ಅತ್ಯಾಚಾರವೆಸಗಿ ಬಾಲಕಿ ಕೊಂದ ಪಾಪಿಗೆ ಕಾನೂನಿನಲ್ಲಿರುವ ಅತ್ಯಂತ ಗರಿಷ್ಟ ಶಿಕ್ಷೆ ಕೊಡಿಸಲು ಸರ್ವ ಪ್ರಯತ್ನ ಮಾಡುತ್ತೇನೆಂದು ಸಂಸದೆ ಸುಮಲತಾ ಸಂತ್ರಸ್ತ ಬಾಲಕಿ ಕುಟುಂಬಸ್ಥರಿಗೆ ಅಭಯ ನೀಡಿದರು. ಮಳವಳ್ಳಿ ಪಟ್ಟಣದಲ್ಲಿರುವ ಬಾಲಕಿಯ ಮನೆಗೆ ಇಂದು ಸಂಜೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ,ಕೊಲೆ ಮಾಡಿದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ತಿಳಿಸಿದ್ದೇನೆ. ಪಾಪಿಗೆ ಗರಿಷ್ಟ ಶಿಕ್ಷೆ ವಿಧಿಸಲು ಎಲ್ಲಾ ಪ್ರಯತ್ನ ಮಾಡುತ್ತೇನೆ ಎಂದರು. ತುಂಡು ತುಂಡಾಗಿ ಕತ್ತರಿಸಬೇಕು.
ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಪಾಪಿಗೆ ಗಲ್ಲು ಶಿಕ್ಷೆ ನೀಡುವುದು ಕಡಿಮೆಯೇ.ಇಂತಹ ನೀಚನ ಕೈಯನ್ನು ಕಟ್ಟಿಹಾಕಿ ತುಂಡು ತುಂಡಾಗಿ ಕತ್ತರಿಸಿ ಹಾಕಿದರೆ ನೆಮ್ಮದಿ ಎನಿಸುತ್ತೆ. ಆದರೆ ಕಾನೂನಿನಲ್ಲಿ ಅದಕ್ಕೆ ಅವಕಾಶವಿಲ್ಲ. ಹಾಗೆಲ್ಲಾ ಮಾಡಲು ಸಾಧ್ಯವಿಲ್ಲ.ಹಾಗಾಗಿ ಈ ಪಾಪಿಗೆ ಗಲ್ಲು ಶಿಕ್ಷೆ ಕೊಡಿಸಲು ಸೂಕ್ತ ಸಾಕ್ಷ್ಯಾಧಾರ ಕಲೆ ಹಾಕುವಂತೆ ಸರ್ಕಾರವನ್ನು ಒತ್ತಾಯಿಸುವುದಾಗಿ ತಿಳಿಸಿದರು.
ಒಬ್ಬ ಸಂಸದೆ ಎನ್ನುವುದಕ್ಕಿಂತ ಒಬ್ಬ ತಾಯಿಯಾಗಿ ಕೃತ್ಯವನ್ನು ಖಂಡಿಸುತ್ತೇನೆ.ಆರೋಪಿಯನ್ನು ನೇಣು ಹಾಕುವುದನ್ನು ಪೋಷಕರು ತಕ್ಷಣದಲ್ಲಿಯೇ ನೋಡುವಂತಾಗಬೇಕು. ಆರೋಪಿಗೆ ಪೋಕ್ಸೋ ಕಾಯ್ದೆಯಲ್ಲಿ ಕಾನೂನಿನಲ್ಲಿ ಬರುವ ಕಟ್ಟೆ ಕಡೆಯ ಶಿಕ್ಷೆಯನ್ನು ವಿಧಿಸಬೇಕೆಂದು ಈಗಾಗಲೇ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿದ್ದೇನೆ. ಪ್ರಕರಣವನ್ನು ಸುಮ್ಮನೆ ಬಿಡುವುದಿಲ್ಲ, ಆರೋಪಿಗೆ ಶಿಕ್ಷೆಯಾಗುವವರೆಗೂ ಬಾಲಕಿಯ ಕುಟುಂಬದ ಜೊತೆ ನಿಲ್ಲುವುದಾಗಿ ತಿಳಿಸಿದರು.
ಸಂಸತ್ ನಲ್ಲಿ ಮಾತನಾಡುವೆ
ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಸಂಸತ್ ನಲ್ಲಿ ಮಾತನಾಡಿ,ಇದಕ್ಕೆ ಕಡಿವಾಣ ಹಾಕಲು ಇನ್ನೂ ಕಠಿಣ ಶಿಕ್ಷೆ ವಿಧಿಸಲು ಕಾನೂನು ತರಲು ನಿರಂತರವಾಗಿ ಹೋರಾಟ
ನಡೆಸುವುದಾಗಿ ಭರವಸೆ ನೀಡಿದರು.
ಹೆಣ್ಣು ಮಕ್ಕಳು ಯಾರನ್ನು ನಂಬುವುದು ಎಂಬುವಂತಾಗಿದೆ. ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲ. ಅವರಿಗೆ ರಕ್ಷಣೆ ಸಿಗಬೇಕಿದೆ ಎಂದು ಹೇಳಿದರು.
10 ಲಕ್ಷ ಪರಿಹಾರ
ಬಾಲಕಿ ಕುಟುಂಬಕ್ಕೆ ಪರಿಹಾರ ಸಿಗಬೇಕೆಂದು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಸಿಎಂ ನನ್ನ ಮನವಿಗೆ ಸ್ಪಂದಿಸಿ 10 ಲಕ್ಷ ಪರಿಹಾರ ಕೊಟ್ಟಿದ್ದಾರೆ. ಹಣದಿಂದ ಬಾಲಕಿಯ ಕುಟುಂಬಸ್ಥರ ನೋವು ನೀಗಿಸಲು ಸಾಧ್ಯವಿಲ್ಲ. ಆದರೆ ಒಂದು ಸಣ್ಣ ಧೈರ್ಯ, ಆತ್ಮವಿಶ್ವಾಸ ಬಾಲಕಿಯ ಕುಟುಂಬಕ್ಕೆ ಸಿಗುತ್ತದೆ ಎಂದರು.
ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಅದಷ್ಟೂ ಬೇಗ ಪ್ರಕರಣದ ವಿಚಾರಣೆ ನಡೆದು ಶಿಕ್ಷೆಯಾಗುವಂತೆ ತಿಳಿಸಲಾಗಿದೆ ಎಂದರು.
ನರೇಂದ್ರ ಸ್ವಾಮಿ ಸಾಂತ್ವನ
ಸಂಸದೆ ಸುಮಲತಾ ಬಾಲಕಿ ಮನೆಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಪಿ.ಎಂ ನರೇಂದ್ರಸ್ವಾಮಿ ಕೂಡ ಬಂದು ಬಾಲಕಿಯ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಸಂಸದೆ ಸುಮಲತಾ ಹಾಗೂ ಪಿ.ಎಂ ನರೇಂದ್ರಸ್ವಾಮಿ ಅವರಿಗೆ ಕುಟುಂಬದ ಸದಸ್ಯರು ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಮುಖಂಡರಾದ ಗ್ರೇಡ್ 2 ತಹಶೀಲ್ದಾರ್ ಕುಮಾರ್, ದ್ಯಾಪೇಗೌಡ, ಕೆ.ಜೆ. ದೇವರಾಜು, ಸುಂದರ್‌ರಾಜು, ನಾಗೇಶ್, ಬಸವೇಶ್, ಸಿ.ಮಾಧು, ಲಿಂಗರಾಜು, ನಿಂಗರಾಜು, ಪುಟ್ಟಬಸವಯ್ಯ, ಸೇರಿದಂತೆ ಇತರರು ಇದ್ದರು.




