Thursday, November 19, 2026

ಪ್ರಾಯೋಗಿಕ ಆವೃತ್ತಿ

ಸಂಸದ ಪ್ರತಾಪ್ ಸಿಂಹ ಪಾಸ್ ನೀಡಿದ್ದಕ್ಕೆ ಆರ್.ಅಶೋಕ್ ಸಮರ್ಥನೆ

ಸಂಸತ್ ಒಳಗೆ ಪ್ರವೇಶಿಸಿ ಹೊಗೆ ಬಾಂಬ್ ಸಿಡಿಸಿ ದಾಂಧಲೆ ನಡೆಸಿದವರಿಗೆ ಎಲ್ಲರೂ ನೀಡುವಂತೆ ಸಂಸದ ಪ್ರತಾಪ್ ಸಿಂಹ ಪಾಸ್ ನೀಡಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್, ಪ್ರತಾಪ್ ಸಿಂಹ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ಸಂಸದರು ನೀಡಿದ ಹಾಗೆ ಪ್ರತಾಪ್ ಸಿಂಹ ಕೂಡ ಪಾಸ್ ನೀಡಿದ್ದಾರೆ. ಎಲ್ಲದರ ಬಗ್ಗೆ ತನಿಖೆ ನಡೆಯಲಿದೆ, ಕಾಂಗ್ರೆಸ್ ಆರೋಪ ಸರಿಯಲ್ಲ, ಪ್ರತಾಪ್ ಸಿಂಹ ಭಯೋತ್ಪಾದನೆ ವಿರುದ್ಧ ಹೋರಾಟ ಮಾಡುತ್ತಿರುವವರು, ಅವರು ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಾರಾ ! ಎಂದರು.

ಚರ್ಚೆಗೆ ಅವಕಾಶ ನೀಡಲಿಲ್ಲ

ಬೆಳಗಾವಿ ಜಿಲ್ಲೆಯ ವಂಟಮೂರಿ ಗ್ರಾಮದಲ್ಲಿ ಮಹಿಳೆ ವಿವಸ್ತ್ರಗೊಳಿಸಿ ಕಂಬಕ್ಕೆ ಕಟ್ಟಿ ಅಮಾನುಷವಾಗಿ ಹಲ್ಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಚಳಿಗಾಲದ ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ಮಾಡಿಕೊಡದೇ, ಸಭಾಧ್ಯಕ್ಷರು ಮಲತಾಯಿ ಧೋರಣೆ ತೋರಿದರು ಎಂದು ಅಶೋಕ್ ಆರೋಪಿಸಿದರು.

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ಮಾಡಿರುವ ಪ್ರಕರಣದ ಬಗ್ಗೆ ಯಾವ ಕ್ರಮ ಕೈಗೊಳ್ಳಲಾಗಿದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಸದನದಲ್ಲಿ ಮಾಹಿತಿ ನೀಡಬೇಕಾಗಿತ್ತು, ಆದರೆ ವಿಷಯ ಪ್ರಸ್ತಾಪಿಸಿದರೆ ಎಲ್ಲಿ ಚರ್ಚೆಗೆ ಬರಲಿದೆ ಎಂಬ ಭಯದಿಂದ ಪ್ರಕರಣದ ಪ್ರಸ್ತಾಪವನ್ನೇ ಮಾಡಲಿಲ್ಲ ಎಂದು ದೂರಿದರು.

ನೊಣವಿನಕೆರೆ ಸ್ವಾಮೀಜಿ ಡಿ.ಕೆ ಶಿವಕುಮಾರ್ ಮುಂದಿನ ಮುಖ್ಯಮಂತ್ರಿ ಎಂದು ಭವಿಷ್ಯ ನುಡಿದಿದ್ದಾರೆ, ಕಾಂಗ್ರೆಸ್ ನಾಯಕ ಹರಿಪ್ರಸಾದ್ ಮುಖ್ಯಮಂತ್ರಿ ಗಾದಿಗೆ ಏರಿಸೋದು ಗೊತ್ತು, ಇಳಿಸುವುದು ಗೊತ್ತು ಎಂದರೆ, ಪರಮೇಶ್ವರ್ ನಾನೇ ಮುಂದಿನ ಮುಖ್ಯಮಂತ್ರಿ ಎನ್ನುತ್ತಾರೆ. ಮುಂದಿನ ಬಜೆಟ್ ನಾನೇ ಮಂಡಿಸುವುದಾಗಿ ಮುಖ್ಯಮಂತ್ರಿ ಹೇಳಿದರೆ, ಡಿ.ಕೆ ಶಿವಕುಮಾರ್ ಕಾಂಗ್ರೆಸ್ ಪಕ್ಷದವರು ಮಂಡಿಸುತ್ತಾರೆ ಎಂದು ಹೇಳುತ್ತಾರೆ, ಇವರೆಲ್ಲ ಹೀಗೆ ಹೇಳುವಾಗ ಸಿದ್ದರಾಮಯ್ಯ ದಮ್ಮು,ತಾಕತ್ತು ಎಲ್ಲಿ ಹೋಗಿದೆ ಎಂದು ಬಿಜೆಪಿ ಪಕ್ಷದ ಅಧ್ಯಕ್ಷ ಜೆ.ಪಿ ನಡ್ಡ ಬಗ್ಗೆ ಟೀಕೆ ಮಾಡಿರುವುದಕ್ಕೆ ಮುಖ್ಯಮಂತ್ರಿಗೆ ತಿರುಗೇಟು ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಡ್ಯ ಜಿಲ್ಲಾಧ್ಯಕ್ಷ ಸಿ ಉಮೇಶ್, ಮುಖಂಡರಾದ ನಂಜುಂಡೇಗೌಡ, ಅಶೋಕ್ ಜಯರಾಮ್, ಇಂಡುವಾಳು ಸಚ್ಚಿದಾನಂದ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ