ಮಳವಳ್ಳಿ ಪಟ್ಟಣದಲ್ಲಿ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಸಮಾನ ಮನಸ್ಕರ ವೇದಿಕೆಯ ಕಾರ್ಯಕರ್ತರು ಮಂಡ್ಯ ನಗರದಲ್ಲಿ ಪಂಜಿನ ಮೆರವಣಿಗೆ ನಡೆಸಿದರು.
ಮಂಡ್ಯ ನಗರದ ಗಾಂಧಿಭವನದಿಂದ ಮಹಾವೀರ ವೃತ್ತದವರೆಗೂ ಪಂಜಿನ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಮಾನವ ಸರಪಳಿ ನಿರ್ಮಿಸಿ ಅತ್ಯಾಚಾರಿ ಹಾಗೂ ಕೊಲೆ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.
ಪ್ರಗತಿಪರ ಚಿಂತಕ ಪ್ರೊ.ಹುಲ್ಕೆರೆ ಮಹದೇವು ಮಾತನಾಡಿ, ಪ್ರಸ್ತುತ ಇಂತಹ ಪ್ರಕರಣಗಳನ್ನು ಪ್ರಚೋದಿಸುವಂತ ರಾಜಕಾರಣ ನಡೆಯುತ್ತಿರುವುದು ವಿಷಾದನೀಯ. ದುಷ್ಟ ರಾಜಕಾರಣ ಇಂತಹ ಪ್ರಕರಣಗಳಿಗೆ ಕುಮ್ಮಕ್ಕು ನೀಡುತ್ತಿದೆ. ಎಲ್ಲ ವರ್ಗದ ಜನರು ಹಾಗೂ ಮಹಿಳೆಯರು ಇಂಥ ರಾಜಕಾರಣಿಗಳಿಗೆ ಮತ ನೀಡದೆ ಬುದ್ಧಿ ಕಲಿಸಬೇಕು. ಅಧಿಕಾರಿ ವರ್ಗವೂ ಅಸಹಾಯಕರಂತೆ ವರ್ತಿಸುತ್ತಿದ್ದಾರೆ ಎಂದರು.
ಪೊಲೀಸ್ ಇಲಾಖೆ ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಅತ್ಯಾಚಾರದಂತ ಪ್ರಕರಣಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ಪೊಲೀಸ್ ಇಲಾಖೆ ಇದ್ದರೂ ಇಲ್ಲದಂತಾಗಲಿದೆ. ಇದರ ಬಗ್ಗೆ ಪ್ರತಿಯೊಬ್ಬರೂ ಎಚ್ಚೆತ್ತುಕೊಂಡು ಈ ರೀತಿಯ ಘಟನೆಗಳಿಗೆ ಕಡಿವಾಣ ಹಾಕಬೇಕು ಎಂದು ಮನವಿ ಮಾಡಿದರು.
ರೈತನಾಯಕಿ ಸುನಂದಜಯರಾಂ, ಸಿಐಟಿಯುನ ಸಿ.ಕುಮಾರಿ, ಕರವೇ ಜಯರಾಂ, ಎಲ್.ಸಂದೇಶ್, ಕನ್ನಡ ಸೇನೆ ಮಂಜುನಾಥ್, ಎಂ.ವಿ.ಕೃಷ್ಣ, ಸುಂಡಹಳ್ಳಿ ಮಂಜುನಾಥ್, ಕನ್ನಲಿ ಚನ್ನಪ್ಪ, ಹನಿಯಂಬಾಡಿ ಶೇಖರ್ ಸೇರಿದಂತೆ ಮತ್ತಿತರರಿದ್ದರು. ನಗರದಲ್ಲಿ ಸಮಾನ ಮನಸ್ಕರ ವೇದಿಕೆಯ ಕಾರ್ಯಕರ್ತರು ಪಂಜಿನ ಮೆರವಣಿಗೆ ನಡೆಸಿದರು.




