ನಿರ್ದಿಷ್ಟ ಚಿಕಿತ್ಸೆ ಇಲ್ಲದ ಡೆಂಗೀ ಜ್ವರವನ್ನು ನಿಯಂತ್ರಿಸಲು ಸೊಳ್ಳೆ ಉತ್ಪತ್ತಿ ತಾಣಗಳ ನಾಶ ಒಂದೇ ಮಾರ್ಗವಾಗಿದೆ ಹಾಗಾಗಿ ಡೆಂಗೀ ಸೋಲಿಸಲು ಸನ್ನದ್ಧರಾಗಿ ಎಂದು ಶ್ರೀರಂಗಪಟ್ಟಣ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಪಿ ಮಾರುತಿ ನೀಡಿದರು.
ಮಂಡ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳ ಕಛೇರಿ, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ, ಸಾರ್ವಜನಿಕ ಆಸ್ಪತ್ರೆ ಹಾಗೂ ಪುರಸಭೆ ಶ್ರೀರಂಗಪಟ್ಟಣ ಇವರುಗಳ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ ಪ್ರಯುಕ್ತ ಪೌರ ಕಾರ್ಮಿಕರಿಗೆ/ಸ್ವಚ್ಛತಾ ಕಾರ್ಮಿಕರಿಗೆ ಡೆಂಗಿ ಜ್ವರ ನಿಯಂತ್ರಣಕ್ಕಾಗಿ ಈಡಿಸ್ ಲಾರ್ವ ನಿರ್ಮೂಲನೆ ಕುರಿತು ಏರ್ಪಡಿಸಿದ ಪುನರ್ಮನನ ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್ ಡಿ ಬೆನ್ನೂರ ಮಾತನಾಡಿ ಪ್ರತಿ ವರ್ಷ ಮೇ 16 ರಂದು ರಾಷ್ಟ್ರೀಯ ಡೆಂಗೀ ದಿನಾಚರಣೆಯನ್ನು ಆಚರಿಸುತ್ತಾ ಬಂದಿದ್ದೇವೆ ಡೆಂಗೀ ಸೋಲಿಸಲು ಹೆಜ್ಜೆಗಳು:ಪರಿಶೀಲಿಸಿ, ಸ್ವಚ್ಛಗೊಳಿಸಿ, ಮುಚ್ಚಿಡಿ ಎಂಬ ಈ ವರ್ಷದ ಧ್ಯೇಯ ವಾಕ್ಯದೊಂದಿಗೆ ಆಚರಿಸುತ್ತಿದ್ದೇವೆ ಎಂದ ಅವರು, ಸೊಳ್ಳೆಗಳ ಜೀವನ ಚಕ್ರ,ಜೈವಿಕ ನಿಯಂತ್ರಣ ವಿಧಾನಗಳ ಕುರಿತು ಲಾರ್ವ ಮತ್ತು ಗಪ್ಪಿ,ಗ್ಯಾಂಬೂಸಿಯ ಮೀನುಗಳ ಪ್ರಾತ್ಯಕ್ಷಿಕೆಯೊಂದಿಗೆ ತರಬೇತಿ ನೀಡಿದರು ಹಾಗೂ ವಾರಕ್ಕೊಂದು ದಿನ ಕಡ್ಡಾಯವಾಗಿ ಒಣಗಲು ದಿನ ಆಚರಿಸಲು ಮನವಿ ಮಾಡಿದರು.
ತಾಲ್ಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ ಮೋಹನ್ ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಡೆಂಗಿ ಜ್ವರಕ್ಕೆ ಕಾರಣ ವಾಗಿರುವ ಈಡಿಸ್ ಇಜಿಪ್ಟೈ ಎಂಬ ಸೊಳ್ಳೆಗಳ ನಾಶಕ್ಕಾಗಿ ಪಟ್ಟಣ ಪ್ರದೇಶದಲ್ಲಿ ಸ್ವಚ್ಛತಾ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಕಂಡು ಬರುವ ಈಡಿಸ್ ಲಾರ್ವಾ ಉತ್ಪತ್ತಿ ತಾಣಗಳಾದ ಘನತಾಜ್ಯಗಳಲ್ಲಿ ಮಳೆ ನೀರು ಸಂಗ್ರಹಣೆ, ಪ್ರೇಕ್ಷಣೀಯ ಸ್ಥಳಗಳಲ್ಲಿನ ಎಳನೀರು ಬುರುಡೆ, ಹಳೆಯ ಅನುಪಯುಕ್ತ ಟೈರ್ ಗಳಲ್ಲಿ ಮಳೆ ನೀರು ತುಂಬಿರುವುದು ಹಾಗೂ ಬಳಸದೆ ಇರುವ ಮನೆಯ ಹೊರ ಭಾಗದಲ್ಲಿ ಇರಿಸಲಾದ ರುಬ್ಬುವ ಒಳಕಲ್ಲುಗಳಲ್ಲಿ ಮಳೆ ನೀರು ಶೇಖರವಾಗಿರುವುದನ್ನು ಗಮನಿಸಿ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವ ವಿಧಾನಗಳ ಅನುಸರಿಸಬೇಕೆಂದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರಾಜ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾರ್ಯಾಗಾರದಲ್ಲಿ ಪುರಸಭೆ ಆರೋಗ್ಯ ನಿರೀಕ್ಷಕ ದರ್ಶನ, ಆರೋಗ್ಯ ನಿರೀಕ್ಷಣಾಧಿಕಾರಿ ಎಂ ಸಿ ಚಂದನ್, ಎಂ ಎನ್ ಕೃಷ್ಣೇಗೌಡ, ಮೇಘನಾ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಮಹದೇವಮ್ಮ, ಸ್ಮಿತಾ, ಆಶಾ ಕಾರ್ಯಕರ್ತೆ ಮೀನಾ, ಅಶ್ವಿನಿ ಹಾಗೂ ಪುರಸಭೆಯ ಪೌರಕಾರ್ಮಿಕರು ಹಾಗೂ ನೀರು ಗಂಟಿಗಳು ಭಾಗವಹಿಸಿದ್ದರು.




