Friday, November 20, 2026

ಪ್ರಾಯೋಗಿಕ ಆವೃತ್ತಿ

ರವೀಂದ್ರ ಶ್ರೀಕಂಠಯ್ಯ, ರಮೇಶ್ ಬಾಬು ಬಂಡಿಸಿದ್ದೇಗೌಡ ವಿಚಲಿತರಾಗಿದ್ದಾರೆ : ತಗ್ಗಹಳ್ಳಿ ವೆಂಕಟೇಶ್

ಹಣ ಬಲವುಳ್ಳ ಕ್ಷೇತ್ರದ ಶಾಸಕ ರವೀಂದ್ರ ಶ್ರೀಕಂಠಯ್ಯ ಹಾಗೂ ಮಾಜಿ ಶಾಸಕ ರಮೇಶ್‌ಬಾಬು ಅವರು ನನ್ನ ಸ್ಪರ್ಧೆಯಿಂದ ವಿಚಲಿತರಾಗಿ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ. ಪಕ್ಷದ ಕಾರ್ಯಕರ್ತರು ಹಾಗೂ ಮತದಾರರು ಅಪಪ್ರಚಾರಗಳಿಗೆ ಕಿವಿಗೊಡಬಾರದು ಎಂದು ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್‌ ಆಕಾಂಕ್ಷಿ ತಗ್ಗಹಳ್ಳಿ ವೆಂಕಟೇಶ್‌ ಹೇಳಿದರು.

ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಹೋಬಳಿಯ ಕೊಡಿಯಾಲ ಗ್ರಾಮದ ಶ್ರೀ ಸಿದ್ದೇಶ್ವರ ಸಮುದಾಯ ಭವನದಲ್ಲಿ ಭಾನುವಾರ ನಡೆದ ತಗ್ಗಹಳ್ಳಿ ವೆಂಕಟೇಶ್ ಬೆಂಬಲಿಗರು ಹಾಗೂ ಹಿತೈಷಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಅರಕೆರೆಯ ಎರಡು ಕುಟುಂಬಗಳೇ ಹಲವಾರು ವರ್ಷಗಳಿಂದ ರಾಜಕಾರಣ ಮಾಡಿಕೊಂಡು ಶಾಸಕರಾಗಿ ಆಡಳಿತ ಮಾಡಿದ್ದಾರೆ. ಆದರೆ, ಕ್ಷೇತ್ರ ನಿರೀಕ್ಷಿಸಿದಷ್ಟುಪ್ರಗತಿ ಸಾಧಿಸಿಲ್ಲ. ಹೀಗಾಗಿ ಜನರು ಬದಲಾವಣೆ ಬಯಸಿದ್ದಾರೆ. ಜನರ ನಡುವೆ ಇದ್ದು ಹೋರಾಟ ನಡೆಸಿಕೊಂಡು ಬಂದಿರುವ ನನ್ನ ಬಗ್ಗೆ ಮತದಾರರು ಒಲವು ವ್ಯಕ್ತಪಡಿಸುತ್ತಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸ್ಪರ್ಧೆ ಖಚಿತ 

30 ವರ್ಷಗಳಿಂದ ಜೆಡಿಎಸ್‌ ಪಕ್ಷವನ್ನು ಕಟ್ಟಿ ಬೆಳೆಸಿರುವ ನನಗೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ ಟಿಕೆಟ್‌ಗೆ ಕೊನೆಯವರೆಗೂ ಕಾಯುತ್ತೇನೆ, ಒಂದು ವೇಳೆ ಟಿಕೆಟ್‌ ಸಿಗದಿದ್ದರೆ ಸ್ಪರ್ಧೆ ಖಚಿತ ಎಂದು ಸ್ಪಷ್ಟಪಡಿಸಿದ ಅವರು, ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ ಆಶೀರ್ವಾದದಿಂದ ಜಿಪಂ, ತಾಪಂ, ಗ್ರಾಪಂ ಸೇರಿ 6 ಚುನಾವಣೆಗಳಲ್ಲಿ ಗೆದ್ದು ಜನಸೇವೆ ಮಾಡಿದ್ದೇನೆ. ನನಗೆ ರಾಜಕೀಯ ಹಿನ್ನೆಲೆ ಇಲ್ಲ. ಕ್ಷೇತ್ರದ ಜನರು, ನಿಷ್ಠಾವಂತ ಜೆಡಿಎಸ್‌ ಕಾರ್ಯಕರ್ತರು ನನಗೆ ಬೆಂಬಲವಾಗಿ ನಿಂತರು ಎಂದರು.

ಹಲವಾರು ಬಾರಿ ಜೆಡಿಎಸ್‌ ನಾಯಕರಲ್ಲಿ ಮನವಿ ಮಾಡಿ ಪಕ್ಷ ಸೇವೆಗೆ, ಸಂಘಟನೆ ಸೂಕ್ತ ಅವಕಾಶ ಕೋರಿದ್ದೆ. ಅಲ್ಲದೇ, 2 ಬಾರಿ ವಿಧಾನ ಪರಿಷತ್‌ ಚುನಾವಣೆಗಳಲ್ಲಿ ಅವಕಾಶದಿಂದ ವಂಚಿತನಾದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಕೊನೆ ಕ್ಷಣದವರೆಗೂ ಟಿಕೆಟ್‌ಗಾಗಿ ಹೋರಾಟ ಮಾಡಿದೆ. ಆದರೆ, ನಾಯಕರು ಸಮಾಧಾನ ಮಾಡಿ ಪಕ್ಷ ನಿಷ್ಠೆ ಇಲ್ಲದವರಿಗೆ ಟಿಕೆಟ್‌ ನೀಡಿದರು ಎಂದು ಅಳಲು ತೋಡಿಕೊಂಡರು.

ಕಳೆದ ಕೆಲ ದಿನಗಳ ಹಿಂದೆ ಆರತಿ ಉಕ್ಕಡದಲ್ಲಿ ನಡೆದ ನಿಷ್ಟಾವಂತರ ಸಭೆಯಲ್ಲಿ ಜನರೇ ಖರ್ಚು ಮಾಡಿ ಸಭೆ ಆಯೋಜಿಸಿದ್ದರು. ಸಂತೆಕಸಲಗೆರೆ ಭೂಮಿ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಸಭೆಗೂ ಹಾಗೂ ಕೊಡಿಯಾಲದಲ್ಲಿ ಕೂಡ ನಡೆದ ಸಭೆಗೂ ಜನರೇ ಖರ್ಚು ವೆಚ್ಚ ಭರಿಸಿದ್ದಾರೆ. ಕಲುಷಿತಗೊಂಡಿರುವ ರಾಜಕೀಯ ವ್ಯವಸ್ಥೆಯ ನಡುವೆ ನನ್ನ ಮೇಲೆ ಅಭಿಮಾನಿಗಳು, ಜನರು ಇಟ್ಟಿರುವ ಪ್ರೀತಿಗೆ ಚಿರಋುಣಿಯಾಗಿರುತ್ತೇನೆ ಎಂದರು.

ಸಭೆಯಲ್ಲಿ ಹೆಚ್.ಸಿ. ಮಂಜುನಾಥ್, ಸಿದ್ದರಾಜು, ಪುಟ್ಟೇಗೌಡ, ಜವರೇಗೌಡ, ಸುರೇಶ್ ಸೇರಿದಂತೆ ಮತ್ತಿತರರು ಭಾಗವಹಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ