ಕಳೆದ ಲೋಕಸಭಾ ಚುನಾವಣೆ ಹಾಗೂ ರಾಜ್ಯಸಭೆ ಚುನಾವಣೆಯಲ್ಲಿ ನಾವು ಜೆಡಿಎಸ್ ಪಕ್ಷಕ್ಕೆ ಸಹಕರಿಸಿದ್ದು, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗೆ ಜೆಡಿಎಸ್ ಸಹಕಾರ ನೀಡಲಿ ಎಂದು ಚಲುವರಾಯಸ್ವಾಮಿ ಒತ್ತಾಯಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ 2ನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇವೆ. ಆತ್ಮಸಾಕ್ಷಿ ಮತಗಳು ಬಂದರೆ ಜಯ ಸಾಧಿಸುತ್ತೇವೆ ಎಂದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಿಂದ ಮುದ್ದಹನುಮೇಗೌಡ ಅವರನ್ನು ಕಣಕ್ಕಿಳಿಸದೆ ದೇವೇಗೌಡರಿಗೆ ಬಿಟ್ಟುಕೊಟ್ಟಿದ್ದೇವೆ. ರಾಜ್ಯಸಭೆ ಚುನಾವಣೆಯಲ್ಲಿಯೂ ದೇವೇಗೌಡರು ಆಯ್ಕೆಯಾಗಲಿ ಎಂಬ ಉದ್ದೇಶದಿಂದ ನಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಸಹಕಾರ ನೀಡಿದ್ದೆವು. ಈ ಬಾರಿ ನಮ್ಮ ಪಕ್ಷದ ಅಭ್ಯರ್ಥಿಗೆ ಜೆಡಿಎಸ್ ಪಕ್ಷ ಸಹಕಾರ ಕೊಡಲಿ ಎಂದರು.
ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 80 ಸ್ಥಾನಗಳನ್ನು ಪಡೆದರೂ 37 ಸ್ಥಾನ ಪಡೆದ ಜೆಡಿಎಸ್‌ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿದ್ದೇವೆ. ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ನಂತರ ಹೆಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್ ಬಗ್ಗೆ ಲಘುವಾಗಿ ಮಾತನಾಡಿಕೊಂಡು ಬಂದಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾಂಗ್ರೆಸ್‌ನಿಂದ ಜೆಡಿಎಸ್‌ಗೆ ಹೆಚ್ಚು ಲಾಭವಾಗಿದೆಯೇ ಹೊರತು ಕಾಂಗ್ರೆಸ್ ಪಕ್ಷಕ್ಕಲ್ಲ. ಇದೇ ೧೦ ರಂದು ನಡೆಯುವ ರಾಜ್ಯಸಭೆ ಚುನಾವಣೆಯಲ್ಲಿ ಜಾತ್ಯಾತೀತ ತತ್ವದ ಮೇಲೆ ಕಾಂಗ್ರೆಸ್‌ಗೆ ಬೆಂಬಲ ನೀಡಲಿ ಎಂದರು.
ಸಮ್ಮಿಶ್ರ ಸರ್ಕಾರ ಪತನವಾದ ನಂತರ ನಡೆದ ಚುನಾವಣೆಗಳಲ್ಲಿ ಜೆಡಿಎಸ್ ಬಿಜೆಪಿಯೊಂದಿಗೆ ಒಡಂಬಡಿಕೆ ಮಾಡಿಕೊಂಡು ಬಂದಿದೆ.ಜೆಡಿಎಸ್‌ನವರು ಅಲ್ಪಸಂಖ್ಯಾತರ ಬಗ್ಗೆ ಮಾತನಾಡುತ್ತಾರೆ.ಇವರ ಸಚಿವ ಸಂಪುಟದಲ್ಲಿ ಯಾವೊಬ್ಬ ಅಲ್ಪಸಂಖ್ಯಾತರನ್ನು ಸಚಿವರನ್ನಾಗಿ ಏಕೆ ಮಾಡಲಿಲ್ಲವೆಂದು ಪ್ರಶ್ನಿಸಿದರು.
ದಲಿತ ಸಿಎಂ ಘೋಷಿಸಲಿ
ನನ್ನ ಕೊನೆ ಉಸಿರು ಇರುವುದರೊಳಗೆ ದಲಿತ ನಾಯಕರೊಬ್ಬರನ್ನು ಮುಖ್ಯಮಂತ್ರಿ ಮಾಡುತ್ತೇನೆ ಎನ್ನುವ ಬದಲು, ನಿಜವಾಗಿಯೂ ದಲಿತರ ಬಗ್ಗೆ ಕಾಳಜಿ ಇದ್ದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ, ದಲಿತರೊಬ್ಬರನ್ನು ಮುಖ್ಯಮಂತ್ರಿ ಮಾಡುತ್ತೇನೆಂದು ಕುಮಾರಸ್ವಾಮಿ ಘೋಷಿಸಲಿ ಎಂದು ಸವಾಲು ಹಾಕಿದರು.
ಸಮ್ಮಿಶ್ರ ಸರ್ಕಾರವಿದ್ದಾಗ ಜಿಲ್ಲೆಗೆ ಯಾವುದೇ ಕೊಡುಗೆ ನೀಡಲಿಲ್ಲ. ಕೇವಲ 8000 ಕೋಟಿ ಅನುದಾನ ನೀಡುತ್ತೇವೆ ಎಂದು ಹೇಳಿ ಬಿಡುಗಡೆ ಮಾಡಲಿಲ್ಲ. ಹಾಸನಕ್ಕೆ ಹೋಲಿಸಿಕೊಂಡರೆ ಮಂಡ್ಯದ ಅಭಿವೃದ್ಧಿ ಶೂನ್ಯ ಎಂದು ಜೆಡಿಎಸ್ ವಿರುದ್ಧ ಹರಿಹಾಯ್ದರು.
ಬಿಜೆಪಿ ಮುಖಂಡನನ್ನು ಎಂ.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷನನ್ನಾಗಿ ಮಾಡಲು ಹಾಗೂ ಕೆ.ಆರ್. ಪೇಟೆ ಹೆಚ್.ಟಿ. ಮುಂಜು ನಡೆಸುತ್ತಿರುವ ಕ್ರಷರ್ ಬಗ್ಗೆ ತೋರಿದ ಕಾಳಜಿಯನ್ನು ಜೆಡಿಎಸ್ ಮೈಷುಗರ್ ಕಾರ್ಖಾನೆ ಪುನರಾರಂಭ ಮಾಡಲು ಏಕೆ ತೆಗೆದುಕೊಳ್ಳಲಿಲ್ಲ ಎಂದು ಟೀಕಿಸಿದರು.
ಸಚಿವ ನಾರಾಯಣಗೌಡರನ್ನು ಬಿಜೆಪಿ ಗೆಲ್ಲಿಸಿಲ್ಲ. ಹಾಗೇನಾದರೂ ಭಾವಿಸಿದ್ದರೆ ಅದು ಬಿಜೆಪಿ ಭ್ರಮೆ. ಜೆಡಿಎಸ್‌ನ ಅಸಮಾಧಾನಿತ ಮತಗಳಿಂದ ಸಚಿವ ನಾರಾಯಣಗೌಡರು ಗೆಲುವು ಸಾಧಿಸಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಭ್ರಷ್ಟಾಚಾರವೇ ಸಾಧನೆ
ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಹೇಳಿಕೊಳ್ಳುವಂತಹ ಸಾಧನೆ ಏನು ಇಲ್ಲ. ಇದನ್ನು ಮುಚ್ಚಿ ಹಾಕಲು ಚಡ್ಡಿ, ಪಠ್ಯ ಪುಸ್ತಕ ಪರಿಷ್ಕರಣೆಯಂತಹ ವಿಷಯಗಳನ್ನು ಪ್ರಸ್ತಾಪ ಮಾಡುತ್ತಿದ್ದಾರೆ ಎಂದರು.
ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷನನ್ನಾಗಿ ರೋಹಿತ್ ಚಕ್ರತೀರ್ಥನನ್ನು ನೇಮಕ ಮಾಡಿದ್ದೆ ಸರ್ಕಾರದ ಮೊದಲನೇ ತಪ್ಪು, ನಾಡಿನ ಹಿರಿಯ ಸಾಹಿತಿಗಳು ಹಾಗೂ ಅಂಬೇಡ್ಕರ್‌ಗೆ ಅವಮಾನ ಮಾಡಿದ್ದು ಸರಿಯಲ್ಲ. ಇದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗಂಭೀರವಾಗಿ ಪರಿಗಣಿಸಿ ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.
ಸುದ್ದಿ ಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ವಿಜಯ ಕುಮಾರ್, ಕಾಂಗ್ರೆಸ್ ಮುಖಂಡರಾದ ಡಾ.ಕೃಷ್ಣ, ಅಪ್ಪಾಜಿ, ಹಾಲಹಳ್ಳಿ ಅಶೋಕ್, ನಗರ ಘಟಕದ ಅಧ್ಯಕ್ಷ ಹೆಚ್.ಕೆ.ರುದ್ರಪ್ಪ, ಮಹಿಳಾ ಆಧ್ಯಕ್ಷೆ ಅಂಜನಾ ಶ್ರೀಕಾಂತ್, ಜಿ.ಪಂ.ಮಾಜಿ ಅಧ್ಯಕ್ಷ ಸುರೇಶ್ ಕಂಠಿ ಹಾಜರಿದ್ದರು.