ಹಾಲು ಉತ್ಪಾದಕರು ಗುಣಮಟ್ಟದ ಹಾಲನ್ನು ಪೂರೈಸಬೇಕೆಂದು ಸಲಹೆ ನೀಡಿದ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಡಾಲು ರವಿ ಅವರು, ಉತ್ತಮ ಹಾಲಿನಿಂದ ಆದಾಯ ಹೆಚ್ಚುವುದರ ಜೊತೆಗೆ ಸಂಘಕ್ಕೂ ಒಳ್ಳೆಯ ಹೆಸರು ಬರುತ್ತದೆ ಎಂದರು.
ಕೆ.ಆರ್.ಪೇಟೆ ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಸಾಸಲು ಮಾದಾಪುರ, ಕಸಬಾ ಹೋಬಳಿಯ ಉಚನಹಳ್ಳಿ, ಶೀಳನೆರೆ ಹೋಬಳಿಯ ಹಾದನೂರು,ಅಂಚೆಮುದ್ದನಹಳ್ಳಿ,ಪಿ ಬಿ ಮಂಚನಹಳ್ಳಿ, ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ ಅತಿ ಹೆಚ್ಚು ರೈತರು ಹೈನುಗಾರಿಕೆಯಲ್ಲಿ ತೊಡಗಿಕೊಂಡಿರುವುದರಿಂದ ನಮ್ಮ ತಾಲೂಕು ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿ ಇದೆ ಎಂದರು.
ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಎಚ್.ಟಿ.ಮಂಜು ಮಾತನಾಡಿ, ತಾಲ್ಲೂಕಿನಲ್ಲಿ ಸುಮಾರು 40ಕ್ಕೂ ಹೆಚ್ಚು ಹಾಲು ಶೀತಲೀಕರಣ ಘಟಕವನ್ನು ಉದ್ಘಾಟಿಸಿದ್ದೇವೆ, ಇದರ ಉದ್ದೇಶವೇನೆಂದರೆ ಹಾಲಿನಲ್ಲಿ ಇರುವಂತಹ ಪೌಷ್ಟಿಕಾಂಶ ನಷ್ಟವಾದಂತೆ ತಡೆಯುವುದಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾರ್ಗ ವಿಸ್ತರಣಾಧಿಕಾರಿಗಳಾದ ನಾಗಪ್ಪ ಅಲಿಬದಿ, ಗುರುರಾಜ್ ಸುರುಗ್ಗಿಹಳ್ಳಿ, ಶಿವಶಂಕರ್, ಸಾಸಲು ಅಧ್ಯಕ್ಷ ಎಸ್.ಡಿ.ರಮೇಶ್, ಉಪಾಧ್ಯಕ್ಷ ಈರಪ್ಪ, ಸದಸ್ಯರಾದ ಭೋಜಪ್ಪ, ಮಲ್ಲಿಕಾರ್ಜುನ, ಲಿಂಗಪ್ಪ, ಉಮೇಶ್, ಮಾದಪ್ಪ, ರಾಜೇಂದ್ರ, ಮಾಹೇದೇವಮ್ಮ, ಸುಗುಣ ಮತ್ತಿತರರು ಭಾಗವಹಿಸಿದ್ದರು.




