Friday, September 20, 2024

ಪ್ರಾಯೋಗಿಕ ಆವೃತ್ತಿ

ಮುಸಲ್ಮಾನರ ಹೆಸರಿನಲ್ಲಿ ರಾಮಮಂದಿರ ಸ್ಪೋಟದ ಬೆದರಿಕೆ: ಸಿಕ್ಕಿಬಿದ್ದ ಸಂಘ ಪರಿವಾರದ ಹಿಂದೂ ಯುವಕರು !

ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಹಾಗೂ ಅಯೋಧ್ಯೆಯ ರಾಮ ಮಂದಿರಕ್ಕೆ ಮುಸ್ಲಿಮರ ಹೆಸರಿನಲ್ಲಿ ಬಂದಿದ್ದ ಬಾಂಬ್ ಬೆದರಿಕೆ ಪ್ರಕರಣವನ್ನು ಭೇದಿಸಿರುವ ಪೊಲೀಸರು, ಇಬ್ಬರು ಹಿಂದೂ ಯುವಕರನ್ನು ಬಂಧಿಸಿದ್ದಾರೆ. ಸಂಚು ರೂಪಿಸಿದ್ದ ಸಂಘಪರಿವಾರದ ಮುಖಂಡ ದೇವೇಂದ್ರ ತಿವಾರಿ ಎಂಬಾತ ತಲೆಮರೆಸಿಕೊಂಡಿದ್ದಾನೆ.

ಭಾರತೀಯ ಕಿಸಾನ್ ಮಂಚ್ ಮತ್ತು ಭಾರತೀಯ ಗೌ ಸೇವಾ ಪರಿಷತ್ ಅಧ್ಯಕ್ಷ ದೇವೇಂದ್ರ ತಿವಾರಿ ಅವರಿಗೆ ಅಯೋಧ್ಯೆಯ ಶ್ರೀರಾಮ ಮಂದಿರವನ್ನು ಸ್ಫೋಟಿಸುವ ಬೆದರಿಕೆಯ ಇ-ಮೇಲ್ ಕಳುಹಿಸಲಾಗಿತ್ತು. ಇದರಲ್ಲಿ ಸಿಎಂ ಯೋಗಿ ಆದಿತ್ಯನಾಥ್, ರಾಮಮಂದಿರ ಮತ್ತು ಎಸ್‌ಟಿಎಫ್ ಮುಖ್ಯಸ್ಥ ಅಮಿತಾಭ್ ಯಶ್​ರನ್ನು ಸ್ಫೋಟಿಸಿ ಹತ್ಯೆಗೈಯುವುದಾಗಿಯೂ ತಿಳಿಸಲಾಗಿತ್ತು.

ಆತ ಪಾಕಿಸ್ತಾನಿ ಗುಪ್ತಚರ ಸಂಸ್ಥೆ ಐಎಸ್‌ಐನ ಏಜೆಂಟ್ ಎಂದು ಇಮೇಲ್‌ನಲ್ಲಿ ಹೇಳಲಾಗಿತ್ತು. ಇದರ ನಂತರ ಪೊಲೀಸರು ಮತ್ತು ಇತರ ತನಿಖಾ ಸಂಸ್ಥೆಗಳು ತನಿಖೆ ಆರಂಭಿಸಿತ್ತು. ಸದ್ಯ ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಎಸ್‌ಟಿಎಫ್ ಬಂಧಿಸಿದೆ.

ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ ತಹರ್ ಸಿಂಗ್ ಹಾಗೂ ಓಂ ಪ್ರಕಾಶ್ ಮಿಶ್ರಾ ಎಂಬುವವರನ್ನು ಲಕ್ನೋದ ಗೋಮ್ತಿ ನಗರದ ವಿಭೂತಿ ಖಂಡ್ ನಲ್ಲಿ ಬಂಧಿಸಲಾಗಿದೆ.

ಎಸ್‌ಟಿಎಫ್ ಪ್ರಕಾರ, ದೂರು ಕೊಟ್ಟಿದ್ದ ಭಾರತೀಯ ಕಿಸಾನ್ ಮಂಚ್ ಮತ್ತು ಭಾರತೀಯ ಗೌ ಸೇವಾ ಪರಿಷತ್ ಅಧ್ಯಕ್ಷ ದೇವೇಂದ್ರ ತಿವಾರಿ ಅವರೇ ಈ ಸಂಚು ರೂಪಿಸಿದ್ದರು. ದೇವೇಂದ್ರ ತಿವಾರಿ ಅವರು ಭದ್ರತೆ ಪಡೆದು ದೊಡ್ಡ ನಾಯಕರಾಗಲು ತಮ್ಮದೇ ಉದ್ಯೋಗಿಗಳಿಂದ ಬೆದರಿಕೆ ಇ-ಮೇಲ್‌ಗಳನ್ನು ಕಳುಹಿಸಿದ್ದರು. ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳಾದ ತಹರ್ ಸಿಂಗ್ ಮತ್ತು ಓಂ ಪ್ರಕಾಶ್ ಮಿಶ್ರಾ ಅವರನ್ನು ಎಸ್‌ಟಿಎಫ್ ಬಂಧಿಸಿದೆ. ಅಲ್ಲದೆ, ಸಂಚು ರೂಪಿಸಿದ್ದ ದೇವೇಂದ್ರ ತಿವಾರಿಗಾಗಿ ಶೋಧ ನಡೆಸುತ್ತಿದೆ.

“>

ಇಬ್ಬರು ಆರೋಪಿಗಳಾದ ಓಂಪ್ರಕಾಶ್ ಮಿಶ್ರಾ ಮತ್ತು ತಹರ್ ಸಿಂಗ್ ಅವರು ಜುಬೈರ್ ಖಾನ್ ([email protected]) ಮತ್ತು ಆಲಂ ಅನ್ಸಾರಿ ([email protected]) ಎಂಬ ನಕಲಿ ಐಡಿಗಳನ್ನು ಸೃಷ್ಟಿಸುವ ಮೂಲಕ ಐಎಸ್‌ಐ ಅನ್ನು ಉಲ್ಲೇಖಿಸಿ ರಾಮಮಂದಿರ, ಯುಪಿ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಎಸ್‌ಟಿಎಫ್ ಮುಖ್ಯಸ್ಥ ಅಮಿತಾಬ್ ಯಶ್ ಅವರಿಗೆ ಬಾಂಬ್ ಬೆದರಿಕೆ ಹಾಕುವ ಇಮೇಲ್ ಕಳುಹಿಸಿದ್ದರು.

ಇಮೇಲ್ ಐಡಿಗಳ ತಾಂತ್ರಿಕ ವಿಶ್ಲೇಷಣೆಯ ನಂತರ, ತಹರ್ ಸಿಂಗ್ ಇಮೇಲ್ ಖಾತೆಗಳನ್ನು ರಚಿಸಿದ್ದಾರೆ ಮತ್ತು ಓಂಪ್ರಕಾಶ್ ಮಿಶ್ರಾ ಬೆದರಿಕೆ ಸಂದೇಶಗಳನ್ನು ಕಳುಹಿಸಿದ್ದಾರೆ ಎಂಬುದನ್ನು ಎಸ್‌ಟಿಎಫ್ ಪತ್ತೆ ಮಾಡಿ, ಬಂಧಿಸಿದೆ.

ಸಿಂಗ್ ಮತ್ತು ಮಿಶ್ರಾ ಇಬ್ಬರೂ ಗೊಂಡಾ ನಿವಾಸಿಗಳಾಗಿದ್ದು, ಅರೆವೈದ್ಯಕೀಯ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿಕೆ ತಿಳಿಸಿದೆ. ಎಸ್‌ಟಿಎಫ್ ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದು, ಸೂತ್ರಧಾರ ದೇವೇಂದ್ರ ತಿವಾರಿಯ ಚಲನವಲನಗಳ ಮೇಲೆ ನಿಗಾ ಇರಿಸಿದ್ದು, ಶೀಘ್ರವೇ ಪತ್ತೆ ಹಚ್ಚಿ, ಬಂಧಿಸುವುದಾಗಿ ಹೇಳಿದೆ.

ಕೃಪೆ: ಈದಿನ.ಕಾಂ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!