ಸರ್ಕಾರಿ ಸೇವೆಯಿಂದ ನಿವೃತ್ತರಾದ ಕೆ.ಆರ್.ಪೇಟೆ ಪುರಸಭೆಯ ಪೌರ ಕಾರ್ಮಿಕರ ಮೇಸ್ತ್ರಿ ಮುತ್ತಣ್ಣ ಅವರಿಗೆ ಇಂದು ಹೃದಯಸ್ಪರ್ಶಿ ಸನ್ಮಾನ, ಬೀಳ್ಕೊಡುಗೆ ನೀಡಲಾಯಿತು.
ಕೆ.ಆರ್.ಪೇಟೆ ಪುರಸಭೆ ಕಾರ್ಯಾಲಯದ ವತಿಯಿಂದ ಪೌರ ಕಾರ್ಮಿಕರ ಮೇಸ್ತ್ರಿ ಮುತ್ತಣ್ಣ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರವೀಂದ್ರಬಾಬು, ತಮ್ಮ ಆರೋಗ್ಯವನ್ನು ಲೆಕ್ಕಿಸದೇ ಪಟ್ಟಣವನ್ನು ಸ್ವಚ್ಛಗೊಳಿಸಿ ಆರೋಗ್ಯವಂತ ಸಮಾಜದ ನಿರ್ಮಾಣಕ್ಕಾಗಿ ದುಡಿಯುತ್ತಾ, ತಮ್ಮ ಸೇವೆಯಲ್ಲಿಯೇ ಸಾರ್ಥಕತೆಯನ್ನು ಕಾಣುತ್ತಿರುವ ಪೌರಕಾರ್ಮಿಕರ ಸೇವೆಯು ಅನನ್ಯವಾಗಿದ್ದು ಇಡೀ ನಾಗರಿಕ ಸಮಾಜವೇ ಮೆಚ್ಚುವ ವಿಚಾರವಾಗಿದೆ ಎಂದು ಹೇಳಿದರು.
ಕಳೆದ 35 ವರ್ಷಗಳಿಂದ ಕೆ. ಆರ್.ಪೇಟೆ ಪುರಸಭೆಯಲ್ಲಿ ಪೌರ ಕಾರ್ಮಿಕರಾಗಿ, ವಾಟರ್ ಆಪರೇಟರ್ ಆಗಿ, ಪೌರ ಕಾರ್ಮಿಕರ ಮೇಸ್ತ್ರಿಯಾಗಿ ಸಾರ್ಥಕ ಸೇವೆ ಸಲ್ಲಿಸಿ ಪಟ್ಟಣದಲ್ಲಿ ಎಲ್ಲರಿಗೂ ಬೇಕಾದ ವ್ಯಕ್ತಿಯಾಗಿ ಕರ್ತವ್ಯ ನಿರ್ವಹಿಸಿ ಸೇವೆಯಿಂದ ನಿವೃತ್ತರಾಗುತ್ತಿದ್ದರೂ ಸೇವೆಯು ಖಾಯಂ ಆಗದೆ, ಯಾವುದೇ ಸರ್ಕಾರದ ಸೌಲಭ್ಯಗಳನ್ನು ಪಡೆಯದೇ, ಇಂದಿಗೂ ಕೇವಲ ದಿನಗೂಲಿ ನೌಕರರಾಗಿಯೇ ನಿವೃತ್ತಿ ಆಗುತ್ತಿರುವುದು ನೋವು ತಂದಿದೆ. ಕರ್ತವ್ಯ, ಶಿಸ್ತು ಮತ್ತು ಬದ್ಧತೆಗೆ ಹೆಸರು ವಾಸಿಯಾಗಿದ್ದ ಮುತ್ತಣ್ಣ ಪುರಸಭೆಯಲ್ಲಿ 35ವರ್ಷ ಸೇವೆ ಸಲ್ಲಿಸಿದ್ದರೂ ತಾಂತ್ರಿಕ ಕಾರಣಗಳಿಂದಾಗಿ ಸೇವೆಯಲ್ಲಿ ಖಾಯಂ ಆಗಿಲ್ಲಾ, ಮುತ್ತಣ್ಣ ಅವರ ವಿಶ್ರಾಂತಿ ಜೀವನವು ಸುಖಮಯವಾಗಿರಲಿ ಎಂದು ರವೀಂದ್ರ ಬಾಬು ಶುಭ ಹಾರೈಸಿದರು.
ಪುರಸಭೆ ಅಧ್ಯಕ್ಷೆ ಪಂಕಜಾ, ಉಪಾಧ್ಯಕ್ಷೆ ಸೌಭಾಗ್ಯ, ಚೀಫ್ ಆಫೀಸರ್ ನಟರಾಜ್, ಕಂದಾಯ ಅಧಿಕಾರಿ ರವಿಕುಮಾರ್, ಕಚೇರಿಯ ವ್ಯವಸ್ಥಾಪಕಿ ಕಾಂಚನ, ಹಿರಿಯ ಆರೋಗ್ಯ ಪರಿವೀಕ್ಷಕ ಅಶೋಕ್, ಪೌರ ಕಾರ್ಮಿಕರ ಮೇಸ್ತ್ರಿ ಕೃಷ್ಣ, ಮಂಟೇ ಮಂಜು, ಪುರಸಭೆ ಸದಸ್ಯರಾದ ಶಾಮಿಯಾನ ತಿಮ್ಮೇಗೌಡ, ಸ್ನೇಹಿತ ರಮೇಶ್, ಕೆ.ಆರ್. ನೀಲಕಂಠ, ಚಿಕ್ಕ ಶಾರದಾ, ಶಾರದಾ, ರತ್ನಮ್ಮ, ಸುಕನ್ಯಾ ಸೇರಿದಂತೆ ಪೌರ ಕಾರ್ಮಿಕರು ಹಾಗೂ ಕಛೇರಿಯ ಸಿಬ್ಬಂದಿಗಳು ಹೃದಯಸ್ಪರ್ಶಿಯಾಗಿ ಬೀಳ್ಕೊಟ್ಟರು.




