನಮ್ಮ ಆಗ್ರಹವಾಗಿರುತ್ತದೆ ಎಂದು ಮುಖಂಡರು ಬೆಂಬಲಪತ್ರ ನೀಡಿದಿದರು.

ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಮಂಡಿಬೆಟ್ಟಳ್ಳಿ ಮಂಜುನಾಥ್, ಕಾರ್ಯಾಧ್ಯಕ್ಷ ಎಂ.ಶಿವಕುಮಾರ್, ಯುವಮುಖಂಡ ಜೀವನ್, ಆನವಾಳು ವಿಶ್ವನಾಥ್, ನಾಗರಾಜ್, ಸಾಹಿತಿ ದ್ಯಾವಪ್ಪ, ಸಿ.ಮಹೇಶ್ ಸೇರಿದಂತೆ ಜಿಲ್ಲೆಯ ವಿವಿಧ ತಾಲ್ಲೂಕುಗಳ ಮುಖಂಡರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!