ಶ್ರೀರಂಗಪಟ್ಟಣ ತಾಲ್ಲೂಕಿನ ಚಂದಗಾಲು ಹಾಗೂ ಮಹದೇವಪುರ ಗ್ರಾಮಗಳಿಗೆ ನ.7 ರಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹಾಗೂ ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಭೇಟಿ ನೀಡಲಿದ್ದಾರೆ ಎಂದು ಬಿಜೆಪಿ ಮುಖಂಡ ಇಂಡುವಾಳು ಎಸ್.ಸಚ್ಚಿದಾನಂದ ಹೇಳಿದರು.
ಶ್ರೀರಂಗಪಟ್ಟಣ ತಾಲೂಕಿನ ಚಂದಗಾಲು ಗ್ರಾಮದ ಸರಕಾರಿ ಶಾಲೆಗೆ ಸೇರಿದ ಸರ್ವೆ ನಂ 215 ರಲ್ಲಿರುವ 30 ಗುಂಟೆ ಜಮೀನನ್ನು ಪಹಣಿಯಲ್ಲಿ ಕಂದಾಯ ಇಲಾಖೆ ಖಬರ್ ಸ್ಥಾನಕ್ಕೆ ಸೇರ್ಪಡೆ ಮಾಡಿದ್ದು ಗ್ರಾಮಸ್ಥರು ಹಾಗೂ ಶಾಲಾ ಆಡಳಿತ ಮಂಡಳಿ ಆತಂಕಕ್ಕೆ ಒಳಗಾಗಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ,
ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಗ್ರಾಮಸ್ಥರ ಜತೆ ವಿಸ್ತ್ರತ ವಾಗಿ ಚರ್ಚಿಸುವರು ಎಂದರು.

1943ರಿಂದಲೇ ಚಂದಗಾಲು ಗ್ರಾಮದಲ್ಲಿ ಸರ್ಕಾರಿ ಶಾಲೆ ಇದೆ. ಕಳೆದ 65 ವರ್ಷಗಳಿಂದ ಸರ್ಕಾರಿ ಶಾಲೆಯ ಹೆಸರು ಪಹಣಿಯಲ್ಲಿ ನಮೂದಾಗಿದೆ. ಈ ವರ್ಷ ಶಾಲೆಯ ಜಾಗ ದಿಢೀರನೆ ಖಬರ್ ಸ್ಥಾನಕ್ಕೆ ಸೇರಿದ್ದು ಎಂದು ಪಹಣಿ ಬದಲಾಗಿರುವುದು ಬೆಳಕಿಗೆ ಬಂದಿದ್ದು,ಇದರಿಂದ ಚಂದಗಾಲು ಗ್ರಾಮದ ಜನರು ಆತಂಕಕ್ಕೆ ಒಳಗಾಗಿದ್ದಾರೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸಂವಿಧಾನಿಕ ನಡೆ ಅನುಸರಿಸುತ್ತಿದೆ. ಹಿಂದೂ ದೇವಾಲಯಗಳು, ಸರ್ಕಾರಿ ಶಾಲೆಗಳು ಹಾಗೂ ಸರ್ಕಾರಿ ಭೂಮಿಯನ್ನು ವಕ್ಪ್ ಬೋರ್ಡ್ ಹೆಸರಿಗೆ ಸೇರ್ಪಡೆ ಮಾಡುತ್ತಿರುವ ಕಾಂಗ್ರೆಸ್ ನ ತುಷ್ಠೀಕರಣ ನೀತಿ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷದ ಮುಸ್ಲಿಮರ ಓಲೈಕೆ ರೈತರನ್ನು ಒಕ್ಕಲೆಬ್ಬಿಸುವ ತಂತ್ರವಾಗಿದೆ. ಮತ್ತೊಮ್ಮೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ದೇಗುಲಗಳು, ಸರ್ಕಾರಿ ಜಾಗಗಳು, ಸ್ಮಶಾನಗಳನ್ನು ವಕ್ಫ್ ಬೋರ್ಡ್ ಗೆ ಸೇರ್ಪಡೆ ಮಾಡುತ್ತಿದ್ದು, ಇದರ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಎಸ್.ಪ್ರಕಾಶ್, ಗಂಜಾಂ ಶಿವು, ಬಿಜೆಪಿ ಮುಖಂಡ ಶಾಮಿಯಾನ ಪುಟ್ಟರಾಜು,ಗ್ರಾ. ಪಂ ಸದಸ್ಯರಾದ ಶಿವಕುಮಾರ್, ರಮೇಶ, ಮುಖಂಡರಾದ ಗಂಗರಾಜು, ದಾಸೇಗೌಡ, ಸಿ.ಕೆ ಶಂಕರ್, ಸತ್ಯನಾರಾಯಣ, ಸಿ.ಎಸ್.ಶ್ರೀನಿವಾಸ, ರಾಮಕೃಷ್ಣ, ರಾಮಚಂದ್ರ, ರಾಮಚಂದ್ರ ಮೂರ್ತಿ, ರಾಜೇಶ್,ರಾಕೇಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.




