ಕರ್ನಾಟಕದಲ್ಲಿ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ತಹಶೀಲ್ದಾರ್ ಗಳಿಗೆ ಕರ್ನಾಟಕ ಭೂ ಕಂದಾಯ ಕಾಯ್ದೆ ಮತ್ತು ಇತರ ಕೆಲವು ಕಾಯ್ದೆ ಕಾನೂನುಗಳಲ್ಲಿ ಪ್ರಕರಣಗಳನ್ನು ವಿಚಾರಣೆ ನಡೆಸುವ ಅರೆ ನ್ಯಾಯಿಕ ಅಧಿಕಾರವನ್ನು ನೀಡಿದ್ದು, ಈ ಅಧಿಕಾರವನ್ನು ಇತರೆ ಅಧಿಕಾರಿಗಳಿಗೆ ವಹಿಸಿಲು ಸರ್ಕಾರ ಮುಂದಾಗಿರುವುದನ್ನು ಅಖಿಲ ಭಾರತ ವಕೀಲರ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಶ್ರೀನಿವಾಸ ಕುಮಾರ್ ತೀವ್ರವಾಗಿ ವಿರೋಧಿಸಿದ್ದಾರೆ.
ಕಂದಾಯ ಸಚಿವರಾದ ಅಶೋಕ್ ಅವರು ಜಿಲ್ಲಾಧಿಕಾರಿಗಳ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಹೆಚ್ಚುವರಿ ಜಿಲ್ಲಾಧಿಕಾರಿಗಳಿಗೆ, ಉಪ ವಿಭಾಗಾಧಿಕಾರಿಗಳ ನ್ಯಾಯಾಲಯಗಳಲ್ಲಿರುವ ಪ್ರಕರಣಗಳನ್ನು ವಿಶೇಷ ಭೂ ಸ್ವಾಧೀನಾಧಿಕಾರಿಗಳಿಗೆ , ತಹಶೀಲ್ದಾರ್ ನ್ಯಾಯಾಲಯಗಳಲ್ಲಿರುವ ಪ್ರಕರಣಗಳ ವಿಚಾರಣೆ ಅಧಿಕಾರವನ್ನು ಉಪ ತಹಶೀಲ್ದಾರ್ ಗಳಿಗೆ ವಹಿಸುವಂತೆ ಆದೇಶ ಹೊರಡಿಸುವುದಾಗಿ ತಿಳಿಸಿದ್ದು, ಇದು ಅವೈಜ್ಞಾನಿಕ ಮತ್ತು ಕಾನೂನು ಬಾಹಿರವಾಗಿದೆ ಎಂದು ಅವರು ಖಂಡಿಸಿದ್ದಾರೆ.
ಕರ್ನಾಟಕ ಭೂ ಕಂದಾಯ ಅಧಿನಿಯಮ ಮತ್ತು ನಿಯಮಗಳು ಉಲ್ಲೇಖಿಸಲ್ಪಟ್ಟಂತೆ ಪ್ರಕರಣಗಳ ವಿಚಾರಣೆ ಮತ್ತು ವಿಲೇವಾರಿ ನಡೆಸುತ್ತಿರುವಾಗ ಸಂಬಂಧಿತ ಕಾಯಿದೆ ಕಾನೂನುಗಳಿಗೆ ಸರಿಯಾದ ತಿದ್ದುಪಡಿ ಆಗದೆ, ಶಾಸನ ಸಭೆಯಲ್ಲಿ ಚರ್ಚೆಗೆ ಒಳಪಡಿಸದೆ ಸರ್ಕಾರ ಏಕಾಏಕಿ ಅವೈಜ್ಞಾನಿಕ ಆದೇಶವನ್ನು ಹೊರಡಿಸಿದ ಪಕ್ಷದಲ್ಲಿ ಸರ್ಕಾರದ ಈ ಆದೇಶದಿಂದ ವಕೀಲರಿಗೆ ಮತ್ತು ಸಾರ್ವಜನಿಕರಿಗೆ ತೊಂದರೆ ಮತ್ತು ಗೊಂದಲ ಉಂಟಾಗುತ್ತದೆ. ಆಗಾಗಿ ಕಾನೂನು ತಜ್ಞರ, ಹಿರಿಯ ರೆವಿನ್ಯೂ ಅಧಿಕಾರಿಗಳ, ಶಾಸಕರ, ಸಾರ್ವಜನಿಕರ ಅಭಿಪ್ರಾಯವನ್ನು ತೆಗೆದುಕೊಳ್ಳದೆ, ಅರೆ ನ್ಯಾಯಿಕ ನ್ಯಾಯಾಲಯಗಳ ವ್ಯವಸ್ಥೆಯಲ್ಲಿ ಯಾವುದೇ ಆತುರದ ತೀರ್ಮಾನವನ್ನು ಸರ್ಕಾರ ವಾಗಲಿ ಅಥವಾ ಕಂದಾಯ ಮಂತ್ರಿಗಳಾಗಲಿ ತೆಗೆದುಕೊಳ್ಳಬಾರದೆಂದು ಅಖಿಲ ಭಾರತ ವಕೀಲರ ಒಕ್ಕೂಟ (AILU) ಒತ್ತಾಯಿಸಿದೆ.




